ಮುಂಬೈ: ಸಿಂಧುದುರ್ಗದ ಮಾಲ್ವಾನ್‍ನಲ್ಲಿ ಛತ್ರಪತಿ ಶಿವಾಜಿಯವರ 35 ಅಡಿಯ ಪ್ರತಿಮೆ (Shivaji Statue) ನೆಲಕ್ಕೆ ಉರುಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾ ವಿಕಾಸ್ ಅಘಾಡಿಯ (Maha Vikas Aghadi) ಪ್ರಮುಖ ನಾಯಕರಾದ ಶರದ್ ಪವಾರ್, ಉದ್ಧವ್ ಠಾಕ್ರೆ ಮತ್ತು ನಾನಾ ಪಟೋಲೆ ಅವರ ನೇತೃತ್ವದಲ್ಲಿ ಮುಂಬೈನಲ್ಲಿ (Mumbai) ರಾಜ್ಯ ಸರ್ಕಾರದ ವಿರುದ್ಧ `ಜೋಡ್ ಮಾರೊ’ (Jode Maro) ಪ್ರತಿಭಟನೆ ನಡೆಯುತ್ತಿದೆ.
ನಗರದ ಹುತಾತ್ಮ ಚೌಕ್‍ನಿಂದ ಗೇಟ್‍ವೇ ಆಫ್ ಇಂಡಿಯಾದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ಏಕನಾಥ್ ಶಿಂಧೆ ಸರ್ಕಾರದಿಂದ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆ ಹಿನ್ನೆಲೆ ಗೇಟ್‍ವೇ ಆಫ್ ಇಂಡಿಯಾಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಆಪ್ ಬಣವು ತನ್ನ ಆಂದೋಲನವನ್ನು `ಜೋಡ್ ಮಾರೋ’ (ಚಪ್ಪಲಿಯಿಂದ ಹೊಡೆಯಿರಿ) ಪ್ರತಿಭಟನೆ ಎಂದು ಕರೆದಿದೆ. ಇನ್ನೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿರುವ ಶಿವಸೇನೆ (ಯುಬಿಟಿ) ‘ಮಹಾರಾಷ್ಟ್ರವನ್ನು ಜಾಗೃತಗೊಳಿಸಲು’ ಶಿವಾಜಿಯ ಪಾದಗಳಿಗೆ ನಮಸ್ಕರಿಸಲು ಬರುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.
ಭ್ರಷ್ಟ ಶಿವದ್ರೋಹಿಗಳಿಗೆ ಕ್ಷಮೆ ಇಲ್ಲ. ಕಳಪೆ ಕೆಲಸ ಮಾಡಿದ, ಭ್ರಷ್ಟಾಚಾರ ಎಸಗಿದ, ಶಿವಾಜಿಯನ್ನು ಅವಮಾನಿಸಿದ ಶಿವದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕ ಹೇಳಿದೆ.
ಕಳೆದ 8 ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದ ಘಟನೆ ಮಹಾರಾಷ್ಟ್ರದಲ್ಲಿ ಭಾರಿ ರಾಜಕೀಯ ಸಂಚಲನ ಮೂಡಿಸಿದೆ. ಈ ಯೋಜನೆಯನ್ನು ನೌಕಾಪಡೆಯು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ನಿರ್ವಹಿಸಿತ್ತು.
ಪೊಲೀಸರು ಯೋಜನೆಯ ರಚನಾತ್ಮಕ ಸಲಹೆಗಾರ ಮತ್ತು ಅದರ ಗುತ್ತಿಗೆದಾರನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕಾರ್ಯಕ್ಕೆ ಸಂಬಂಧಿಸಿದ ಸೆಕ್ಷನ್‍ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಶುಕ್ರವಾರ ಪ್ರಧಾನಿ ಮೋದಿಯವರು ಪ್ರತಿಮೆ ಕುಸಿತಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದರು. “ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಹೆಸರು ಅಥವಾ ರಾಜನಲ್ಲ. ನಮಗೆ ಅವರು ನಮ್ಮ ಆರಾಧ್ಯದೈವ. ಇಂದು ನಾನು ಅವರ ಪಾದಗಳಿಗೆ ತಲೆಬಾಗಿ ನನ್ನ ದೇವರನ್ನು ಕ್ಷಮೆಯಾಚಿಸುತ್ತೇನೆ. ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.