ಬೆಂಗಳೂರಿನ ಕೈಯಲ್ಲಿ ಭಾರತದ ಭವ್ಯ ಭವಿಷ್ಯ – ರಾಜನಾಥ್ ಸಿಂಗ್

Public TV
2 Min Read
Rajnath Singh

ಬೆಂಗಳೂರು: ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಕಾರ್ಯ ಪರಿಸರ ಹೊಂದಿರುವ ಕರ್ನಾಟಕವು ಬಂಡವಾಳ ಹೂಡಿಕೆಗೆ ಹೇಳಿ ಮಾಡಿಸಿದ ರಾಜ್ಯವಾಗಿದೆ. ಭಾರತದ ಭವ್ಯ ಭವಿಷ್ಯ ಬೆಂಗಳೂರಿನ ಕೈಯಲ್ಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು.

Invest Karntaka 2025

ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ನಡೆದ `ಜಾಗತಿಕ ಹೂಡಿಕೆದಾರರ ಸಮಾವೇಶ’ವಾದ ಇನ್ವೆಸ್ಟ್ ಕರ್ನಾಟಕ-2025ಕ್ಕೆ ಅವರು ಚಾಲನೆ ನೀಡಿದರು. ಫೆ.14ರವರೆಗೆ ನಡೆಯಲಿರುವ ಸಮಾವೇಶದಲ್ಲಿ ಜಗತ್ತಿನ ನಾನಾ ಭಾಗಗಳ 5000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ – 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಎಂ.ಬಿ ಪಾಟೀಲ್

ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಿದರೆ ಇಡೀ ದೇಶವೇ ಅವರ ಬೆನ್ನಿಗಿರಲಿದೆ. ಭಾರತದ ಭವಿಷ್ಯದ ಬಗ್ಗೆ ಅನುಮಾನವಿರುವವರು ಒಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಐಟಿ, ಸ್ಟಾರ್ಟಪ್ ಮತ್ತು ಇನ್ನಿತರ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿದರೆ, ಅವರ ಸಂಶಯಗಳೆಲ್ಲ ನಿವಾರಣೆಯಾಗಿ ಹೋಗುತ್ತವೆ ಎಂದರು.

ಕರ್ನಾಟಕವು ಜ್ಞಾನ ಮತ್ತು ಸಂಪತ್ತು ಎರಡರಿಂದಲೂ ಮೇಳೈಸಿರುವ ರಾಜ್ಯವಾಗಿದೆ. ದೇಶದ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರು ವೈಮಾಂತರಿಕ್ಷ, ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಯುವಜನರ ಆಗರವಾಗಿದೆ. ಇಲ್ಲಿರುವ ಶಕ್ತಿ, ಮಹತ್ತ್ವಾಕಾಂಕ್ಷೆ ಮತ್ತು ಇಲ್ಲಿ ನಡೆಯುತ್ತಿರುವ ನಿರ್ಣಾಯಕ ಕೆಲಸಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಇಲ್ಲಿಂದ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಪ್ರಥಮ ಮಾದರಿ ಕೂಡ ಹೊರಬರಲಿದೆ. ಇದಕ್ಕೆಲ್ಲ ಇಲ್ಲಿರುವ ಮಾನವ ಸಂಪನ್ಮೂಲ ಮತ್ತು ಸನ್ನದ್ಧವಾಗಿರುವ ಪ್ರತಿಭೆಯೇ ಕಾರಣ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾರುಕಟ್ಟೆ ಆಧರಿತ ಆರ್ಥಿಕತೆ ಮಾತ್ರ ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಬಲ್ಲದು. ಇದು ಸಾಧ್ಯವಾಗಬೇಕೆಂದರೆ ಖಾಸಗಿ ಉದ್ಯಮಿಗಳು ಬಹಳ ಮುಖ್ಯ. ಹಿಂದೆ ಹೂಡಿಕೆದಾರರಿಗೆ ಕೆಂಪುಪಟ್ಟಿಯ ತೊಂದರೆ ಎದುರಾಗುತ್ತಿತ್ತು, ಆದರೆ ಈಗ ರತ್ನಗಂಬಳಿಯ ಸ್ವಾಗತ ಸಿಗುತ್ತಿದೆ. ಭಾರತವು ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಸರ್ಕಾರದಿಂದ ಪ್ರಮುಖ ನಿರ್ಧಾರಗಳೂ ಹೊರಬರುತ್ತಿವೆ. ಬೆಂಗಳೂರಿನ ನಿರ್ಣಾಯಕ ಪಾತ್ರದಿಂದ ಭಾರತವು ವೈಮಾಂತರಿಕ್ಷ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.ಇದನ್ನೂ ಓದಿ: ಸಂಸತ್ ಅಧಿವೇಶನದಿಂದ ಹೂಡಿಕೆದಾರರ ಶೃಂಗದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ – ಹೆಚ್‌ಡಿಕೆ

 

Share This Article