ದಿನದಿಂದ ದಿನಕ್ಕೆ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಲೇ ಇದೆ. ದಿನಕ್ಕೊಂದು ಆವಿಷ್ಕಾರಗಳ ಮೂಲಕ ತಂತ್ರಜ್ಞಾನ ಕ್ಷೇತ್ರ ಸದಾ ಸುದ್ದಿಯಲ್ಲಿರುತ್ತದೆ. ಇಷ್ಟು ದಿನ ನಾವೆಲ್ಲಾ ರಸ್ತೆ ಸಾರಿಗೆ, ಹಡಗು, ರೈಲು ಹಾಗೂ ವಿಮಾನದಲ್ಲಿ ಸಂಚರಿಸುತ್ತಿದ್ದೆವು. ಆದರೆ ಈಗ ಅದಕ್ಕೂ ಮೀರಿದ ವೇಗದಲ್ಲಿ ಹೋಗಬಹುದಾದ ಐದನೇ ಮಾದರಿಯ ಸಂಚಾರ ಸಾಧನವನ್ನು ಕಂಡುಹಿಡಿದಿದ್ದು, ಪಾಯೋಗಿಕ ಪರೀಕ್ಷೆ ಕೂಡ ಯಶಸ್ವಿಯಾಗಿದೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್‌ನಲ್ಲಿ ನಿರ್ಮಿಸಲಾದ ತನ್ನ ಮೊದಲ ಹೈಪರ್‌ಲೂಪ್ ಪರೀಕ್ಷಾ ಟ್ರ್ಯಾಕ್, ಆವಿಷ್ಕಾರ್ ಹೈಪರ್‌ಲೂಪ್ ಅನ್ನು ಅನಾವರಣಗೊಳಿಸುವ ಮೂಲಕ ಭಾರತ ಸಾರಿಗೆಯಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ರೈಲ್ವೆ ಸಚಿವಾಲಯದ ಸಹಯೋಗದೊಂದಿಗೆ ಐಐಟಿ ಮದ್ರಾಸ್, ಭಾರತದ ಮೊದಲ ಹೈಪರ್‌ಲೂಪ್ ಪರೀಕ್ಷಾ ಹಳಿಯನ್ನು ಅಭಿವೃದ್ಧಿಪಡಿಸಿದೆ.
ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಈ ಅಭಿವೃದ್ಧಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಆರಂಭಿಕ ಪರೀಕ್ಷಾ ಹಳಿ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕವಾಗಿದೆ ಎಂದು ಹೇಳಿದರು. ಈ ವಿಚಾರವಾಗಿ ಅಶ್ವಿನಿ ವೈಷ್ಣವ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಸರ್ಕಾರ-ಶೈಕ್ಷಣಿಕ ಸಹಯೋಗವು ಭವಿಷ್ಯದ ಸಾರಿಗೆಯಲ್ಲಿ ನಾವೀನ್ಯತೆಗೆ ಚಾಲನೆ ನೀಡುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ.
422 ಮೀಟರ್ ಉದ್ದದ ಈ ಸೌಲಭ್ಯವನ್ನು ರೈಲ್ವೆ ಸಚಿವಾಲಯದ ಬೆಂಬಲ ಮತ್ತು ಎಲ್& ಟಿ ಕನ್ಸ್ಟ್ರಕ್ಷನ್ಸ್ ಸೇರಿದಂತೆ ಹಲವಾರು ಪಾಲುದಾರರ ಪ್ರಯತ್ನಗಳಿಂದ ಅಭಿವೃದ್ಧಿಪಡಿಸಲಾಗಿದೆ.
ಈ ಯೋಜನೆಯನ್ನು ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ರೈಲ್ವೆ ಸಚಿವಾಲಯದ ಫಂಡ್ನೊಂದಿಗೆ ಹಮ್ಮಿಕೊಳ್ಳಲಾಗಿದೆ. 422 ಮೀಟರ್‌ಗಳ ಮೊದಲ ಪಾಡ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇನ್ನಷ್ಟು ಸಮಯ ಬೇಕಾಗಲಿದೆ. ಮೊದಲ ಎರಡು ಹಂತದ ಫಂಡ್ ಈಗಾಲೇ ಬಿಡುಗಡೆ ಮಾಡಲಾಗಿತ್ತು. ಇದೀಗ ಹೈಪರ್‌ಲೂಪ್ ಯೋಜನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಕ್ಕಾಗಿ ಒಂದು ಮಿಲಿಯನ್ ಡಾಲರ್‌ಗಳ ಅನುದಾನದ ಮೂರನೇ ಕಂತನ್ನು ಐಐಟಿ ಮದ್ರಾಸ್‌ಗೆ ನೀಡುವ ಸಮಯ ಬಂದಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ತಂತ್ರಜ್ಞಾನವನ್ನು ಸಂಪೂರ್ಣವಾಗಿ ಪರೀಕ್ಷಿಸಿ ಸಿದ್ಧವಾದ ನಂತರ ಭಾರತೀಯ ರೈಲ್ವೆ ಮೊದಲ ವಾಣಿಜ್ಯ ಯೋಜನೆಯನ್ನು ಪ್ರಾರಂಭಿಸಲಿದೆ. ಹೈಪರ್‌ಲೂಪ್ ತಂತ್ರಜ್ಞಾನದಲ್ಲಿ ವಿಮಾನಕ್ಕಿಂತ ಎರಡು ಪಟ್ಟು ವೇಗದಲ್ಲಿ ಸಂಚರಿಸಬಹುದಾಗಿದೆ. ಕಡಿಮೆ ವಿದ್ಯುತ್ ಬಳಕೆ ಮತ್ತು 24 ಗಂಟೆಗಳ ಕಾರ್ಯಾಚರಣೆಗೆ ಶಕ್ತಿ ಸಂಗ್ರಹಣೆಯೊಂದಿಗೆ ಇದು ಕಾರ್ಯಾಚರಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೈಪರ್‌ಲೂಪ್ ಎಂದರೇನು?
ʼಐದನೇ ಸಾರಿಗೆ ವಿಧಾನʼ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಹೈಪರ್‌ಲೂಪ್, ದೂರದ ಪ್ರಯಾಣದಲ್ಲಿ ಕ್ರಾಂತಿಯನ್ನುಂಟುಮಾಡುವ ಒಂದು ಹೈ-ಸ್ಪೀಡ್ ಸಾರಿಗೆ ವ್ಯವಸ್ಥೆಯಾಗಿದೆ. ಇದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಕ್ಯಾಪ್ಸುಲ್‌ಗಳು ಅಥವಾ ಪಾಡ್‌ಗಳನ್ನು ಕಡಿಮೆ ಗಾಳಿಯ ಪ್ರತಿರೋಧದೊಂದಿಗೆ ಮುಂದೂಡಲು ನಿರ್ವಾತ ಟ್ಯೂಬ್‌ಗಳನ್ನು ಬಳಸುತ್ತದೆ.ಈ ಕ್ಯಾಪ್ಸುಲ್‌ಗಳು ಗಂಟೆಗೆ 1,000 ಕಿಮೀಗಿಂತ ಹೆಚ್ಚಿನ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ.
ಸರಳವಾಗಿ ಹೇಳುವುದಾದರೆ, ಹೈಪರ್‌ಲೂಪ್ ನಿರ್ವಾತ ಕೊಳವೆಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಗಾಳಿಯ ಒತ್ತಡವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಈ ಕೊಳವೆಗಳೊಳಗೆ ಅಮಾನತುಗೊಂಡಿರುವ ಕ್ಯಾಪ್ಸುಲ್‌ಗಳು ಪ್ರಯಾಣಿಸಲು ಮ್ಯಾಗ್ನೆಟಿಕ್ ಲೆವಿಟೇಶನ್ ಅಥವಾ ವಿದ್ಯುತ್ಕಾಂತೀಯ ಪ್ರೊಪಲ್ಷನ್ ಅನ್ನು ಬಳಸುತ್ತವೆ. ಈ ವ್ಯವಸ್ಥೆಯು ಸಾಮಾನ್ಯವಾಗಿ ವಾಹನಗಳನ್ನು ನಿಧಾನಗೊಳಿಸುವ ಘರ್ಷಣೆ ಮತ್ತು ಎಳೆತವನ್ನು ನಿವಾರಿಸುತ್ತದೆ, ಇದು ಅಭೂತಪೂರ್ವ ವೇಗವನ್ನು ಸಕ್ರಿಯಗೊಳಿಸುತ್ತದೆ.
ಪ್ರತಿಯೊಂದು ಪಾಡ್ 24-28 ಪ್ರಯಾಣಿಕರನ್ನು ಹೊತ್ತೊಯ್ಯಬಹುದು ಮತ್ತು ಯಾವುದೇ ನಿಲ್ದಾಣಗಳಿಲ್ಲದೆ ನೇರವಾಗಿ ಗಮ್ಯಸ್ಥಾನಗಳ ನಡುವೆ ಪ್ರಯಾಣಿಸಬಹುದು. ಇದು ಹೈಪರ್‌ಲೂಪ್ ಅನ್ನು ಹೆಚ್ಚು ಪರಿಣಾಮಕಾರಿ ಸಾರಿಗೆ ಆಯ್ಕೆಯನ್ನಾಗಿ ಮಾಡುತ್ತದೆ, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಹೈಪರ್‌ಲೂಪ್ ಎಷ್ಟು ವೇಗವಾಗಿ ಹೋಗಬಹುದು?
ಹೈಪರ್‌ಲೂಪ್‌ನ ಅತ್ಯಂತ ರೋಮಾಂಚಕಾರಿ ವೈಶಿಷ್ಟ್ಯವೆಂದರೆ ಅದರ ವೇಗ. ಈ ವ್ಯವಸ್ಥೆಯು ಗಂಟೆಗೆ 1,200 ಕಿ.ಮೀ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ, ಇದು ಸಾಂಪ್ರದಾಯಿಕ ರೈಲುಗಳು ಅಥವಾ ವಾಣಿಜ್ಯ ವಿಮಾನಗಳಿಗಿಂತ ಹೆಚ್ಚು ವೇಗವಾಗಿರುತ್ತದೆ.
ಉದಾಹರಣೆಗೆ, ದೆಹಲಿಯಿಂದ ಮುಂಬೈಗೆ (ಸುಮಾರು 1,500 ಕಿ.ಮೀ) ಪ್ರಯಾಣವನ್ನು ಕೇವಲ 90 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು, ಆದರೆ ದೆಹಲಿಯಿಂದ ಜೈಪುರಕ್ಕೆ (ಸುಮಾರು 300 ಕಿ.ಮೀ) ಪ್ರಯಾಣವು ಕೇವಲ 30 ನಿಮಿಷಗಳಷ್ಟನ್ನು ತೆಗೆದುಕೊಳ್ಳಬಹುದು.
ಭಾರತದಲ್ಲಿ ಹೈಪರ್‌ಲೂಪ್ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಅದರ ಸಾಮರ್ಥ್ಯ ಅಗಾಧವಾಗಿದೆ. ಪರೀಕ್ಷಾ ಟ್ರ್ಯಾಕ್‌ನ ಅಭಿವೃದ್ಧಿ ಮತ್ತು ಆವಿಷ್ಕಾರ್ ತಂಡದ ನಡೆಯುತ್ತಿರುವ ಕೆಲಸಗಳು ಭಾರತದಲ್ಲಿ ಅತಿ ವೇಗದ ಪ್ರಯಾಣದ ಕನಸನ್ನು ನನಸಾಗಿಸುವತ್ತ ನಿರ್ಣಾಯಕ ಹೆಜ್ಜೆಗಳಾಗಿವೆ.
ಜಾಗತಿಕವಾಗಿ, ಹೈಪರ್‌ಲೂಪ್ ಪರಿಕಲ್ಪನೆಯನ್ನು ಮೊದಲು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು 2013 ರಲ್ಲಿ ‘ಹೈಪರ್‌ಲೂಪ್ ಆಲ್ಫಾ’ ಎಂದು ಪರಿಚಯಿಸಿದರು. ಭಾರತದಲ್ಲಿ ಈಗಾಗಲೇ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಯೋಜನೆ ಜಾರಿಯಾಗಬಹುದು. ಮೊದಲ ಯೋಜನೆ ಮುಂಬೈ ಹಾಗೂ ಪುಣೆ ನಡುವೆ ಜಾರಿಯಾಗಲಿದೆ. ಅದಾದ ಮೇಲೆ ಅನೇಕ ನಗರಗಳಿಗೆ ಅದನ್ನು ವಿಸ್ತರಿಸಲಾಗುತ್ತದೆ. ಭಾರತದಲ್ಲಿ ವರ್ಜಿನ್ ಕಂಪನಿಯು ಹೈಪರ್ ಲೂಪ್ ತಂತ್ರಜ್ಞಾನವನ್ನು ತರಲಿದೆ.
1992ರಲ್ಲಿ ಸ್ವಿಜರ್ಲೆಂಡ್ ನಲ್ಲಿ ಮೊದಲು ಹೈಪರ್ ಲೂಪ್ ತಂತ್ರಜ್ಞಾನ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಲಾಗಿತ್ತು. ಆದರೆ, ಆಗ ಇತರ ದೇಶಗಳಿಗೆ ಅದರ ಪ್ರಾಮುಖ್ಯತೆ ಗೊತ್ತಾಗಲಿಲ್ಲ. ಆದರೆ, ಜನಸಂಖ್ಯೆ ಹೆಚ್ಚಾಗಿ, ನಗರಗಳು ಅಭಿವೃದ್ಧಿಯಾಗಿ, ವ್ಯಾಪಾರ ವ್ಯವಹಾರಗಳು ದೊಡ್ಡ ಮಟ್ಟದಲ್ಲಿ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ವೇಗವಾಗಿ ಸಾಗುವ ಸಾರಿಗೆ ವ್ಯವಸ್ಥೆಗಳು ಇಂದಿನ ಜಗತ್ತಿಗೆ ಅನಿವಾರ್ಯವಾಗಲಿವೆ. ಈಗಾಗಲೇ ಸ್ವಿಟ್ಜರ್ಲೆಂಡ್, ಅಮೆರಿಕ, ಇಟಲಿ, ನೆದರ್‌ಲೆಂಡ್ ಸೇರಿ ಜಗತ್ತಿನ ಏಳು ರಾಷ್ಟ್ರಗಳು ಹೈಪರ್ ಲೂಪ್ ರೈಲು ವ್ಯವಸ್ಥೆಯನ್ನು ತಮ್ಮದಾಗಿಸಿಕೊಂಡಿವೆ. ಭಾರತ ಆ ವ್ಯವಸ್ಥೆ ಅಳವಡಿಸಿಕೊಂಡ ಎಂಟನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.