ಜನರಿಗೆ ಕೊಡ್ತೀವಿ ಅಂತ ಹೇಳಿ ಚರಂಡಿಗೆ ಇಂದಿರಾ ಕ್ಯಾಂಟೀನ್ ಊಟ

Public TV
3 Min Read
indira canteen 3

– ಸರ್ಕಾರದಿಂದ ತೆರಿಗೆ ಹಣ ಪೀಕಲು ತಪ್ಪು ಲೆಕ್ಕ

ಬೆಂಗಳೂರು: ಮೈತ್ರಿ ಸರ್ಕಾರದ ಮಹತ್ವಾಂಕಾಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಕೋಟಿ ಕೋಟಿ ರೂ. ಲೂಟಿಯಾಗುತ್ತಿದ್ದು, ಬಡವರ ಹೊಟ್ಟೆ ತುಂಬಿಸಬೇಕಾದ ಕೆಜಿ ಗಟ್ಟಲೆ ಆಹಾರ ವ್ಯರ್ಥವಾಗುತ್ತಿದೆ. ಆದರೆ ಇಂದಿರಾ ಕ್ಯಾಂಟೀನ್ ಉಳ್ಳವರ ಜೇಬು ತುಂಬಿಸುತ್ತಿದೆ.

ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಇಂದಿರಾ ಕ್ಯಾಂಟೀನ್ ಮುಂದುವರಿಯುವ ಬಗ್ಗೆ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿದೆ. ಈ ಮಧ್ಯೆ ಟೆಂಡರ್ ಅವಧಿ ಮುಗಿದಿದ್ದರೂ ಗುತ್ತಿಗೆದಾರರು ಮಾತ್ರ ಆಹಾರ ಪೂರೈಕೆ ಮುಂದುವರಿಸಿದ್ದಾರೆ. ನಿತ್ಯ ಲಕ್ಷಾಂತರ ಜನ ಇಂದಿರಾ ಕ್ಯಾಂಟೀನ್ ನಂಬಿದ್ದಾರೆ ಎಂದು ಲೆಕ್ಕ ಹೇಳಲಾಗುತ್ತಿದ್ದು, ಈ ಮಾಹಿತಿ ಎಷ್ಟು ಸತ್ಯ ಎಂಬ ಬಗ್ಗೆ ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಕೆಲ ಸತ್ಯಾಂಶಗಳು ಬೆಳಕಿಗೆ ಬಂದಿದೆ.

indira canteen

ಇಂದಿರಾ ಕ್ಯಾಂಟೀನ್ ನಂಬಿ ಲಕ್ಷಾಂತರ ಜನ ಊಟ ಮಾಡುತ್ತಿದ್ದಾರೆ. ರಿಯಾಯಿತಿ ದರದಲ್ಲಿ ಬಡವರಿಗೆ ಊಟ ಸಿಗುತ್ತಿದೆ. ಹಾಗೆಯೇ ಕ್ಯಾಂಟೀನ್ ಹೆಸರು ಕೋಟಿ ಕೋಟಿ ಲೂಟಿ ಮಾಡುವವರೂ ಇದ್ದಾರೆ. ಬಡವರ ಅನ್ನ ಇಂದಿರಾ ಕ್ಯಾಂಟೀನ್ ಎಷ್ಟು ಸತ್ಯವೋ, ಇಂದಿರಾ ಕ್ಯಾಂಟೀನ್ ಉಳ್ಳವರ ಜೇಬು ತುಂಬಿಸುತ್ತಿದೆ ಎಂಬುವುದು ಅಷ್ಟೇ ಸತ್ಯ.

ನಗರದ ಮೆಜೆಸ್ಟಿಕ್, ಮಾರುಕಟ್ಟೆ, ಚಿಕ್ಕಪೇಟೆ, ಶ್ರೀರಾಮಪುರ ಹೀಗೆ ಜನನಿಬಿಡ ಪ್ರದೇಶಗಳಲ್ಲಿರುವ ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸುತ್ತಿದೆ. ಮತ್ತೊಂದೆಡೆ ಸದಾಶಿವನಗರ, ವಿಜಯನಗರ, ಮಲ್ಲೇಶ್ವರಂ, ಜಯನಗರ, ಜೆಪಿನಗರ ಹೀಗೆ ಮನೆಗಳೇ ಹೆಚ್ಚಿರುವ ಜಾಗದಲ್ಲಿ ಗುತ್ತಿಗೆದಾರರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

indira canteen 1

ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಹೀಗೆ ಮೂರು ಹೊತ್ತು ಕೆಜಿ ಗಟ್ಟಲೆ ಆಹಾರ ಇಂದಿರಾ ಕ್ಯಾಂಟೀನ್‍ನಲ್ಲಿ ಉಳಿಯುತ್ತಿದೆ. ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್‍ಗಳಲ್ಲಿ ಕನಿಷ್ಟವೆಂದರೆ 100 ಜನ ಫಲಾನುಭವಿಗಳು ನಿತ್ಯ ಇರುತ್ತಾರೆ, ಹೀಗೆ ಸರ್ಕಾರಕ್ಕೆ ಕ್ಯಾಂಟೀನ್ ಗುತ್ತಿಗೆ ಪಡೆದಿರುವ ಶೆಫ್‍ಟಾಕ್, ರಿವಾರ್ಡ್ ಲೆಕ್ಕ ನೀಡುತ್ತಿದೆ. ಆದರೆ ತಿನ್ನುವವರು ಒಬ್ಬರಾದರೆ ಡಸ್ಟ್ ಬಿನ್‍ಗೆ ಚೆಲ್ಲುವ ಊಟದ ಲೆಕ್ಕ ಹತ್ತರಂತಿದೆ.

ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ನೋಡಿ ಜನ ಒಬ್ಬರ ಮೇಲೆ ಒಬ್ಬರು ಪೈಪೋಟಿಯಲ್ಲಿ ಊಟ ತೆಗೆದುಕೊಳ್ಳುತ್ತಾರೆ. ಇಲ್ಲಿ ಊಟ ಉಳಿಯುವ ಪ್ರಮಾಣ ಕಡಿಮೆ. ಆದರೆ ಸದಾಶಿವನಗರ ಇಂದಿರಾ ಕ್ಯಾಂಟೀನ್ ನಲ್ಲಿ ಜನರ ಸಂಖ್ಯೆ ಕಡಿಮೆ. ಇಲ್ಲಿ ಕೆಜಿಗಟ್ಟಲೆ ಊಟ ಉಳಿಯುತ್ತೆ. ಅದನ್ನು ಮತ್ತೆ ತಮ್ಮ ಅಡುಗೆ ಮನೆಗಳಿಗೆ ವಾಪಸ್ ಕಳುಹಿಸುತ್ತಾರೆ. ಆದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರದೇಶಗಳ ಕ್ಯಾಂಟೀನ್ ಬಳಿ ಊಟ ಸಿಗುವುದೇ ಕಷ್ಟಸಾಧ್ಯವಾಗಿದೆ.

indira canteen 2

ನಗರದ ಎಸ್.ಬಿ.ರೋಡ್‍ನಲ್ಲಿರುವ ಅಡುಗೆ ಮನೆಯಲ್ಲಿರುವ ನೀಲಿ ಬಣ್ಣದ ಡ್ರಮ್‍ನಲ್ಲಿ ರಾಶಿ ರಾಶಿ ಅನ್ನ ಚರಂಡಿ ಸೇರುತ್ತಿದೆ. ಈ ದೃಶ್ಯಗಳು ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಿಬ್ಬಂದಿಗೆ ಸುಳಿವು ಸಿಕ್ಕೊಡನೆ ಅಡುಗೆ ಮನೆ ಬಾಗಿಲನ್ನು ಸಿಬ್ಬಂದಿ ಹಾಕಿಕೊಂಡರು. ಅಲ್ಲದೇ ತಮ್ಮ ಕಂಪನಿ ವಾಹನ ಬಿಟ್ಟು ಬೇರೆ ಖಾಸಗಿ ವಾಹನದಲ್ಲಿ ಊಟವನ್ನು ಸಾಗಿಸುತ್ತಿದ್ದು, ಮತ್ತಷ್ಟು ಅನುಮಾನಗಳಿಗೆ ಕಾರಣವಾಯಿತು.

ಇಂದಿರಾ ಕ್ಯಾಂಟೀನ್ ಊಟದ ಲೆಕ್ಕ: ವರ್ಷಕ್ಕೆ ಇಂದಿರಾ ಕ್ಯಾಂಟೀನ್‍ಗಾಗಿ 135 ಕೋಟಿ ರೂ ವೆಚ್ಚ ಮಾಡಲಾಗುತ್ತಿದ್ದು, ಪ್ರತಿ ದಿನ ಒಬ್ಬ ಮನುಷ್ಯನ ಊಟಕ್ಕೆ 58 ರೂ. ವೆಚ್ಚವಾಗುತ್ತಿದೆ. ಗ್ರಾಹಕರಿಂದ 25 ರೂ. ಪಡೆದರೆ ಉಳಿ 33 ರೂ.ಗಳನ್ನು ಸರ್ಕಾರ ನೀಡುತ್ತಿದೆ. ಒಂದು ಕ್ಯಾಂಟೀನ್‍ನಲ್ಲಿ ಕನಿಷ್ಠ 1 ಸಾವಿರ ಊಟ ಮಾಡುತ್ತರಂತೆ. ಇದರ ಅನ್ವಯ ನಿತ್ಯ 191 ಕ್ಯಾಂಟೀನ್ ಗಳಲ್ಲಿ 1.91 ಲಕ್ಷ ಜನ ಊಟ ಮಾಡ್ತಾರಂತೆ.

indira canteen 5

ನಂಬರ್ ಲೆಕ್ಕ ಇಲ್ಲದೇ ಗುಣಮಟ್ಟ ಹೆಚ್ಚಿಸಿದರೆ ಜನರಿಗೆ ರಿಯಾಯಿತಿ ದರದಲ್ಲಿ ಉತ್ತಮ ಊಟ ಲಭಿಸಲಿದೆ. ಅಷ್ಟೇ ಅಲ್ಲದೇ ಪ್ಲೇಟ್ ಲೆಕ್ಕ ಹೇಳಿ ಅನ್ನವನ್ನು ಮೋರಿ ಪಾಲು ಮಾಡುತ್ತಿದ್ದಾರೆ. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈಗಲಾದರೂ ಬಡಜನರ ಹೆಸರಿನಲ್ಲಿ ನಡೆಯುತ್ತಿರುವ ವೆಚ್ಚದ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ನಿಗಾ ವಹಿಸಿ ಸೋರಿಕೆ ತಡೆಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *