ಭಾರತೀಯರು ಮತ್ತು ಚಿನ್ನಕ್ಕೆ (Gold) ಅವಿನಾಭಾವ ಸಂಬಂಧ ಇದೆ. ಅದೊಂದು ಭಾವನಾತ್ಮಕ ನಂಟು. ಹಬ್ಬ-ಹರಿದಿನಗಳು, ಮದುವೆ-ಸಮಾರಂಭಗಳಂತಹ ಶುಭ ಕಾರ್ಯಗಳಿಗೆ ಚಿನ್ನ ಬೇಕೇ ಬೇಕು. ಚಿನ್ನವನ್ನು ಆಭರಣವಾಗಿ ಇಷ್ಟ ಪಡುವವರಲ್ಲಿ ಭಾರತೀಯರಿಗೆ ಸರಿಸಮಾನರು ಯಾರೂ ಇಲ್ಲ. ಅಂತಹ ಬಿಡಿಸಲಾಗದ ನಂಟಿದೆ. ಆರ್ಥಿಕ ಬದುಕಿಗೆ ಹಳದಿ ಲೋಹ ಭದ್ರತೆಯೂ ಹೌದು. ಮಧ್ಯಮ ವರ್ಗದ ಜನರ ಕಷ್ಟ ಕಾಲಕ್ಕೂ ಅದು ಅಪದ್ಭಾಂದವ. ತುರ್ತು ಇದ್ದಾಗ ಚಿನ್ನ ಅಡಮಾನ ಇಡುವುದು ಸಾಮಾನ್ಯ. ಭಾರತೀಯರು ತಲೆಮಾರುಗಳಿಂದ ಸಂಗ್ರಹಿಸಿಕೊಂಡು ಬಂದ ಚಿನ್ನದ ಸಂಪತ್ತು ಈಗ ಐತಿಹಾಸಿಕ ಮೈಲುಗಲ್ಲು ತಲುಪಿದೆ. ಭಾರತೀಯ ಕುಟುಂಬಗಳು ಹೊಂದಿರುವ ಒಟ್ಟು ಚಿನ್ನದ ಮೌಲ್ಯವು ದೇಶದ ಇಡೀ ಆರ್ಥಿಕತೆಗಿಂತಲೂ (GDP) ಹೆಚ್ಚಾಗಿದೆ.
ಹೌದು, ಈ ವಿಚಾರವನ್ನು ಆರ್ಥಿಕ ತಜ್ಞರ ಅಧ್ಯಯನ ವರದಿಯೊಂದು ಬಹಿರಂಪಡಿಸಿದೆ. ಭಾರತದ ಚಿನ್ನದ ಮೇಲಿನ ನಿರಂತರ ವ್ಯಾಮೋಹ ಅಭೂತಪೂರ್ವ ಹಂತವನ್ನು ತಲುಪಿದೆ. ಅಷ್ಟಕ್ಕೂ ಭಾರತೀಯರ ಬಳಿ ಚಿನ್ನ ಎಷ್ಟಿದೆ? ಜನರು ಶ್ರೀಮಂತರಾಗಿದ್ದಾರಾ? ಭಾರತದ ಜಿಡಿಪಿಗಿಂತಲೂ ಇದರ ಮೌಲ್ಯ ಹೆಚ್ಚಾಗಿದ್ದು ಹೇಗೆ? ಚಿನ್ನ ಖರೀದಿಗಷ್ಟೇ ಸೀಮಿತವಾಗಿದೆಯಾ? ಜನರು ಹೂಡಿಕೆಯತ್ತ ಗಮನ ಹರಿಸಿದ್ದು, ಈ ಸಾಧನೆಗೆ ಪ್ರಮುಖ ಕಾರಣವೇ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಮಾರ್ಗನ್ ಸ್ಟ್ಯಾನ್ಲಿ ವರದಿ ಹೇಳೋದೇನು?
ಚಿನ್ನ ಖರೀದಿ ಮತ್ತು ಸಂಗ್ರಹದಲ್ಲಿ ಭಾರತೀಯರು ಎತ್ತಿದ ಕೈ. ಈ ನಡುವೆ ಜಾಗತಿಕ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದೆ. ಅಂತರರಾಷ್ಟ್ರೀಯ ಸ್ಪಾಟ್ ಬೆಲೆಗಳು ಇತ್ತೀಚೆಗೆ ಪ್ರತಿ ಔನ್ಸ್‌ಗೆ 4,500 ಡಾಲರ್ ಮೀರಿ ಏರಿಕೆ ಕಂಡಿದೆ. ಹೀಗಾಗಿ, ಭಾರತೀಯರು ಖಾಸಗಿಯಾಗಿ ಹೊಂದಿರುವ ಚಿನ್ನದ ಮೌಲ್ಯವು ಅಸಾಧಾರಣ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಪ್ರಮುಖ ಹಣಕಾಸು ವಿಶ್ಲೇಷಕ ಸಂಸ್ಥೆ ಮಾರ್ಗನ್ ಸ್ಟಾನ್ಲಿ ತಿಳಿಸಿದೆ.
ಭಾರತೀಯರ ಬಳಿ ಎಷ್ಟಿದೆ ಚಿನ್ನ?
ಭಾರತೀಯ ಕುಟುಂಬಗಳು ಒಟ್ಟಾರೆಯಾಗಿ ಸುಮಾರು 34,600 ಟನ್ ಚಿನ್ನವನ್ನು ಹೊಂದಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಬೆಲೆ 4,550 ಡಾಲರ್‌ನಷ್ಟಿದೆ. ಈ ಮೀಸಲುಗಳ ಒಟ್ಟು ಮೌಲ್ಯ ಅಂದಾಜು 5 ಟ್ರಿಲಿಯನ್ ಡಾಲರ್ (4.5 ಲಕ್ಷ ಕೋಟಿ ರೂ.)ನಷ್ಟಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ಅಂದಾಜಿನ ಪ್ರಕಾರ, ಭಾರತದ ಪ್ರಸ್ತುತ ಜಿಡಿಪಿ ಸುಮಾರು 4.1 ಟ್ರಿಲಿಯನ್ ಆಗಿದೆ. ಅಂದರೆ, ಭಾರತೀಯ ಕುಟುಂಬಗಳಲ್ಲಿನ ಚಿನ್ನದ ಮೌಲ್ಯವು ದೇಶವು ಒಂದು ವರ್ಷದಲ್ಲಿ ತೆಗೆಯುವ ಆದಾಯಕ್ಕಿಂತ ಹೆಚ್ಚಾಗಿದೆ. ಭಾರತೀಯ ಸಮಾಜದಲ್ಲಿ ಚಿನ್ನಕ್ಕಿರುವ ವಿಶೇಷ ಸ್ಥಾನಮಾನ ಏನೆಂಬುದನ್ನು ಇದು ತೋರಿಸುತ್ತದೆ.
ಏರುತ್ತಿರುವ ಚಿನ್ನವು ನಿಜವಾದ ಸಂಪತ್ತನ್ನು ಸೃಷ್ಟಿಸುತ್ತದೆಯೇ?
ಚಿನ್ನದ ಬೆಲೆ ಏರಿಕೆಯು ಭಾರತೀಯ ಮನೆಯ ಬ್ಯಾಲೆನ್ಸ್ ಶೀಟ್‌ಗಳನ್ನು ಬಲಪಡಿಸುತ್ತವೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಇತ್ತ ಚಿನ್ನದ ಖರೀದಿ ಮತ್ತು ಅತ್ತ ಲೋಹದ ಬೆಲೆ ಏರಿಕೆಯು ಮನೆಯ ಸಂಪತ್ತಿನಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ಚಿನ್ನದ ಬೆಲೆ ಏರಿದಾಗ, ಜನರು ತಾವು ಶ್ರೀಮಂತರಾಗುತ್ತಿದ್ದೇವೆ ಎಂದು ಭಾವಿಸುತ್ತಾರೆ ಎಂದು ಮಾರ್ಗನ್ ಸ್ಟಾನ್ಲಿ ವಿಶ್ಲೇಷಿಸಿದೆ. ಆದರೆ, ಎಂಕೆ ಗ್ಲೋಬಲ್‌ನಂತಹ ಕಂಪನಿಗಳು ಇದನ್ನು ವಿಭಿನ್ನವಾಗಿ ನೋಡುತ್ತವೆ. ಕಳೆದ 15 ವರ್ಷಗಳಲ್ಲಿ ಮೂರು ಪ್ರಮುಖ ಬೆಲೆ ಏರಿಕೆಗಳ ಹೊರತಾಗಿಯೂ, ಅದು ದೇಶೀಯ ಬಳಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಅವರ ವಿಶ್ಲೇಷಣೆ ತೋರಿಸಿದೆ.

ಚಿನ್ನ ಖರೀದಿಸುವವರಲ್ಲಿ ಭಾರತವೇ ನಂ.2
ಜಗತ್ತಿನಲ್ಲಿ ಚಿನ್ನ ಖರೀದಿಸುವವರಲ್ಲಿ ಭಾರತವೇ ನಂಬರ್ 2ನೇ ಸ್ಥಾನದಲ್ಲಿದೆ. ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿದೆ. ಜಾಗತಿಕ ಬೇಡಿಕೆಯ ಸುಮಾರು ಶೇ.26 ರಷ್ಟನ್ನು ಭಾರತವೇ ಖರೀದಿಸುತ್ತಿದೆ. ಚೀನಾ ಶೇ.28 ರಷ್ಟನ್ನು ಖರೀದಿಸುತ್ತಿದ್ದು, ನಂಬರ್ 1 ಸ್ಥಾನದಲ್ಲಿದೆ. ಭಾರತ ಆಭರಣಗಳ ಬಳಕೆಯಲ್ಲಿ ಪ್ರಾಬಲ್ಯ ಹೊಂದಿದೆ. ಇದರ ಜೊತೆಗೆ ಕಳೆದ ಐದು ವರ್ಷಗಳಲ್ಲಿ ಬಾರ್‌ಗಳು ಮತ್ತು ನಾಣ್ಯಗಳ ಮೂಲಕ ಭಾರತ ಹೂಡಿಕೆಯನ್ನೂ ಮಾಡುತ್ತಿದೆ. ಹೀಗಾಗಿ, ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ತನ್ನ ಚಿನ್ನ ಸಂಗ್ರಹವನ್ನು ಹೆಚ್ಚಿಸಿದೆ. 2024 ರಿಂದ ಆರ್‌ಬಿಐ ಸುಮಾರು 75 ಟನ್‌ಗಳಷ್ಟು ಚಿನ್ನವನ್ನು ಖರೀದಿಸಿದೆ. ಆರ್‌ಬಿಐ ಬಳಿ ಈಗ ಒಟ್ಟು 880 ಟನ್ ಚಿನ್ನ ಇದೆ. ಇದು ದೇಶದ ವಿದೇಶಿ ವಿನಿಮಯ ಸಂಗ್ರಹದ ಶೇ.14 ರಷ್ಟಿದೆ.
ಈ ಹೆಚ್ಚಳ ಏಕೆ?
* ಮದುವೆ, ಹಬ್ಬಗಳು, ಶುಭ ಸಮಾರಂಭಗಳಲ್ಲಿ ಭಾರತೀಯರು ಚಿನ್ನ ಖರೀದಿಸುವುದು ಸಂಪ್ರದಾಯವಾಗಿದೆ.
* ಷೇರು ಮಾರುಕಟ್ಟೆಯ ಏರಿಳಿತಗಳ ನಡುವೆ, ಕಷ್ಟದ ಸಮಯದಲ್ಲಿ ಚಿನ್ನವೇ ಸುರಕ್ಷಿತ ತಾಣ ಎಂಬ ಭಾವನೆ.
* ಸುಮಾರು 8 ದಶಕಗಳಿಂದ ಚಿನ್ನ ಮತ್ತು ಯುಎಸ್ ಡಾಲರ್ ಜಾಗತಿಕ ಸುರಕ್ಷಿತ ಸ್ವತ್ತುಗಳಾಗಿವೆ. ಹೀಗಾಗಿ, ಇವುಗಳ ಕಡೆಗಿನ ಆಸಕ್ತಿ ಹೆಚ್ಚು.
* ಜಾಗತಿಕ ಅಥವಾ ದೇಶೀಯ ಅನಿಶ್ಚಿತತೆ, ಯುದ್ಧ, ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಅಥವಾ ಭೌಗೋಳಿಕ ರಾಜಕೀಯ ಒತ್ತಡದಂತಹ ಪರಿಸ್ಥಿತಿಗಳಲ್ಲಿ ಶ್ರೀಸಾಮಾನ್ಯರು ಸಹಜವಾಗಿಯೇ ಸುರಕ್ಷಿತ ತಾಣ ಚಿನ್ನದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.
ವಿರೋಧಾಭಾಸ ಏನು?
ದಾಖಲೆಯ ಗರಿಷ್ಠ ಮಟ್ಟಗಳ ಹೊರತಾಗಿಯೂ ಒಂದಷ್ಟು ವಿರೋಧಾಭಾಸಗಳಿವೆ. ಎಂಕೆ ಗ್ಲೋಬಲ್ ವರದಿ ಪ್ರಕಾರ, ಭಾರತೀಯ ಕುಟುಂಬಗಳು ಒಟ್ಟಾರೆಯಲ್ಲಿ ಶೇ.75-80 ರಷ್ಟು ಚಿನ್ನವನ್ನು ಆಭರಣ ಮಾಡಿಸಿಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತವೆ. ಇದನ್ನು ದೀರ್ಘಕಾಲೀನ ಉಳಿತಾಯ ಮತ್ತು ಸಾಂಪ್ರದಾಯಿಕವಾಗಿಯಷ್ಟೇ ನೋಡಲಾಗುತ್ತದೆ. ಚಿನ್ನದ ಬೆಲೆ ಗಗನಕ್ಕೆ ಏರಿದರೂ, ಗ್ರಾಹಕರ ಖರ್ಚು ಹೆಚ್ಚಳ ಮಾಡುವುದಿಲ್ಲ. ದೈನಂದಿನ ಆರ್ಥಿಕತೆಗೆ ಸಂಪತ್ತಾಗಿ ಪರಿಣಮಿಸುವುದಿಲ್ಲ. ಮನೆಯ ಸಂಪತ್ತಿನ ಬಹುಪಾಲು ಭಾಗವು (ಚಿನ್ನದ ಆಭರಣಗಳು) ನಿಷ್ಕ್ರಿಯ ಆಸ್ತಿಯಾಗಿ ಉಳಿದಿದೆ. ಅವು ಯಾವುದೇ ಆದಾಯವನ್ನು ಗಳಿಸುವುದಿಲ್ಲ ಎನ್ನಲಾಗಿದೆ.
ಈಗ ಚಿನ್ನದ ಬೆಲೆ ಎಷ್ಟು?
ಭಾರತದಲ್ಲಿ ಶುಕ್ರವಾರದ ಅಂಕಿಅಂಶ ಪ್ರಕಾರ, 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ 1,37,020 ರೂ.ಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,25,602 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನದ ಬೆಲೆಯು 1,02,765 ರೂ.ಗೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಚಿನ್ನದ (24 ಕ್ಯಾರೆಟ್) ಬೆಲೆಯು 1,37,130 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 1,25,703 ರೂ. ತಲುಪಿದೆ. 18 ಕ್ಯಾರೆಟ್ ಚಿನ್ನದ ಬೆಲೆ 1,02,848 ರೂ. ಆಗಿದೆ.

