ಬೆಂಗಳೂರು: ವಿಮಾನಯಾನದ ಇತಿಹಾಸದಲ್ಲೇ ದೇಶದಲ್ಲಿ ಕಂಡು ಕೇಳರಿಯದಂತಹ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇಂಡಿಗೋ ವಿಮಾನಗಳ ಬೃಹತ್ ರದ್ದತಿಯಿಂದ ದೇಶಾದ್ಯಾಂತ ಪ್ರಯಾಣಿಕರ ಪರದಾಟ ಮುಂದುವರೆದಿದೆ.
ಭಾರತದ ಅತೀ ದೊಡ್ಡ ವಿಮಾನಯಾನ ಸಂಸ್ಥೆಯಾಗಿರೋ ಇಂಡಿಗೋ ನಡೆಯಿಂದ ಇಡೀ ದೇಶದಲ್ಲಿ ಸಮಸ್ಯೆಗಳ ಸರಮಾಲೆ ಮುಂದುವರೆದಿದೆ. ಕಳೆದ 5 ದಿನಗಳಿಂದಲೂ ಇಂಡಿಗೋ ವಿಮಾನಗಳ ಬೃಹತ್ ರದ್ದತಿಯಿಂದ ದೇಶಾದ್ಯಂತ ಪ್ರಯಾಣಿಕರು ಪರದಾಡುತ್ತಲೇ ಇದ್ದು, 6ನೇ ದಿನವೂ ಕೂಡ ವಿಮಾನಗಳ ರದ್ದತಿ ಮುಂದುವರಿದಿದೆ. ಡಿ.7ರಂದು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 50ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ.ಇದನ್ನೂ ಓದಿ: ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ – 5ನೇ ದಿನವೂ ಪ್ರಯಾಣಿಕರ ಪರದಾಟ
ಈಗಾಗಲೇ ಡಿಜಿಸಿಎ ಇಂಡಿಗೋ ಸಿಇಓಗೆ ಶೋಕಾಸ್ ನೋಟಿಸ್ ನೀಡಿದ್ದು, ವಿಮಾನಗಳು ಏಕಾಏಕಿ ರದ್ದಾಗೋಕೆ ಕಾರಣ, ಪ್ರಯಾಣಿಕರಿಗೆ ತೊಂದರೆಯಾಗಲು ಕಾರಣ ಏನು ಎಂದು ಕೇಳಿದ್ದು, ಮುಂದಿನ 24 ಗಂಟೆಯೊಳಗೆ ಉತ್ತರಿಸುವಂತೆ ತಿಳಿಸಿದೆ.
ಕೆಂಪೇಗೌಡ ಏರ್‌ಪೋರ್ಟ್ನಿಂದ ದೇಶದ ವಿವಿಧೆಡೆಗೆ ತೆರಳಬೇಕಿದ್ದ 49ಕ್ಕೂ ಹೆಚ್ಚು ವಿಮಾನಗಳ ಹಾರಾಟ ಬಂದ್ ಆಗಿದೆ. ಇದರಿಂದ ಮೊದಲೇ ಪ್ರೀ-ಪ್ಲ್ಯಾನ್ ಮಾಡಿಕೊಂಡು ಪ್ರಯಾಣಕ್ಕೆ ಅಂತ ಏರ್‌ಪೋರ್ಟ್‌ಗೆ ಬಂದ ಪ್ರಯಾಣಿಕರು ಗಂಟೆಗಟ್ಟಲೇ ವಿಮಾನಗಳಿಗಾಗಿ ಕಾದು, ಕೊನೆಗೂ ವಿಮಾನ ಸಿಗದೆ ಮನೆಗೆ ವಾಪಸ್ ಆಗುವಂತಾಗಿದೆ.
ಇನ್ನು ಬೆಳಗಾವಿಯಿಂದ ವಿಮಾನದ ಮೂಲಕವೇ ಬೆಂಗಳೂರಿಗೆ ಪುಟ್ಟ ಮಗನೊಂದಿಗೆ ಬಂದ ತಾಯಿಯೊಬ್ಬರು ಗುವಾಹಟಿಗೆ ತೆರಳಲು ಇಡೀ ದಿನ ಏರ್‌ಪೋರ್ಟ್‌ನಲ್ಲೇ ಕಾಲ ಕಳೆದಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ಕಾದರೂ ವಿಮಾನ ಸಿಕ್ಕಿಲ್ಲ, ಹೀಗಾಗಿ ಒಂದೂವರೆ ವರ್ಷದ ಮಗನೊಂದಿಗೆ ಅತ್ತ ಮನೆಗೂ ವಾಪಸ್ ಹೋಗಲಾಗದೆ ಏರ್‌ಪೋರ್ಟ್‌ನಲ್ಲೇ ಇರಲೂ ಆಗದೆ ನರಕಯಾತನೆ ಅನುಭವಿಸಿದ್ದಾರೆ.
ಇತ್ತ ಶಬರಿಮಲೆ ಅಯ್ಯಪ್ಪನ ಭಕ್ತರು ಸಹ ಪಡಬಾರದ ಪಡಿಪಾಟಲು ಪಟ್ಟಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಬೆಂಗಳೂರಿನಿಂದ ಕೊಚ್ಚಿಗೆ ವಿಮಾನ ಬುಕ್ ಮಾಡಿರೋ ಅಯ್ಯಪ್ಪನ ಭಕ್ತರಿಗೆ ವಿಮಾನ ರದ್ದಾಗಿರೋದು ಬೇಸರ ತರಿಸಿದೆ. ತಲೆಯ ಮೇಲೆ ಈರಮುಡಿ ಹೊತ್ತು ಅಂದುಕೊಂಡ ಸಮಯಕ್ಕೆ ದೇವರ ದರ್ಶನ ಮಾಡಲು ಆಗುತ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.ಇದನ್ನೂ ಓದಿ: ಇಂಡಿಗೋ ಸಮಸ್ಯೆ – ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಂದೆಯ ಅಸ್ಥಿ ಹಿಡಿದು ಮಗಳ ಪರದಾಟ

