ನವದೆಹಲಿ: ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿ ನಿರ್ಮಾಣಗೊಂಡಿರುವ ಸ್ವದೇಶಿ ಎಂಜಿನ್ ರಹಿತ ಟಿ-18 ರೈಲು ಪರೀಕ್ಷಾರ್ಥ ಸಂಚಾರದಲ್ಲಿ ದಾಖಲೆ ಬರೆದಿದೆ.
ಕೋಟಾ- ಸವಾಯಿ ಮಾಧೋಪುರ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ಟಿ-18 ರೈಲು ಸಂಚರಿಸಿದೆ. ಸಂಪೂರ್ಣ ಸ್ವದೇಶದಲ್ಲಿ ತಯಾರಾದ ರೈಲೊಂದು ಈ ವೇಗದಲ್ಲಿ ಸಂಚರಿಸಿರುವುದು ಇದೇ ಮೊದಲು ಎಂದು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ಜನರಲ್ ಮ್ಯಾನೇಜರ್ ಎಸ್ ಮಣಿ ತಿಳಿಸಿದ್ದಾರೆ. ರೈಲಿನ ಪ್ರಮುಖ ಪರೀಕ್ಷೆಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಸಣ್ಣ ಹೊಂದಾಣಿಕೆ ಕೆಲಸವಷ್ಟೇ ಬಾಕಿಯಿದೆ. ವರದಿಗಳನ್ನು ನೋಡಿ ಕೊನೆ ಹಂತದ ಸುಧಾರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ತಾಂತ್ರಿಕ ಸಮಸ್ಯೆ ಕಾಣಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement
Advertisement
ರೈಲ್ವೇ ಸಚಿವ ಪಿಯೂಶ್ ಗೋಯಲ್ ಗಂಟೆಗೆ 180 ಕಿ.ಮೀ ವೇಗದಲ್ಲಿ ಟಿ-18 ರೈಲು ಸಂಚರಿಸುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಎಲ್ಲ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ ಟಿ-18 ರೈಲು ಜನವರಿಯಲ್ಲಿ ಹಳಿಯಲ್ಲಿ ಸಂಚರಿಸುವ ಸಾಧ್ಯತೆಯಿದೆ.
Advertisement
ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಪರ್ಯಾಯವಾಗಿ ಈಗಿರುವ ಹಳಿಗಳಲ್ಲೇ ಈ ರೈಲು ಸೇವೆಯನ್ನು ಆರಂಭಿಸಲು ರೈಲ್ವೇ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಅಕ್ಟೋಬರ್ 29ರಂದು ಹಸಿರು ನಿಶಾನೆ ತೋರಿಸಲಾಗಿದ್ದ ಈ ರೈಲು ಗಂಟೆಗೆ 200 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿ 60 ಸಾವಿರ ಕಿ.ಮೀ ಉದ್ದದ ರೈಲ್ವೇ ಹಳಿಯಿದ್ದು, ಇದರಲ್ಲಿ ಶೇ. 0.3 ಹಳಿಗಳಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲನ್ನು ಓಡಿಸಬಹುದು ಎಂದು ವರದಿಯೊಂದು ತಿಳಿಸಿದೆ.
Advertisement
ರೈಲಿನ ವಿಶೇಷತೆ ಏನು?
ಭಾರತೀಯ ರೈಲ್ವೇ ವ್ಯವಸ್ಥೆ ಹಳೆ ಕಾಲದ್ದು ಎನ್ನುವ ಟೀಕೆಗೆ ಉತ್ತರ ಎನ್ನುವಂತೆ ಚೆನ್ನೈ ಮೂಲದ ಐಸಿಎಫ್ ಟಿ-18 ರೈಲನ್ನು ಅಭಿವೃದ್ಧಿ ಪಡಿಸಿದೆ. ವಿದೇಶಿ ರೈಲುಗಳಲ್ಲಿ ಇರುವಂತೆ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ. ರೈಲಿನಲ್ಲಿ 78 ಆಸನಗಳ ಸಾಮಾನ್ಯ ಬೋಗಿಗಳಿದ್ದರೆ, ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್ ಬೋಗಿಯನ್ನು ನೀಡಲಾಗಿದೆ.
2018 ರಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ರೈಲುಗಳಿಗೆ `ಟ್ರೈನ್ 18′ ಎಂದು ಹೆಸರಿಡಲಾಗಿದ್ದು ಈಗಿನ ರೈಲುಗಳಂತೆ ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ಮೆಟ್ರೋ ರೈಲುಗಳಂತೆ ವಿದ್ಯುತ್ ಶಕ್ತಿ ಪ್ರತಿ ಚಕ್ರಕ್ಕೂ ಮೋಟಾರುಗಳ (ಟ್ರಾಕ್ಷನ್ ಮೋಟಾರ್) ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ವಿಮಾನದಲ್ಲಿರುವಂತೆ ಕಾಕ್‍ಪಿಟ್‍ನಲ್ಲಿ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ವೇಗದಲ್ಲಿ ರೈಲು ಸಂಚರಿಸುತ್ತದೆ.
ಅಲ್ಯುಮೀನಿಯಂ ಬಾಡಿ ಇರುವ ಕಾರಣ ಕಡಿಮೆ ಭಾರ ಹೊಂದಿದ್ದರಿಂದ ಹೆಚ್ಚಿನ ವೇಗದಲ್ಲಿ ಹೋಗುತ್ತದೆ. ಇದು ಸೆಮಿ ಹೈ ಸ್ಪೀಡ್ ರೈಲಾಗಿರುವ ಕಾರಣ ಗಂಟೆಗೆ 220 ಕಿ.ಮೀ. ವೇಗದವರೆಗೆ ಸಂಚರಿಸುವ ಸಾಮರ್ಥ್ಯವನ್ನು ಪಡೆದಿದೆ.
ವಿದೇಶದ ರೈಲುಗಳಲ್ಲಿರುವಂತೆ ವೈಫೈ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ತಿರುಗಿಸಬಹುದಾದ ಸೀಟುಗಳು, ಚಾರ್ಜರ್ ವ್ಯವಸ್ಥೆ ವೃದ್ಧರಿಗೆ, ಅಂಗವಿಕಲರಿಗೆ ಅನುಕೂಲವಾಗುವಂತೆ ಮಡಚುವ ಮೆಟ್ಟಿಲುಗಳು ಈ ರೈಲಿನಲ್ಲಿದೆ.
जोर स्पीड का झटका धीरे से लगा: Train 18 exceeds 180kmph during trial. The stability of water bottles at this speed is testament to the quality of workmanship and design of our engineers pic.twitter.com/CImC49ljgm
— Piyush Goyal (@PiyushGoyal) December 2, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv