ಹುಬ್ಬಳ್ಳಿ: ಇಂಡಿಗೋ ವಿಮಾನ (IndiGo Flight) ಹಾರಾಟ ವ್ಯತ್ಯಯದಿಂದ ನವದಂಪತಿ ಆನ್‍ಲೈನ್ ಮೂಲಕವೇ ಆರತಕ್ಷತೆಯಲ್ಲಿ ಭಾಗಿಯಾಗಿರುವುದು ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.
ಇಂಡಿಗೋ ವಿಮಾನಗಳಲ್ಲಿ ಪೈಲಟ್‍ಗಳ ಕೊರತೆ ಹಿನ್ನೆಲೆ, ದೇಶದ್ಯಾಂತ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರ ಬಿಸಿ ಹುಬ್ಬಳ್ಳಿ ವಧು-ವರರಿಗೆ ತಟ್ಟಿದೆ. ವಿಮಾನ ರದ್ದುಗೊಳಿಸಿದ ಪರಿಣಾಮ ಹುಬ್ಬಳ್ಳಿಯಲ್ಲಿ ನಡೆಯಬೇಕಾಗಿದ್ದ ಆರತಕ್ಷತೆಗೆ ನವದಂಪತಿಗಳೇ ಬರಲು ಸಾಧ್ಯವಾಗಿಲ್ಲ. ಇದರಿಂದ ವಧು-ವರರೇ ಇಲ್ಲದೇ ಆರತಕ್ಷತೆ ನಡೆದಿದೆ. ಇದನ್ನೂ ಓದಿ: ಇಂಡಿಗೋ ಸಮಸ್ಯೆ – ಪೈಲಟ್ ರಜೆ ನಿಯಮಗಳನ್ನು ಸಡಿಲಿಸಿದ DGCA
ಬೆಂಗಳೂರಿನಲ್ಲಿ (Bengaluru) ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿರುವ (Techie) ಹುಬ್ಬಳ್ಳಿಯ ಮೂಲದ ಮೇಧಾ ಕ್ಷೀರಸಾಗರ ಹಾಗೂ ಓಡಿಸ್ಸಾ ಭುವನೇಶ್ವರದ ಸಂಗಮ ದಾಸ್ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ, ನ.23 ರಂದು ಭುವನೇಶ್ವರದಲ್ಲಿ ಮದುವೆಯಾಗಿದ್ದರು. ಡಿ.03 ರಂದು ಹುಬ್ಬಳ್ಳಿ ಗುಜರಾತ್ ಭವನದಲ್ಲಿ ಆರತಕ್ಷತೆ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಭುವನೇಶ್ವರದಿಂದ ಬೆಂಗಳೂರಿಗೆ, ಅಲ್ಲಿಂದ ಹುಬ್ಬಳ್ಳಿಗೆ ಬರಲು ಗಂಡ-ಹೆಂಡತಿ, ಅತ್ತೆ, ಮಾವ ಡಿ.2ಕ್ಕೆ ವಿಮಾನ ಬುಕ್ ಮಾಡಿದ್ದರು. ಇನ್ನೂ ಕೆಲ ಸಂಬಂಧಿಕರಿಗೆ ಭುವನೇಶ್ವರದಿಂದ ಮುಂಬೈ, ಅಲ್ಲಿಂದ ಹುಬ್ಬಳ್ಳಿಗೆ ವಿಮಾನ ಟಿಕೆಟ್ ಬುಕ್ ಆಗಿತ್ತು. ಡಿ.2ರ ಬೆಳಗ್ಗೆ 9ರಿಂದ ಮರುದಿನ (ಡಿ.3) ಬೆಳಗಿನ ಜಾವ 4-5ರವರೆಗೂ ವಿಮಾನ ವಿಳಂಬವಾಗಿ, ಏಕಾಏಕಿ 3 ರಂದು ಬೆಳಗ್ಗೆ ವಿಮಾನ ರದ್ದಾಗಿದೆ. ಇದರಿಂದ ವಧು-ವರರು ಸಕಾಲದಲ್ಲಿ ಹುಬ್ಬಳ್ಳಿ ಬರಲಾಗಿಲ್ಲ. ಹೀಗಾಗಿ ಇತ್ತ ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತು, ಶಾಸ್ತ್ರ ನಡೆಸಿದ್ದಾರೆ. ಅತ್ತ ಆನ್‍ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಧು – ವರ ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ.
ಇಂಡಿಗೋ ವಿಮಾನ ಸಂಸ್ಥೆ ವಿರುದ್ಧ ವಧು ಮೇಧಾ ಪೋಷಕರ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಆರತಕ್ಷತೆಗಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದೆವು, ಭುವನೇಶ್ವರದಿಂದ ವಧು-ವರರು ಬರಬೇಕಿತ್ತು. ಇಂಡಿಗೋ ವಿಮಾನ ಕೈಕೊಟ್ಟಿದ್ದರಿಂದ ಇಬ್ಬರು ಬರಲು ಆಗಲಿಲ್ಲ. ಅವರ ನಿರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಜನ ಕಾಯುತ್ತಿದ್ದೆವು. ಕೊನೆಗೆ ಆನ್ಲೈನ್ ನಲ್ಲಿ ಆರತಕ್ಷತೆ ಮಾಡಿದೆವು ಎಂದಿದ್ದಾರೆ. ಇದನ್ನೂ ಓದಿ: 1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು – ಫೆಬ್ರವರಿ ವೇಳೆಗೆ ಸಮಸ್ಯೆಗೆ ಪರಿಹಾರ ಎಂದ ಇಂಡಿಗೋ

