– ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ರೂ ಗುಣಮುಖ
ಕೇರಳ: ಮಹಾಮಾರಿ ಕೊರೊನಾ ಎಂದರೆ ಸಾಕು ಜನರು ಭಯಭೀತರಾಗುತ್ತಾರೆ. ಅದರಲ್ಲೂ ಈ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಬಂದರೆ ಗುಣಮುಖರಾಗುವುದು ಕಷ್ಟ ಎಂಬ ಆತಂಕವಿದೆ. ಇದೇ ವೇಳೆ ಕೇರಳದಿಂದ ಶುಭ ಸುದ್ದಿ ಸಿಕ್ಕಿದ್ದು, ವೃದ್ಧ ದಂಪತಿ ಮಹಾಮಾರಿ ಕೋವಿಡ್-19 ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಥಾಮಸ್ (93) ಮತ್ತು ಅವರ ಪತ್ನಿ ಮರಿಯಮ್ಮ (88) ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ದಂಪತಿ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದೀಗ ಈ ದಂಪತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೇರಳದ ಕೊಟ್ಟಾಯಂನಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ.
Advertisement
Advertisement
ಥಾಮಸ್ ಕೋವಿಡ್-19 ವೈರಸ್‍ನಿಂದ ಪಾರಾದ ಭಾರತದ ಅತ್ಯಂತ ವೃದ್ಧರಾಗಿದ್ದಾರೆ. ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಥಾಮಸ್ ಅವರನ್ನು ಪತ್ನಿಯೊಂದಿಗೆ ಡಿಸ್ಚಾರ್ಜ್ ಮಾಡಲಾಗಿದೆ.
Advertisement
ಸೋಂಕು ಬಂದಿದ್ದು ಹೇಗೆ?
ವೃದ್ಧ ದಂಪತಿಯನ್ನು ಮಾರ್ಚ್ 9 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಥಾಮಸ್ ಮತ್ತು ಮರಿಯಮ್ಮ ವೃದ್ಧ ದಂಪತಿ ಪತ್ತನಂತಿಟ್ಟ ಜಿಲ್ಲೆಯ ರಾಣಿ ಗ್ರಾಮದ ನಿವಾಸಿಯಾಗಿದ್ದು, ಮಾರ್ಚ್‍ನಲ್ಲಿ ಇಟಲಿಯಿಂದ ವೃದ್ಧ ದಂಪತಿಯ ಮಗ, ಸೊಸೆ ಮತ್ತು ಮೊಮ್ಮಗ ಹಿಂದಿರುಗಿದ್ದರು. ಇವರ ಜೊತೆ ಸಂಪರ್ಕ ಹೊಂದಿದ್ದ ವೃದ್ಧ ದಂಪತಿಗೆ ಕೊರೊನಾ ಬಂದಿತ್ತು. ಅವರ ಮಗ, ಸೊಸೆ ಮತ್ತು ಮೊಮ್ಮಗನಿಗೂ ಕೊರೊನಾ ಪಾಸಿಟಿವ್ ಬಂದಿತ್ತು.
Advertisement
ದಂಪತಿ ಎರಡು ವಾರಗಳವರೆಗೆ ಕಟ್ಟುನಿಟ್ಟಿನಿಂದ ಹೋಂ ಕ್ಯಾರೆಂಟೈನ್‍ನಲ್ಲಿ ಉಳಿದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಬ್ಬರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ದಂಪತಿ ಈಗಾಗಲೇ ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ವಯಸ್ಸಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಮೊದಲ ಹಂತದ ಚಿಕಿತ್ಸೆಯಲ್ಲಿ ದಂಪತಿಯ ಸ್ಥಿತಿ ಗಂಭೀರವಾಗಿತ್ತು.
ಅಷ್ಟೇ ಅಲ್ಲದೇ ಚಿಕಿತ್ಸೆಯ ಸಮಯದಲ್ಲಿ ಥಾಮಸ್‍ಗೆ ಹೃದಯಾಘಾತವಾಗಿತ್ತು. ಅಲ್ಲದೇ ರಕ್ತದೊತ್ತಡದಿಂದ ವೈದ್ಯರು ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಥಾಮಸ್ ಮತ್ತು ಮರಿಯಮ್ಮ ಇಬ್ಬರಿಗೂ ಮೂತ್ರದ ಸೋಂಕು ಕೂಡ ಕಂಡುಬಂದಿತ್ತು. ಆದರೂ ಇಷ್ಟೆಲ್ಲಾ ಕಷ್ಟದಿಂದಲೂ ವೃದ್ಧ ದಂಪತಿ ಧೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.
ಸ್ಥಳಿಯವಾಗಿ ವೃದ್ಧದಂಪತಿ ಎಲ್ಲ ಆಹಾರವನ್ನು ಇಷ್ಟ ಪಡುತ್ತಾರೆ. ಥಾಮಸ್ ಅವರಿಗೆ ಫಿಶ್ ಫ್ರೈ ಅಂದರೆ ತುಂಬಾ ಇಷ್ಟ. ಹೀಗಾಗಿ ನಾವು ತಿನ್ನಲು ಫಿಶ್ ಫ್ರೈ ಕೊಡುತ್ತಿದ್ದೆವು. ಅಲ್ಲದೇ ಅಕ್ಕಿ ಗಂಜಿ, ಮರಗೆಣಸು ಮತ್ತು ಹಲಸಿನ ಹಣ್ಣನ್ನು ಆಹಾರವಾಗಿ ತಿನ್ನಲು ಕೊಡುತ್ತಿದ್ದೆವು ಎಂದು ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ಹೇಳಿದ್ದಾರೆ.
ಇದೀಗ ವೃದ್ಧ ದಂಪತಿಯನ್ನು ಉಳಿಸಲು ಶ್ರಮಿಸಿದ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಗೆ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಾಜಾ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ ಪ್ರಕಾರ, ಏಳು ವೈದ್ಯರ ತಂಡವು ಚಿಕಿತ್ಸೆ ನೀಡಿದ್ದು, ಇವರಿಗೆ 25 ಮಂದಿ ನರ್ಸ್ ಸೇರಿದಂತೆ 40 ವೈದ್ಯಕೀಯ ಸಿಬ್ಬಂದಿ ಸಹಕಾರ ನೀಡಿದ್ದರು ಎಂದು ತಿಳಿದುಬಂದಿದೆ.