ಜಕಾರ್ತ: ಹೆಬ್ಬಾವೊಂದು ಮಹಿಳೆಯನ್ನು ನುಂಗಿದ ಘಟನೆ ಮಧ್ಯ ಇಂಡೋನೇಷ್ಯಾದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಈ ಮೂಲಕ ಪ್ರಾಂತ್ಯದಲ್ಲಿ ತಿಂಗಳೊಳಗೆ 2ನೇ ಹೆಬ್ಬಾವನ್ನು ಸಾಯಿಸಲಾಗಿದೆ.
ಮೃತಳನ್ನು ಸಿರಿಯಾತಿ (36) ಎಂದು ಗುರುತಿಸಲಾಗಿದೆ. ಈಕೆ ಮಂಗಳವಾರ ಬೆಳಗ್ಗೆ ಅನಾರೋಗ್ಯಕ್ಕೀಡಾದ ತನ್ನ ಮಗುವಿಗೆ ಔಷಧಿ ಖರೀದಿಸಲು ಮನೆಯಿಂದ ಹೊರಟು ಹೋದವರು ಬಳಿಕ ನಾಪತ್ತೆಯಾಗಿದ್ದಾರೆ. ಹೀಗಾಗಿ ಕುಟುಂಬಸ್ಥರು ಆಕೆಗಗಿ ಹುಡುಕಾಟ ಆರಂಭಿಸಿದ್ದಾರೆ.
ಸಿರಿಯಾತಿ ಪತಿ ಅಡಿಯಾನ್ಸಾ ಅವರಿಗೆ ದಕ್ಷಿಣ ಸುಲವೆಸಿ ಪ್ರಾಂತ್ಯದ ಸಿತೆಬಾ ಗ್ರಾಮದ ಅವರ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಆಕೆಯ ಚಪ್ಪಲಿ ಮತ್ತು ಪ್ಯಾಂಟ್‌ಗಳು ಸಿಕ್ಕಿವೆ. ಹೀಗೆ ಹುಡುಕಾಟ ಮುಂದುವರಿಸಿದಾಗ ಸುಮಾರು 10 ಮೀಟರ್ ದೂರದಲ್ಲಿ ಹಾವು ಪತ್ತೆಯಾಗಿದೆ. ಹಾವು ಇನ್ನೂ ಜೀವಂತವಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಹಾವನ್ನು ಸರಿಯಾಗಿ ಗಮನಿಸಿದಾಗ ಅದರ ಹೊಟ್ಟೆ ದೊಡ್ಡದಾಗಿತ್ತು. ಹೀಗಾಗಿ ಅಡಿಯಾನ್ಸಾ ಅನುಮಾನ ಬಂದಿದೆ. ಕೂಡಲೇ ಅವರು ಗ್ರಾಮದ ಮುಖ್ಯಸ್ಥನಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮದ ಮುಖ್ಯಸ್ಥ, ಗ್ರಾಮದ ಜನರ ಸಹಾಯದಿಂದ ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸಿದ್ದಾರೆ. ಈ ವೇಳೆ ಸಿರಿಯಾತಿಯ ಮೃತದೇಹ ಪತ್ತೆಯಾಗಿದೆ.
ಇಂತಹ ಘಟನೆಗಳನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಹೆಬ್ಬಾವುಗಳು ನುಂಗಿವೆ. ದಕ್ಷಿಣ ಸುಲವೇಸಿಯ ಮತ್ತೊಂದು ಜಿಲ್ಲೆಯಲ್ಲಿ ಕಳೆದ ತಿಂಗಳು ಹೆಬ್ಬಾವಿನ ಹೊಟ್ಟೆಯೊಳಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.