ಚೆನ್ನೈ: ಎರಡು ವರ್ಷದ ಪುಟ್ಟ ಬಾಲಕ ಇನ್ನೋರ್ವ ಪುಟ್ಟ ಬಾಲಕನಿಗೆ ಹೃದಯದಾನ ಮಾಡಿ ತನ್ನ ಸಾವಿನಲ್ಲೂ ಇನ್ನೊಂದು ಜೀವಕ್ಕೆ ಆಸರೆಯಾಗಿ ಸಾರ್ಥಕತೆ ಮೆರೆದಿದ್ದಾನೆ.
ಎರಡು ವರ್ಷದ ಬಾಲಕನಿಗೆ ಹೃದಯ ಕಸಿ ಮಾಡುವ ಮೂಲಕ ಚೆನ್ನೈನ ಫೋರ್ಟಿಸ್ ಮಲರ್ ಆಸ್ಪತ್ರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಈ ಬಾಲಕನಿಗೆ ಹೃದಯದಾನ ಮಾಡಿದ ಬಾಲಕ ಭಾರತದ ಅತಿ ಕಿರಿಯ ಹೃದಯ ದಾನಿ ಎಂಬ ಖ್ಯಾತಿಗೂ ಪಾತ್ರನಾಗಿದ್ದಾನೆ.
ಚೆನ್ನೈನ ಫೋರ್ಟಿಸ್ ಮಲರ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದ್ದು, 2 ವರ್ಷದ ಬಾಲಕನಿಗೆ ಅಷ್ಟೇ ವರ್ಷದ ಬಾಲಕನ ಹೃದಯವನ್ನು ಕಸಿ ಮಾಡಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಜೀವ ಉಳಿಸಲು ಹೃದಯ ಕಸಿ ಮಾಡಲೇಬೇಕಾಗಿತ್ತು. ಈ ವೇಳೆ ಫೆ.10 ರಂದು ಮೆದುಳು ಹಾನಿಗೆ ಒಳಗಾಗಿದ್ದ ಮುಂಬೈನ ಎರಡು ವರ್ಷದ ಬಾಲಕನ ಹೃದಯವನ್ನು ಏರ್ ಲಿಫ್ಟ್ ಮೂಲಕ ತಂದು ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಒಂದು ಪುಟ್ಟ ಜೀವಕ್ಕೆ ಪುನರ್ಜನ್ಮ ನೀಡಿದ್ದಾರೆ.
ಕಾರ್ಡಿಕ್ ಸೈನ್ಸಸ್, ಫೋರ್ಟಿಸ್ ಮಲಾರ್ ಆಸ್ಪತ್ರೆಯ ನಿರ್ದೇಶಕ ಡಾ.ಆರ್.ಆರ್. ಬಾಲಕೃಷ್ಣನ್ ಮತ್ತು ಡಿಪಾಟ್ರ್ಮೆಂಟ್ ಮುಖ್ಯಸ್ಥ ಡಾ. ಸುರೇಶ್ ರಾವ್ ಕೆ.ಜಿ., ಕ್ರಿಟಿಕಲ್ ಕೇರ್ ಮತ್ತು ಕಾರ್ಡಿಯಾಕ್ ಅನಸ್ತೇಶಿಯ ನೇತೃತ್ವದ ವೈದ್ಯರ ತಂಡವು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಅಲ್ಲದೇ ಶಿಶುವೈದ್ಯ ಹೃದಯ ರೋಗಿಗಳ ಚಿಕಿತ್ಸೆಯಲ್ಲಿ ಈ ಶಸ್ತ್ರಚಿಕಿತ್ಸೆ ಮತ್ತೊಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು ಎಂದು ವೈದ್ಯರು ಬಣ್ಣಿಸಿದ್ದಾರೆ.
ಈ ಮುಂಬೈ ಬಾಲಕನ ಹೃದಯ ಮಾತ್ರವಲ್ಲದೇ ಇತರೇ ಅಂಗಾಂಗಗಳನ್ನು ಕೂಡ ಪೋಷಕರು ದಾನ ಮಾಡಿದ್ದಾರೆ. ಈ ಮೂಲಕ ಒಟ್ಟು ಆರು ಜೀವಕ್ಕೆ ಈ ಬಾಲಕ ಪುನರ್ಜನ್ಮ ನೀಡಿ, ತಾನೂ ಭೂಮಿ ಮೇಲೆ ಇಲ್ಲದಿದ್ದರೂ ಇನ್ನೊಂದು ಜೀವಕ್ಕೆ ಆಧಾರವಾಗಿ ಜೀವನಕ್ಕೆ ಬೆಳಕಾಗಿದ್ದಾನೆ.