– ಮೈತ್ರಿ ಸರ್ಕಾರದ ಕೆಲ ಯೋಜನೆಗಳನ್ನ ಮುಂದುವರಿಸಲ್ಲ
– ಸ್ಪೀಕರ್ ನಿರ್ಧಾರ ಅನುಮಾನಾಸ್ಪದ, ಪೂರ್ವಾಗ್ರಹ ಪೀಡಿತ
ಬೆಂಗಳೂರು: ಇಂದಿರಾ ಕ್ಯಾಂಟೀನ್‍ಗಳಿಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಹೆಸರು ಬದಲಾಯಿಸುವ ನಿರ್ಧಾರದ ಸುಳಿವನ್ನು ಬಿಜೆಪಿ ಶಾಸಕ ಸಿ.ಟಿ.ರವಿ ನೀಡಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮಾತನಾಡಿದ ಶಾಸಕರು, ಮೈತ್ರಿ ಅವಧಿಯಲ್ಲಿ ಕೆಲವು ರಾಜಕೀಯ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ನಾವು ಕೂಡ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕ್ಯಾಬಿನೆಟ್ ಸಭೆಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿರ್ಧಾರ ತಗೆದುಕೊಳ್ಳಲಾಗುತ್ತದೆ. ಮೈತ್ರಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಕೈಬಿಡಲು ಬರಲ್ಲ. ಹಾಗೇ ಎಲ್ಲಾ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಈ ಸಂಬಂಧ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗೆ ನೀಡಿರುವ ಅನುದಾನದಲ್ಲಿ ತಾರತಮ್ಯವಿದೆ. ಇಂತಹ ಕೆಲವು ನಿರ್ಧಾರಗಳನ್ನು ಕೈಬಿಡಬೇಕಿದೆ. ಇವತ್ತಿಗೇ ಎಲ್ಲವೂ ಮುಗಿಲಿಲ್ಲ. ಸೋಮವಾರ ವಿಶ್ವಾಸ ಮತಯಾಚನೆಯಾದ ಬಳಿಕ ಮತ್ತೆ ಚರ್ಚೆ ಮಾಡಿಲಿದ್ದೇವೆ ಎಂದರು.
ರೆಬೆಲ್ ಶಾಸಕರನ್ನು ಅಮಾನತುಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಖಂಡಿಸಿದ ಶಾಸಕರು, ಸ್ಪೀಕರ್ ನಿರ್ಧಾರ ಅನುಮಾನಾಸ್ಪದ, ಪೂರ್ವಾಗ್ರಹ ಪೀಡಿತ. ಯಾವುದೋ ಒತ್ತಡಕ್ಕೆ ಮಣಿದು ಇಂತಹ ತೀರ್ಪು ಕೊಟ್ಟಿದ್ದಾರೆ. ಹಳೇ ಋಣ ತೀರಿಸಲು ಅಮಾನತು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ಸುಪ್ರೀಂಕೋರ್ಟ್ ಗೆ ಹೋಗಬಹುದು. ಅಲ್ಲಿಯೇ ಅಂತಿಮ ತೀರ್ಮಾನ ಬರಲಿದೆ ಎಂದು ತಿಳಿಸಿದರು.