ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮ ಇಂದಿರಾ ಕ್ಯಾಂಟೀನ್ ಮೇಲೆ ಯಡಿಯೂರಪ್ಪ ಸರ್ಕಾರಕ್ಕೆ ಕಣ್ಣು. ಈ ಹಿಂದೆ ಇಂದಿರಾ ಕ್ಯಾಂಟೀನ್ ತೆಗೆದುಬಿಡ್ತಾರೆ ಅನ್ನೋದು ಬಹುದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಇಂದಿರಾ ಹೆಸರು ಬದಲಾಯಿಸಲು ಸರ್ಕಾರ ಚಿಂತಿಸಿದೆ.
Advertisement
ಕಂದಾಯ ಸಚಿವ ಆರ್.ಅಶೋಕ್ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದೆಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಮುನ್ಸೂಚನೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಇಂದಿರಾಕ್ಯಾಂಟೀನ್ ಹೆಸರು ಬದಲಾಯಿಸಿ “ಮಹರ್ಷಿ ವಾಲ್ಮೀಕಿ ಅನ್ನ ಕುಟೀರ” ಎಂದು ಪುನರ್ ನಾಮಕರಣ ಮಾಡಲು ಮಾಜಿ ಸಚಿವ ರಾಜೂಗೌಡರು ಮನವಿ ಮಾಡಿದ್ದಾರೆ. ಶಾಸಕ ರಾಜೂಗೌಡರ ಮನವಿಯನ್ನು ಮನವಿ ಪರಿಶೀಲನೆ ನಡೆಸಿದ್ದೇವೆ. ಮುಂದೆ ಸಿಎಂ ಜತೆ ಚರ್ಚಿಸಿ ಬೆಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ಸ್ಥಳಗಳಲ್ಲಿ ಹೆಸರು ಬದಲಾವಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲ ಆಹಾರ ಸರಬರಾಜು ವಿಷಯದಲ್ಲೂ ದೂರುಗಳಿದ್ದು, ಅದರಲ್ಲೂ ಆಮೂಲಾಗ್ರ ಬದಲಾವಣೆ ಮಾಡಲಾಗುತ್ತದೆ ಎಂದಿದ್ದಾರೆ.
Advertisement
Advertisement
ಇಂದಿರಾ ಹೆಸರು ಬದಲಾಯಿಸುವ ಬಿಜೆಪಿ ಸರ್ಕಾರದ ಚಿಂತನೆಗೆ ಕಾಂಗ್ರೆಸ್ ವ್ಯಾಪಕ ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆಯೂ ಕ್ಯಾಂಟೀನ್ ಸ್ಥಗಿತಗೊಳಿಸುವ ಚಿಂತನೆಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಮೇಲೆ ಮುಗಿಬಿದ್ದಿದ್ರು. ಆಗ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಲ್ಲ, ಮುಂದುವರಿಸುತ್ತೇವೆ ಎಂದಿದ್ರು. ಈಗಲೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಬಹುದೊಡ್ಡ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.