ಭೋಪಾಲ್: ಮನೆಯ ಕೊಠಡಿಯಲ್ಲೇ ಪೊಲೀಸ್ ಅಧೀಕ್ಷಕರನ್ನು ಕೂಡಿ ಹಾಕಿ ಕಳ್ಳತನ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಗರದ ಸರ್ಕಾರಿ ಕ್ವಾಟ್ರಸ್‍ನಲ್ಲಿ ನಡೆದಿದೆ.
ಶನಿವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಆಗಮಿಸಿದ್ದ 4 ಜನರ ಕಳ್ಳರ ತಂಡ ಮೊದಲು ಅಧಿಕಾರಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಮನೆಯಲ್ಲಿದ್ದ ಹಣ ಮತ್ತು ಡೆಬಿಟ್ ಕಾರ್ಡ್ ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಎಸ್ಪಿಯವರ ಚಾಣಾಕ್ಷತನದಿಂದ ಒಬ್ಬನನ್ನು ಹಿಡಿದಿದ್ದಾರೆ.
ಮನೆಯಲ್ಲಿ ರಾತ್ರಿ ಎಸ್ಪಿ ಮತ್ತು 75 ವರ್ಷದ ತಾಯಿ, ಅವರ ಮಗು ರಾಜೋರ್ ಹಾಗೂ ಬೇಸಿಗೆ ರಜೆ ನಿಮಿತ್ತ ಮನೆಗೆ ಬಂದಿದ್ದ ಎಸ್ಪಿಯವರ ತಂಗಿ ಸಂಗೀತ ನೆಕೆ(35), ಮಕ್ಕಳಾದ ಆಯುಷಿ ನೆಕೆ(15) ಮತ್ತು ಆಕೆಯ ಮಗ ಘಟನೆ ನಡೆದಾಗ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಘಟನಾ ವಿವರ:
ಶನಿವಾರ ಬೆಳಗಿನ ಜಾವ 4 ಜನರ ಕಳ್ಳರ ತಂಡ ಮನೆಯ ಕಿಟಕಿಗೆ ಅಳವಡಿಸಿದ್ದ ಜಾಲರಿಯನ್ನು ಕತ್ತರಿಸಿ ಒಳ ನುಗ್ಗಿದ್ದಾರೆ. ಒಳ ಬರುತ್ತಿದ್ದಂತೆ ಎಸ್ಪಿಯವರ ಕೊಠಡಿಯನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ. ನಂತರ ಕೊಠಡಿಯಲ್ಲಿದ್ದ ಬೀರುವಿನಲ್ಲಿ ಹುಡುಕಾಡಿದ್ದಾರೆ. ಯಾವುದೇ ಬೆಲೆಬಾಳುವ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಬ್ಯಾಗ್‍ಗಳನ್ನು ಹೊರಗೆ ಎಸೆದಿದ್ದಾರೆ. ಅಲ್ಲೇ ನೇತು ಹಾಕಿದ್ದ ಪ್ಯಾಂಟ್‍ನ ಪರ್ಸ್‍ನಲ್ಲಿನಲ್ಲಿದ್ದ ಹಣ ಮತ್ತು ಡೆಬಿಟ್ ಕಾರ್ಡ್ ಗಳನ್ನು ದೋಚಿದ್ದಾರೆ. ಪರಾರಿಯಾಗುವ ಸಂದರ್ಭದಲ್ಲಿ ಎಸ್ಪಿ ಕೈಗೆ ಒಬ್ಬ ಸೆರೆಸಿಕ್ಕಿದ್ದಾನೆ.
ಘಟನೆ ಕುರಿತು ಎಸ್ಪಿ ಸುನೀಲ್ ರಾಜೋರ್‍ರವರು, ತಮ್ಮ ಮನೆಗೆ 4 ಜನರು ನುಗ್ಗಿ, ಮನೆಯಲ್ಲಿದ್ದ ಹಣ ಮತ್ತು ಡೆಬಿಟ್ ಕಾರ್ಡ್ ಅನ್ನು ದೋಚಿದ್ದಾರೆ. ಕಳ್ಳರ ನೆರಳು ಕಂಡು ನನ್ನ ತಂಗಿ ಸುದ್ದಿ ತಿಳಿಸಿದರು, ತಾಯಿಯವರೂ ಕೂಡಲೇ ತುರ್ತು ಕಾಲಿಂಗ್ ಬೆಲ್ ಅನ್ನು ಬಾರಿಸಿದರು. ನಾನು ಸಹಾಯಕ್ಕಾಗಿ ಎದ್ದು ಹೊರಟಾಗ ಬಾಗಿಲನ್ನು ಕಳ್ಳರು ಹೊರಗಿನಿಂದ ಲಾಕ್ ಮಾಡಿದ್ದರು. ಕೂಡಲೇ ತನ್ನ ತಂಗಿಯ ಸಹಾಯದಿಂದ ಪೋನ್ ಪಡೆದು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ತಿಳಿಸಿದೆ. ಸ್ಥಳೀಯ ಯುವಕರ ನೆರವಿನಿಂದ ಒಬ್ಬನನ್ನು ಮನೆಯಲ್ಲಿಯೇ ಹಿಡಿದು ಬಂಧಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆ ಬೀಳುವ ಭಯದಿಂದ ಸಿಸಿಟಿವಿ ಕನೆಕ್ಷನ್‍ಗಳನ್ನು ಕತ್ತರಿಸಿ ಹಾಕಿದ್ದಾರೆ. ಒಟ್ಟು ನಾಲ್ಕು ಜನರ ಕಳ್ಳರ ತಂಡದಲ್ಲಿ ಇಬ್ಬರು ಮನೆಯ ಒಳಗೆ ನುಗ್ಗಿದ್ದರು. ಇಬ್ಬರು ಹೊರಗಡೆ ನಿಂತು ಕಾವಲು ಕಾಯುತ್ತಿದ್ದರು ಎಂದು ಎಸ್ಪಿಯವರು ಮಾಹಿತಿ ನೀಡಿದ್ದಾರೆ.
ಎಸ್‍ಪಿಯವರ ತಿಳಿಸಿದ ಹಿನ್ನೆಲೆಯಲ್ಲಿ 20 ನಿಮಿಷದೊಳಗೆ ಸ್ಥಳಕ್ಕೆ ಆಗಮಿಸಿ ಮನೆಯನ್ನು ಸುತ್ತುವರೆದಿದ್ದರು. ಬಂಧನಕ್ಕೆ ಒಳಗಾದ ಕಳ್ಳನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಖಾರ್ಗೋನ್ ನಿವಾಸಿ ಎಂದು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಂಗಾಂಗ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರೆಸಿದ್ದೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.