ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

Public TV
2 Min Read
Indias successful test of hypersonic missile puts it among elite group APJ Abdul Kalam DRDO

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಶನಿವಾರ ಒಡಿಶಾದ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ (APJ Abdul Kalam) ದ್ವೀಪದಲ್ಲಿ ದೀರ್ಘ-ಶ್ರೇಣಿಯ ಹೈಪರ್‌ಸಾನಿಕ್ ಕ್ಷಿಪಣಿ (Hypersonic missile) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

DRDO ಪರೀಕ್ಷಿಸಿದ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಸೇವೆಗಳಿಗಾಗಿ 1,500 ಕಿಮೀಗಿಂತ ಹೆಚ್ಚಿನ ವ್ಯಾಪ್ತಿಯ ವಿವಿಧ ಸಿಡಿತಲೆಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಚೀನಾ, ರಷ್ಯಾ, ಅಮೆರಿಕ ಈಗಾಗಲೇ ಹೈಪರ್‌ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ್ದು ಈ ಪಟ್ಟಿಗೆ ಈಗ ಭಾರತ ಸೇರ್ಪಡೆಯಾಗಿದೆ.

 

ಕ್ಷಿಪಣಿಯನ್ನು ಹೈದರಾಬಾದ್‌ನ ಡಾ ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಪ್ರಯೋಗಾಲಯ,  ಇತರ ಡಿಆರ್‌ಡಿಒ ಪ್ರಯೋಗಾಲಯಗಳು ಮತ್ತು ಇತ ಉದ್ಯಮ ಪಾಲುದಾರರಿಂದ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. DRDO ಮತ್ತು ಸಶಸ್ತ್ರ ಪಡೆಗಳ ಹಿರಿಯ ವಿಜ್ಞಾನಿಗಳ ಸಮ್ಮುಖದಲ್ಲಿ ಪ್ರಯೋಗವನ್ನು ನಡೆಸಲಾಯಿತು.

 

ಕ್ಷಿಪಣಿಯ ಯಶಸ್ವಿ ಹಾರಾಟದ ಪ್ರಯೋಗಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಡಿಆರ್‌ಡಿಒವನ್ನು ಅಭಿನಂದಿಸಿದ್ದಾರೆ. ಒಡಿಶಾದ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ದೀರ್ಘ ವ್ಯಾಪ್ತಿಯ ಹೈಪರ್‌ ಸಾನಿಕ್‌ ಕ್ಷಿಪಣಿಯ ಹಾರಾಟವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಭಾರತವು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಮಹತ್ವದ ಸಾಧನೆಯಿಂದ ಆಯ್ದ ದೇಶಗಳ ಸಾಲಿನಲ್ಲಿ ನಮ್ಮ ದೇಶವು ಸ್ಥಾನ ಪಡೆದಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೈಪರ್‌ಸಾನಿಕ್‌ ಕ್ಷಿಪಣಿಗಳು ಮೇಲಿನ ವಾತಾವರಣದಲ್ಲಿ ಶಬ್ದಕ್ಕಿಂತ ಐದು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತವೆ ಅಥವಾ ಗಂಟೆಗೆ 6,200 ಕಿಮೀ (3,850 mph) ವೇಗದಲ್ಲಿ ಹೋಗುತ್ತದೆ. ಆದರೆ ಇದು  ಖಂಡಾಂತರ ಕ್ಷಿಪಣಿಗಿಂತ ನಿಧಾನವಾಗಿರುತ್ತದೆ.

 

Share This Article