ಗಣಿ ಸಚಿವಾಲಯವು ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗೆ ಅಗತ್ಯವಾದ 30 ನಿರ್ಣಾಯಕ ಖನಿಜಗಳನ್ನು ಗುರುತಿಸಿದೆ. ಅದರಲ್ಲಿ 10 ಖನಿಜಗಳಿಗಾಗಿ ಭಾರತ ಬೇರೆ ದೇಶಗಳನ್ನು ಅವಲಂಭಿಸಿದೆ. ಈ ಪಟ್ಟಿಯಲ್ಲಿ ಕೆಲವು ನಿರ್ಣಾಯಕ ಖನಿಜಗಳಿಗೆ ಭಾರತವು ಚೀನಾದ ಮೇಲೆ ಅವಲಂಬಿತವಾಗಿದೆ ಎಂಬುದು ಆತಂಕಕಾರಿಯಾಗಿದೆ.
ಚೀನಾ ಖನಿಜಗಳ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಪ್ರಬಲ ನಿಯಂತ್ರಣ ಹೊಂದಿದೆ. ಇದು ಚೀನಾಕ್ಕೆ ದೊಡ್ಡ ಆರ್ಥಿಕತೆಯನ್ನು ಒದಗಿಸುತ್ತದೆ. ಅಂತರಾಷ್ಟ್ರೀಯ ಉದ್ವಿಗ್ನತೆಗಳ ಸಂದರ್ಭಗಳಲ್ಲಿ ಇದು ಅಮೆರಿಕ ಮತ್ತು ಪಶ್ಚಿಮದ ಉತ್ಪಾದನಾ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮವನ್ನೂ ಸಹ ಬೀರಬಹುದು. ಚೀನಾದಲ್ಲಿ ದೊರೆಯವ ಆಂಟಿಮೊನಿ ಖನಿಜ 300 ಕ್ಕೂ ಹೆಚ್ಚು ರೀತಿಯ ಮದ್ದುಗುಂಡುಗಳಿಗೆ ಅತ್ಯಗತ್ಯ ಅಂಶವಾಗಿದೆ. ಈ ಖನಿಜವನ್ನು ಪ್ರಪಂಚದ ಅರ್ಧದಷ್ಟು ಉತ್ಪಾದನೆಯನ್ನು ಚೀನಾ ಮಾಡುತ್ತದೆ. ಇದು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಆತಂಕಕಾರಿಯಾಗಿದೆ. ಚೀನಾ ಈಗಾಗಲೇ ಭೌಗೋಳಿಕ ರಾಜಕೀಯ ಲಾಭಕ್ಕಾಗಿ ನಿರ್ಣಾಯಕ ಖನಿಜಗಳ ಮೇಲೆ ಪ್ರಾಬಲ್ಯವನ್ನು ಬಳಸಿಕೊಂಡಿದೆ. ಇದೇ ಕಾರಣಕ್ಕೆ ಚೀನಾದ ನಿರ್ಣಾಯಕ ಖನಿಜಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಅಗತ್ಯ ಕ್ರಮಕ್ಕೆ ಮುಂದಾಗಿದೆ.
Advertisement
Advertisement
ವಿಶೇಷವಾಗಿ ಸೌರ ಉಪಕರಣಗಳು ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಪ್ರಾಬಲ್ಯ ಸಾಧಿಸಲು ಅನುವು ಮಾಡಿಕೊಡುವ ನಿರ್ಣಾಯಕ ಖನಿಜಗಳ ಮೇಲೆ ಚೀನಾದ ನಿಯಂತ್ರಣದ ಬಗ್ಗೆ ಹೆಚ್ಚಿನ ಕಳವಳ ಇದೆ. ಈ ಕಾರಣಕ್ಕೆ ಭಾರತ ಮತ್ತು ಅಮೆರಿಕ ನಿರ್ಣಾಯಕ ಖನಿಜ ಪೂರೈಕೆ ಸರಪಳಿಯನ್ನು ಬಲಪಡಿಸುವ ಒಪ್ಪಂದಕ್ಕೆ 2023ರಲ್ಲಿ ಸಹಿ ಹಾಕಿವೆ.
Advertisement
ಒಪ್ಪಂದದ ಗುರಿಯೇನು?
*ದೇಶಗಳು ನಿರ್ಣಾಯಕ ಪ್ರಮಾಣದಲ್ಲಿ ಖನಿಜಗಳನ್ನು ಉತ್ಪಾದಿಸುವುದು, ಸಂಸ್ಕರಿಸುವುದು ಮತ್ತು ಮರುಬಳಕೆ ಮಾಡುವುದನ್ನು ಉತ್ತೇಜಿಸುವುದು. ಆ ಮೂಲಕ ಖನಿಜ ನಿಧಿಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಬೆಂಬಲಿಸುವುದು.
*ಇದು ಖನಿಜ ಪೂರೈಕೆ ಸರಪಳಿಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಗುರಿ ಹೊಂದಿದೆ.
*ಖನಿಜಗಳ ಸಂಗ್ರಹಣೆಯ ವಿಚಾರದಲ್ಲಿ ಚೀನಾದ ಮೇಲೆ ಜಾಗತಿಕ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಪಾಲುದಾರಿಕೆಯ ಪ್ರಮುಖ ಗುರಿಯಾಗಿದೆ.
*ಈ ಒಪ್ಪಂದವು ಒತ್ತು ನೀಡುವ ಪ್ರಮುಖ ಖನಿಜಗಳಲ್ಲಿ ಕೋಬಾಲ್ಟ್, ನಿಕ್ಕಲ್ ಮತ್ತು ಲಿಥಿಯಂ ಸೇರಿವೆ. ಇವು ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳು ಹಾಗೂ ವಿಂಡ್ ಟರ್ಬೈನ್‌ಗಳಲ್ಲಿ ಬಳಕೆಯಾಗುತ್ತವೆ. ಹಾಗೆಯೇ ಈ ಒಪ್ಪಂದಗಳಲ್ಲಿ ಸೆಮಿಕಂಡಕ್ಟರ್‌ಗಳಲ್ಲಿ ಬಳಕೆಯಾಗುವ 17 ಅಪರೂಪದ ಭೂಮಿಯ ಖನಿಜಗಳು ಸೇರಿವೆ.
Advertisement
ಚೀನಾ ಮೇಲೆ 40%ಕ್ಕಿಂತ ಹೆಚ್ಚಿನ ಅವಲಂಬನೆಯ 6 ಖನಿಜಗಳು
ಬಿಸ್ಮತ್ : 85.6% (ಔಷಧಗಳು ಮತ್ತು ರಾಸಾಯನಿಕಗಳಲ್ಲಿ ಬಳಸಲಾಗುತ್ತದೆ)
ಲಿಥಿಯಂ : 82% (EV ಬ್ಯಾಟರಿಗಳಿಗೆ ನಿರ್ಣಾಯಕವಾಗಿದೆ)
ಸಿಲಿಕಾನ್ : 76% (ಅರೆವಾಹಕಗಳು ಮತ್ತು ಸೌರ ಫಲಕಗಳಿಗೆ ಪ್ರಮುಖವಾಗಿದೆ)
ಟೈಟಾನಿಯಂ : 50.6% (ಏರೋಸ್ಪೇಸ್ ಮತ್ತು ರಕ್ಷಣೆಯಲ್ಲಿ ಬಳಸಲಾಗುತ್ತದೆ)
ಟೆಲ್ಲುರಿಯಮ್ : 48.8% (ಸೌರ ಶಕ್ತಿ ಮತ್ತು ಥರ್ಮೋಎಲೆಕ್ಟ್ರಿಕ್ ಸಾಧನಗಳಿಗೆ ಮುಖ್ಯವಾಗಿದೆ)
ಗ್ರ್ಯಾಫೈಟ್ : 42.4% (ಇವಿ ಬ್ಯಾಟರಿಗಳು ಮತ್ತು ಸ್ಟೀಲ್‌ಗೆ ಅನಿವಾರ್ಯವಾಗಿದೆ)
ನಿರ್ಣಾಯಕ ಖನಿಜಗಳಲ್ಲಿ ಚೀನಾದ ಪ್ರಾಬಲ್ಯ
ಚೀನಾ ಖನಿಜ ನಿಕ್ಷೇಪಗಳು: ತಾಮ್ರ , ಸೀಸ , ಸತು , ನಿಕಲ್ , ಕೋಬಾಲ್ಟ್ , ಲಿಥಿಯಂ , ಗ್ಯಾಲಿಯಂ , ಜರ್ಮೇನಿಯಮ್ ಮತ್ತು ಗ್ರ್ಯಾಫೈಟ್‌ಗಳ ಭಾರೀ ನಿಕ್ಷೇಪಗಳನ್ನು ಹೊಂದಿದೆ. 2023 ರಲ್ಲಿ 19.4 ಶತಕೋಟಿ ಡಾಲರ್ ಹೂಡಿಕೆ ಮಾಡಿ 132 ಹೊಸ ನಿಕ್ಷೇಪಗಳನ್ನು ಪತ್ತೆ ಮಾಡಿತ್ತು.
ಕಾರ್ಯತಂತ್ರದ ಹೂಡಿಕೆಗಳು: ಚೀನಾವು ಸಾಗರೋತ್ತರ ಗಣಿಗಾರಿಕೆ ಯೋಜನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದೆ. ಸುಧಾರಿತ ಸಂಸ್ಕರಣಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಖನಿಜ ನಿಕ್ಷೇಪಗಳು ಮತ್ತು ಸಂಸ್ಕರಣಾ ಸಾಮರ್ಥ್ಯದ ಮೇಲೆ ಚೀನಾ ಭಾರೀ ನಿಯಂತ್ರಣ ಸಾಧಿಸಿದೆ. ರಫ್ತಿನ ಮೇಲೆ ಚೀನಾ ನಿಯಂತ್ರಣ ತಂತ್ರವನ್ನು ಮಾಡುತ್ತದೆ. ಇದು ಭಾರತ, ಅಮೆರಿಕ ಮತ್ತು ಯುರೋಪ್‌ನಂತಹ ದೇಶಗಳ ಪೂರೈಕೆ ಸರಪಳಿಯ ಮೇಲೆ ಪ್ರಭಾವ ಬೀರುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ
ದೇಶದಲ್ಲಿ 2023ರಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ. ಇ.ವಿ ಬ್ಯಾಟರಿಗಳ ತಯಾರಿಕೆಗೆ ಲಿಥಿಯಂ ಪ್ರಮುಖ ವಸ್ತುವಾಗಿದೆ. ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಶೋಧನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಎಂಬಲ್ಲಿ 59 ಲಕ್ಷ ಟನ್‌ಗಳಷ್ಟು ಲಿಥಿಯಂ ನಿಕ್ಷೇಪವಿರುವುದು ಕಂಡುಬಂದಿತ್ತು.
ಗಣಿಗಾರಿಕೆಯಲ್ಲಿ ಭಾರತ ಹಿಂದುಳಿಯಲು ಕಾರಣವೇನು?
ಭಾರತದಲ್ಲಿ ಖನಿಜ ಸಂಪನ್ಮೂಲಗಳು ಸಮೃದ್ಧವಾಗಿದ್ದರೂ, ಅನೇಕ ಖನಿಜಗಳು ಆಳವಾದ ಭೂಮಿಯಲ್ಲಿ ನೆಲೆಗೊಂಡಿವೆ. ಇವುಗಳನ್ನು ಹೊರತೆಗೆಯಲು ಗಣಿಗಾರಿಕೆ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯವಿರುತ್ತದೆ.
ಸಂಸ್ಕರಣಾ ಮಿತಿಗಳು: ಭಾರತವು ಕೆಲವು ಖನಿಜಗಳನ್ನು ಸಂಸ್ಕರಿಸುವ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿಲ್ಲ. ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ 9 ಮಿಲಿಯನ್ ಟನ್‌ಗಳಷ್ಟು ಲಿಥಿಯಂನ ನಿಕ್ಷೇಪ ಪತ್ತೆಯಾಗಿದೆ. ಸೀಮಿತ ಸಂಸ್ಕರಣಾ ಸಾಮರ್ಥ್ಯಗಳ ಕಾರಣದಿಂದಾಗಿ ನಿಕ್ಷೇಪಗಳಿಂದ ಲಿಥಿಯಂನ್ನು ಹೊರತೆಗೆಯುವಲ್ಲಿ ಭಾರತವು ಸವಾಲುಗಳನ್ನು ಎದುರಿಸುತ್ತಿದೆ.
ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಭಾರತದ ಪ್ರಯತ್ನ ಏನು?
ಕಾಬಿಲ್: ಇದು ಸಾಗರೋತ್ತರ ಖನಿಜ ಆಸ್ತಿಗಳನ್ನು ಭದ್ರಪಡಿಸುವ ಗುರಿಯನ್ನು ಹೊಂದಿರುವ ಮೂರು ಸರ್ಕಾರಿ ಸ್ವಾಮ್ಯದ ಕಂಪನಿಗಳ ಜಂಟಿ ಉದ್ಯಮವಾಗಿದೆ. ಈ ಉದ್ಯಮಕ್ಕೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದ್ದು ಗಣಿಗೆ ಬೆಂಬಲ ನೀಡುತ್ತಿದೆ.
ಸಂಶೋಧನೆ ಮತ್ತು ಅಭಿವೃದ್ಧಿ: ಕೇಂದ್ರ ಸರ್ಕಾರವು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ನಂತಹ ಸಂಸ್ಥೆಗಳ ಮೂಲಕ ಸಂಶೋಧನೆಯಲ್ಲಿ ಹೂಡಿಕೆ ಮಾಡುತ್ತಿದೆ. ಈ ಮೂಲಕ ಖನಿಜ ಪರಿಶೋಧನೆಯನ್ನು ಹೆಚ್ಚಿಸುವುದು, ಸಂಸ್ಕರಣಾ ತಂತ್ರಜ್ಞಾನಗಳನ್ನು ಸುಧಾರಿಸಲು ಭಾರತ ಮುಂದಾಗಿದೆ.
ಗಣಿ ಸಚಿವಾಲಯ ಗುರುತಿಸಿದ 30 ನಿರ್ಣಾಯಕ ಖನಿಜಗಳು
ಆಂಟಿಮೊನಿ, ಬೆರಿಲಿಯಮ್, ಬಿಸ್ಮತ್, ಕೋಬಾಲ್ಟ್, ತಾಮ್ರ, ಗ್ಯಾಲಿಯಂ, ಜರ್ಮೇನಿಯಮ್, ಗ್ರ್ಯಾಫೈಟ್, ಹ್ಯಾಫ್ನಿಯಮ್, ಇಂಡಿಯಮ್, ಲಿಥಿಯಂ, ಮಾಲಿಬ್ಡಿನಮ್, ನಿಯೋಬಿಯಂ, ನಿಕಲ್, PGE, ರಂಜಕ, ಪೊಟ್ಯಾಶ್, REE, ರೀನಿಯಮ್, ಸಿಲಿಕಾನ್, ಸ್ಟ್ರಾಂಷಿಯಂ, ಟ್ಯಾಂಟಲಮ್, ಟಿಲ್ಯುರ್ಟಾನಿಯಮ್ ಟಂಗ್‌ಸ್ಟನ್, ವನಾಡಿಯಮ್, ಜಿರ್ಕೋನಿಯಮ್, ಸೆಲೆನಿಯಮ್ ಮತ್ತು ಕ್ಯಾಡ್ಮಿಯಮ್.