ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 150 ಕೋಟಿ ರೂ. ಅವ್ಯವಹಾರ ನಡೆದಿದೆ, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ರಾಮದಾಸ್ ಅವರ ಹೇಳಿಕೆಗೆ ಕಾಂಗ್ರೆಸ್ಸಿನವರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಂತೂ, ಯಾವುದೇ ದಾಖಲೆಗಳಿಲ್ಲದೇ ಕಾಂಗ್ರೆಸ್ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
Advertisement
ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಮದಾಸ್ ಅವರು, ಇಂದಿರಾ ಕ್ಯಾಂಟೀನ್ ಹಗರಣದಿಂದ ಬಂದ 50 ಕೋಟಿ ರೂ. ಅನ್ನು ಎಐಸಿಸಿಗೆ ನೀಡಲಾಗಿದೆ. ಇಂದಿರಾ ಗಾಂಧಿ ಅವರು ಮಾಜಿ ಪ್ರಧಾನಿ, ಅವರ ಭಾವಚಿತ್ರವನ್ನು ಕ್ಯಾಂಟೀನ್‍ಗೆ ಬಳಕೆ ಮಾಡಿಕೊಂಡಿರುವ ಹಿಂದೆಯೂ ಹಗರಣ ನಡೆದಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಟೆಂಡರನ್ನು ದೆಹಲಿಯ ರಿವಾಸ್ ಎಂಬ ಎನ್‍ಜಿಓಗೆ ಕೊಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ರಿವಾಜ್ ಎನ್‍ಜಿಓವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೂ ಅದೇ ಎನ್‍ಜಿಓ ಟೆಂಡರ್ ಕೊಟ್ಟಿರುವಿರಿ ಎಂದು ಆರೋಪಿಸಿದರು.
Advertisement
Advertisement
ರಾಮದಾಸ್ ಇಂದಿರಾ ಕ್ಯಾಂಟೀನ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಡಿಕೆಶಿ, ಬಿಜೆಪಿಯವರಿಗೆ ಹೇಗೆ ಕೇಶವಕೃಪಾನೋ, ಹಾಗೆಯೇ ನಮಗೆ ಎಐಸಿಸಿ ದೇವಸ್ಥಾನ. ಸುಖಾಸುಮ್ಮನೆ ಎಐಸಿಸಿಗೆ ಲಂಚ ಕೊಟ್ಟಿದ್ದಾರೆ ಎಂದು ಹೇಳಿದ್ರೆ ಕೇಳಿಕೊಂಡು ಕೂರಲು ನಾವು ತಯಾರಿಲ್ಲ. ಆರೋಪ ಮಾಡೋದೇ ಆದರೆ ನೋಟಿಸ್ ಕೊಟ್ಟು ದಾಖಲೆ ಕೊಟ್ಟು ಆರೋಪ ಮಾಡಲಿ. ಯಾರೋ ಒಬ್ಬ ಲಂಚ ಹೊಡೆದು ಬಿಜೆಪಿ ಕೇಂದ್ರ ಕಚೇರಿಗೆ ಹೋಯ್ತು ಎಂದು ಆರೋಪಿಸಿದ್ರೆ ಒಪ್ಪುತ್ತೀರಾ ಎಂದು ಪ್ರಶ್ನಿಸಿದರು.
Advertisement
ಇದೇ ವೇಳೆ ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನಿಯಮಾವಳಿ ಪ್ರಕಾರ ಯಾವುದೇ ಸಂಸ್ಥೆ ಹಾಗೂ ವ್ಯಕ್ತಿ ಮೇಲೆ ದಾಖಲೆ ಇಲ್ಲದೆ ಆರೋಪ ಮಾಡುವಂತಿಲ್ಲ. ಹಾಗಾಗಿ ಆರೋಪವನ್ನು ಕಡತದಿಂದ ತೆಗೆಸಿ ಹಾಕಲು ಮುಂದಾದರು. ಇದಕ್ಕೆ ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯಾರಿಂದ ಲಂಚ ಪಡೆದ್ರು? ಎಐಸಿಸಿಗೆ 50 ಕೋಟಿ ರೂ. ಕಿಕ್ ಬ್ಯಾಕ್ ಹೇಗೆ ಹೋಯ್ತು ಎಂಬುದರ ಬಗ್ಗೆ ಸಂಪೂರ್ಣ ದಾಖಲೆಗಳಿವೆ. ದಾಖಲೆ ಕೊಡಲು ಸಿದ್ಧವಿರೋದಾಗಿ ಹೇಳಿದರು.
ಇದಕ್ಕೆ ಸಚಿವ ಕೃಷ್ಣಬೈರೇಗೌಡ, ಎಐಸಿಸಿ ಎಂದರೆ ಒಂದು ಸಂಸ್ಥೆ. ಅಧ್ಯಕ್ಷರು ಪದಾಧಿಕಾರಿಗಳು ಇದ್ದಾರೆ. ಹಾಗಾಗಿ ಎಐಸಿಸಿ ಮೇಲೆ ಆರೋಪ ಮಾಡಿದ್ರೆ ಅಧ್ಯಕ್ಷರ ಮೇಲೆ ಆರೋಪ ಮಾಡಿದಂತೆ. ನಿಯಮಾವಳಿ ಪ್ರಕಾರ ಅದಕ್ಕೆ ಅವಕಾಶವಿಲ್ಲ. ರಾಮದಾಸ್ ಅವರು ಸಭಾಧ್ಯಕ್ಷರ ಆದೇಶ ಉಲ್ಲಂಘನೆ ಮಾಡಿದ್ದಾರೆ. ಪೀಠಕ್ಕೆ ನೇರ ಸವಾಲು ಹಾಕಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು. ಆಗ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಕ್ಷೇಪಣೆ ವ್ಯಕ್ತಪಡಿಸಿ, ರಾಮದಾಸ್ ಅವರು ಯಾವುದೇ ವ್ಯಕ್ತಿಯ ವಿರುದ್ಧ ಆರೋಪಿಸಿಲ್ಲ. ಎಐಸಿಸಿ ಸಂಸ್ಥೆಯೇ ಹೊರತು ವ್ಯಕ್ತಿಯಲ್ಲ ಎಂದು ತಿರುಗೇಟು ನೀಡಿದರು.
ಇದಕ್ಕೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನಿಮ್ಮಲ್ಲಿರುವ ದಾಖಲೆಗಳನ್ನು ಕಾರ್ಯದರ್ಶಿ ಯವರಿಗೆ ಒಪ್ಪಿಸಿ, ನೊಟೀಸ್ ಕೊಟ್ಟು ಬಳಿಕ ಚರ್ಚೆಗೆ ಬನ್ನಿ ಎಂದು ಸೂಚಿಸಿದರು. ಆದರೆ ರಾಮದಾಸ್ ಇದಕ್ಕೆ ಒಪ್ಪದೆ, ಮೊದಲು ಚರ್ಚೆ ಆಗಲಿ, ನ್ಯಾಯಾಂಗ ತನಿಖೆಗೆ ಆದೇಶಿಸಿ. ಬಳಿಕ ನನ್ನ ಬಳಿ ಇರುವ ದಾಖಲೆಯನ್ನು ಸದನಕ್ಕೆ ಒಪ್ಪಿಸುತ್ತೇನೆ ಎಂದು ಪಟ್ಟು ಹಿಡಿದರು. ರಾಮದಾಸ್ ಗೆ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಸಾಥ್ ನೀಡಿದರು. ಈ ವೇಳೆ ಸದನದಲ್ಲಿ ಗದ್ದಲ, ಜಟಾಪಟಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸದನವನ್ನ ನಾಳೆಗೆ ಮುಂದೂಡಿದರು.
ಸದನ ಮುಗಿದ ಬಳಿಕವೂ ರಾಮದಾಸ್, ಡಿಕೆಶಿ ನಡುವೆ ಮಾತಿನ ಚಕಮಕಿ ನಡೆಯಿತು. ದಾಖಲೆ ಕೊಡ್ರೀ ರಾಮದಾಸ್ ಎಂದು ಡಿಕೆಶಿ ಕೇಳಿದ್ದಕ್ಕೆ, ನನ್ ಹತ್ರ ಇದೆ, ಕೊಡಬೇಕಾದ ಸಮಯ ಬಂದಾಗ ಕೊಡ್ತೀನಿ ಎಂದರು.