ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಫರ್ಧೆ ಮಾಡಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಬಿಗ್ ಶಾಕ್ ಕೊಟ್ಟಿದೆ. ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಫರ್ಧಿಸಲು ಇಚ್ಚಿಸಿರುವ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಸುವವರೆಗೂ ಯಾವುದೇ ಸಭೆ-ಸಮಾರಂಭ ನಡೆಸಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಡಾ ಎಂ ಸಿ ಸುಧಾಕರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದು, ಚುನಾವಣಾ ಪ್ರಚಾರ ನಡೆಸಲು ಅನುಮತಿ ಕೋರಿದ್ದಾರೆ. ಆದರೆ ಇದಕ್ಕೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮುಖ್ಯ ಚುನಾವಣಾಧಿಕಾರಿ, ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವವರೆಗೂ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಲು ಅವಕಾಶವಿಲ್ಲ ಅಂತ ಹಿಂಬರಹ ನೀಡಿದ್ದಾರೆ. ಹೀಗಾಗಿ ಸಹಜವಾಗಿ ಆಯೋಗದ ಇಬ್ಬಗೆಯ ನೀತಿ ವಿರುದ್ಧ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಆದರೆ ಪಕ್ಷದ ಆಭ್ಯರ್ಥಿಗಳು ತಮ್ಮ ಪಕ್ಷದ ಹೆಸರಲ್ಲಿ ಸಭೆ ಸಮಾರಂಭ ನಡೆಸಿ, ಪ್ರಚಾರ ನಡೆಸಬಹುದಾಗಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳಿಗೊಂದು ನೀತಿ, ಪಕ್ಷೇತರ ಸ್ವತಂತ್ರ ಅಭ್ಯರ್ಥಿಗಳಿಗೊಂದು ನೀತಿ ಎಂಬಂತೆ, ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಇಟ್ಟಂತಿದೆ ಚುನಾವಣಾ ಆಯೋಗದ ನೀತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಏನು ಹೇಳುತ್ತೆ ಆಯೋಗ?
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾರೊಬ್ಬರು ವ್ಯಕ್ತಿ ಪರವಾಗಿ ಚುನಾವಣಾ ಪ್ರಚಾರ ಸಂಬಂಧದ ಸಭೆ-ಸಮಾವೇಶ ನಡೆಸುವಂತಿಲ್ಲ. ನಾಮಪತ್ರ ಸಲ್ಲಿಕೆಯಾಗುವವರೆಗೂ ಅಭ್ಯರ್ಥಿಗಳ ಹೆಸರು ಅಂತಿಮ ಕೂಡ ಆಗುವುದಿಲ್ಲ ಎನ್ನುವುದು ಆಯೋಗದ ಸಮರ್ಥನೆ. ಹೀಗಾಗಿ ಯಾರೊಬ್ಬರು ತನಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುವಂತಿಲ್ಲ. ಆದರೆ, ಪಕ್ಷಗಳ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ, ಪಕ್ಷದ ಪರ ಮಾತ್ರವೇ ಪ್ರಚಾರ ನಡೆಸಬೇಕು. ನಾಮಪತ್ರ ಸಲ್ಲಿಕೆಯಾದ ಬಳಿಕ ಅಭ್ಯರ್ಥಿಗಳು ತಮ್ಮ ಪರವಾಗಿ ಸಭೆ ಸಮಾವೇಶಗಳನ್ನ ನಡೆಸಬಹುದಾಗಿದೆ ಎನ್ನುತ್ತಿದೆ ಚುನಾವಣಾ ಆಯೋಗ.
Advertisement
ಪಕ್ಷೇತರ ಅಭ್ಯರ್ಥಿಗಳ ವಾದ ಏನು?
ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಬಹುತೇಕರಿಗೆ ಈಗಾಗಲೇ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ ಪಕ್ಷಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಸಭೆ ಸಮಾರಂಭ, ಸಮಾವೇಶಗಳನ್ನ ಮಾಡುವ ಮೂಲಕ ಪರೋಕ್ಷವಾಗಿ ಮತ ಯಾಚಿಸುತ್ತಿದ್ದಾರೆ. ಕೆಲವೊಮ್ಮೆ ಇಂತಹವರನ್ನೇ ಗೆಲ್ಲಿಸಿ, ಎಂದು ಬಹಿರಂಗವಾಗಿಯೇ ಹೇಳಿರುವ ನಿದರ್ಶನಗಳು ಕೂಡ ಇವೆ. ಇದೆಲ್ಲ ಚುನಾವಣಾ ಆಯೋಗಕ್ಕೆ ಕಾಣುತ್ತಿಲ್ಲವೇ? ಪಕ್ಷೇತರರಾದ ನಾವು ಚುನಾವಣೆಗೆ ಸ್ಫರ್ಧಿಸಲು ತೀರ್ಮಾನಿಸಿದ್ದರೂ, ನಮ್ಮ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲು ಕಾರಣವೇನು? ಪಕ್ಷಗಳಿಗೊಂದು, ಪಕ್ಷೇತರರಿಗೊಂದು ನ್ಯಾಯ ಮಾಡುತ್ತಿರುವುದು ಸರಿಯಲ್ಲ. ಪಾರ್ಟಿ ಫಂಡ್ ಹೆಸರಿನಲ್ಲಿ ಕೃಷ್ಣನ ಲೆಕ್ಕ ತೋರಿಸಿ, ಪಕ್ಷದಡಿ ಸ್ಫರ್ಧಿಸಲು ಮುಂದಾಗಿರುವ ಸ್ವಯಂ ಘೋಷಿತ ಅಭ್ಯರ್ಥಿಗಳು ಸುಲಭವಾಗಿ ಆಯೋಗದ ಮುಷ್ಟಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನದ ಮಾತುಗಳು ಪಕ್ಷೇತರರಿಂದ ಕೇಳಿಬರುತ್ತಿವೆ.
Advertisement
23 ದಿನಗಳಲ್ಲಿ ಪ್ರಚಾರ ಸಾಧ್ಯವೇ?
ನಾಮಪತ್ರ ಸಲ್ಲಿಕೆಗೆ ಏ.17ರಿಂದ 24ರವರೆಗೂ ಅವಕಾಶ ನೀಡಿದ್ದು. ಬಹಿರಂಗ ಪ್ರಚಾರ ಮೇ.10 ಕಡೆದಿನ. ಹೀಗಾಗಿ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ನಾಮಪತ್ರ ಸಲ್ಲಿಸಿದರೂ, ಬಹಿರಂಗ ಪ್ರಚಾರಕ್ಕೆ ಕೇವಲ 23 ದಿನಗಳು ಮಾತ್ರವೇ ಉಳಿದುಕೊಳ್ಳಲಿದೆ. ಹೀಗಾಗಿ ಇಷ್ಟು ಕಡಿಮೆ ದಿನಗಳ ಅಂತರದಲ್ಲಿ ಪಕ್ಷೇತರರ ಪ್ರಚಾರ ಸಾಧ್ಯವೇ ಇಲ್ಲ. ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ 28 ಲಕ್ಷದೊಳಗೆ ಖರ್ಚು ಮಾಡಬೇಕಿದೆ. ಇದಕ್ಕೂ ಮೊದಲೇ ಪಕ್ಷದಿಂದ ನಿಲ್ಲುವವರು ಪಕ್ಷದ ಹೆಸರಿನಲ್ಲಿ ಮಾಡಿರುವ ಖರ್ಚಿಗೆ ಲೆಕ್ಕ ಕೇಳುವಂತಿಲ್ಲ ಎಂಬ ಪ್ರಶ್ನೆಗಳು ಪಕ್ಷೇತರರಲ್ಲಿ ಕಾಡುತ್ತಿವೆ. ಇದೆಲ್ಲದರ ನಡುವೆ ಪಕ್ಷದಿಂದ ಸ್ಫರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನೀತಿಗಳು ಅನುಕೂಲಕರವಾಗಿದ್ದು, ಪಕ್ಷೇತರರಾಗಿ ಅನಾನುಕೂಲಕರವಾಗಿವೆ ಅಂತ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ ಪಕ್ಷೇತರರು.