ಮಂಡ್ಯ: ಇಂಡಿಕಾ ಕಾರು ಮತ್ತು ಕೆಎಸ್‍ಆರ್‍ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನೊಳಗಿದ್ದ ಓರ್ವ ಮೃತಪಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಬೂಸೇಗೌಡನದೊಡ್ಡಿ ಬಳಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಮದ್ದೂರು ತಾಲೂಕಿನ ಅಂಗರಲಿಂಗನದೊಡ್ಡಿಯ 31 ವರ್ಷದ ಸೋಮೇಶ್ ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರವಾಗಿ ಗಾಯವಾಗಿದೆ.
ಗುರುವಾರ ತಡರಾತ್ರಿ ವೇಗವಾಗಿ ಬಂದ ಕಾರು ಹಾಗೂ ಬಸ್ ಬೂಸೇಗೌಡನದೊಡ್ಡಿ ಬಳಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನೊಳಗಿದ್ದ ಸೋಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮತ್ತೊರ್ವ ಮನೋಹರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.