ಮುಂಬೈ: ಇಂಗ್ಲೆಂಡ್ (England) ವಿರುದ್ಧ ಮುಂದೆ ನಡೆಯಲಿರುವ ಮೂರು ಟೆಸ್ಟ್ ಕ್ರಿಕೆಟ್‌ಗೆ ಭಾರತ ತಂಡದ (Team India) ಸದಸ್ಯರ ಪಟ್ಟಿ ಬಿಡುಗಡೆಯಾಗಿದ್ದು ವಿರಾಟ್ ಕೊಹ್ಲಿ (Virat Kohli) ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.
ಮೊದಲ ಎರಡು ಪಂದ್ಯಗಳಿಗೆ ವೈಯಕ್ತಿಕ ಕಾರಣ ನೀಡಿದ್ದ ಕೊಹ್ಲಿ ಮುಂದಿನ ಮೂರು ಪಂದ್ಯಗಳನ್ನು ಆಡುವುದು ಅನುಮಾನ ಎಂದು ಹಿಂದೆಯೇ ವರದಿಯಾಗಿತ್ತು. ಈಗ ಈ ಸುದ್ದಿ ಅಧಿಕೃತವಾಗಿದೆ. ಕೊಹ್ಲಿ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಬಿಸಿಸಿಐ (BCCI) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಗಾಯಗೊಂಡು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಕೆ.ಎಲ್ ರಾಹುಲ್ (KL Rahul) ಮತ್ತು ರವೀಂದ್ರ ಜಡೇಜಾ (Ravindra Jadeja) ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಆಡುವ 11 ಮಂದಿಯಲ್ಲಿ ಸ್ಥಾನ ಪಡೆಯಲಿದ್ದಾರೆ.
ಬೆನ್ನು ಮತ್ತು ತೊಡೆ ಸಂದು ಗಾಯದಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ (Shreyas Iyer) ಹೊರಬಿದ್ದಿದ್ದಾರೆ. ಫೆ.15 ರಿಂದ ರಾಜ್‌ಕೋಟ್‌ನಲ್ಲಿ ಮೂರನೇ ಟೆಸ್ಟ್ ನಡೆದರೆ ಫೆ.23 ರಿಂದ ರಾಂಚಿಯಲ್ಲಿ 4ನೇ ಟೆಸ್ಟ್ ಪಂದ್ಯ ನಡೆಯಲಿದೆ. ಐದನೇ ಮತ್ತು ಕೊನೆಯ ಟೆಸ್ಟ್ ಹಿಮಾಚಲದ ಧರ್ಮಶಾಲಾದಲ್ಲಿ ಮಾರ್ಚ್ 7 ರಂದು ನಡೆಯಲಿದೆ.
ಟೀಂ ಇಂಡಿಯಾ ಸದಸ್ಯರ ವಿವರ:
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಕೆಎಸ್ ಭರತ್ ( ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.