ಒಟ್ಟಾವಾ: ಕೆನಡಾದ ಪ್ರಧಾನಿ ಸ್ಥಾನದ ಪೈಪೋಟಿಯಲ್ಲಿ ಕರ್ನಾಟಕ ಮೂಲದ ಚಂದ್ರ ಆರ್ಯ ಅವರ ಹೆಸರು ಕೇಳಿಬಂದಿದೆ.
ಕೆನಡಾದ ಪ್ರಧಾನ ಮಂತ್ರಿ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಅವರು ಘೋಷಿಸಿದ್ದಾರೆ. ಲಿಬರಲ್ ಪಕ್ಷದ ಸಂಸದರಾಗಿರುವ ಅವರು, ದೇಶವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಪರಿವರ್ತಿಸುವ ಭರವಸೆ ನೀಡಿದ್ದಾರೆ. ಇನ್ನೂ, ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ ನಂತರ ಆಡಳಿತಾರೂಢ ಲಿಬರಲ್ ಪಕ್ಷದ ನಾಯಕ ಮತ್ತು ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಜಸ್ಟಿನ್ ಟ್ರುಡೊ ಸೋಮವಾರ ನಿರ್ಧಾರ ಪ್ರಕಟಿಸಿದ್ದರು. ಇದಾದ ಬಳಿಕ ಈ ಬೆಳವಣಿಗೆಯಾಗಿದೆ.
ಆರ್ಯ ಚಂದ್ರ ಅವರು, ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದು, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸುವುದು ಮತ್ತು ಪ್ಯಾಲೆಸ್ತೇನ್‌ನ್ನು ಒಂದು ರಾಜ್ಯವಾಗಿ ಗುರುತಿಸುವುದು ಸೇರಿದಂತೆ ಮಹತ್ವಾಕಾಂಕ್ಷೆಯ ನೀತಿ ಪ್ರಸ್ತಾಪಗಳನ್ನು ಉಮೇದುವಾರಿಕೆ ಬಳಿಕ ವಿವರಿಸಿದ್ದಾರೆ.
ಕೆನಡಾ ಪ್ರಧಾನಿ ಹುದ್ದೆಗೆ ಕನ್ನಡಿಗನ ನಾಮಪತ್ರ – ಭಾಷಣದ ಕೊನೆಯಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದ ಚಂದ್ರ ಆರ್ಯ https://t.co/V27GBo3uVG#Karnataka #ChandraArya #Canada #Tumakuru pic.twitter.com/e611Sn3l9b
— PublicTV (@publictvnews) January 17, 2025
ರಾಷ್ಟ್ರವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಲು ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ಕೆನಡಾದ ಮುಂದಿನ ಪ್ರಧಾನಿಯಾಗಲು ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.
ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಹಿತದೃಷ್ಟಿಯಿಂದ, ನಾವು ಸಂಪೂರ್ಣವಾಗಿ ಅಗತ್ಯವಾದ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಲಿಬರಲ್ ಪಕ್ಷದ ಮುಂದಿನ ನಾಯಕರಾಗಿ ಆಯ್ಕೆಯಾದರೆ, ನನ್ನ ಜ್ಞಾನ ಮತ್ತು ಪರಿಣತಿಯ ಮೇಲೆ ಉತ್ತಮ ಆಡಳಿತ ನೀಡುತ್ತೇನೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆರ್ಯ ಅವರು 2015 ರಲ್ಲಿ ಮೊದಲ ಬಾರಿಗೆ ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆಯಾದರು ಮತ್ತು 2019 ರಲ್ಲಿ ಮರು ಆಯ್ಕೆಯಾದರು. 2022 ರಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದರು. ಹಿಂದೂ ಕೆನಡಿಯನ್ನರ ಪರವಾಗಿ ವಾದಿಸುವ ವಕೀಲರಾಗಿ, ಆರ್ಯ ಆಗಾಗ ದೃಢವಾದ ನಿಲುವುಗಳನ್ನು ತೆಗೆದುಕೊಂಡಿದ್ದಾರೆ.
2024 ರಲ್ಲಿ ಸಂಸತ್ತಿನ ಹೊರಗೆ ‘ಓಂ’ ಚಿಹ್ನೆಯನ್ನು ಹೊಂದಿರುವ ಕೇಸರಿ ಧ್ವಜವನ್ನು ಹಾರಿಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹಿಂದೂ ಸಮುದಾಯ ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಅವರು ಈ ಸಂದರ್ಭವನ್ನು ಬಳಸಿಕೊಂಡಿದ್ದರು.
ತುಮಕೂರು ಮೂಲದ ಆರ್ಯ ಅವರು, ಧಾರವಾಡದಲ್ಲಿರುವ ಕೌಸಾಲಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಅವರು 20 ವರ್ಷಗಳ ಹಿಂದೆ ಒಟ್ಟಾವಾಕ್ಕೆ ತೆರಳಿದ್ದರು. ರಾಜಕೀಯ ಪ್ರವೇಶಿಸುವ ಮೊದಲು ಎಂಜಿನಿಯರ್, ಹೂಡಿಕೆ ಸಲಹೆಗಾರ ಮತ್ತು ಉದ್ಯಮಿಯಾಗಿ ಕೆಲಸ ಮಾಡಿದ್ದರು.