Connect with us

Latest

ಬುಲೆಟ್ ರೈಲಿನಿಂದಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ: ಮೋದಿ

Published

on

ಅಹಮದಾಬಾದ್: ಬುಲೆಟ್ ರೈಲಿನಿಂದ ಎರಡು ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಪಾನಿನ ಪ್ರಧಾನಿ ಶಿಂಜೋ ಅಬೆ ಜೊತೆಗೂಡಿ ಅಹಮದಾಬಾದ್‍ನಲ್ಲಿ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕಸ್ಥಾಪನೆಯನ್ನು ಮೋದಿ ನೆರವೇರಿಸಿದರು. ಬಳಿಕ ಬುಲೆಟ್ ರೈಲು ಯೋಜನೆಗೆ ಹಣಕಾಸಿನ ಸಹಕಾರ ನೀಡಿದ್ದಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಧನ್ಯವಾದ ಹೇಳಿದರು.

ಇದು ಭಾರತದ ದಶಕಗಳ ಕನಸನಾಗಿದ್ದು, ಎರಡು ದೇಶಗಳ ಸ್ನೇಹ ಪೂರಕವಾಗಿ ಜಪಾನ್ ಭಾರತಕ್ಕೆ ಬುಲೆಟ್ ರೈಲನ್ನು ನೀಡುತ್ತಿರುವ ಉಡುಗೊರೆಯಿದು. ಬುಲೆಟ್ ರೈಲು ಯೋಜನೆಯು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಮಂದಿ ಉದ್ಯೋಗ ನೀಡಲಿದೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ಬಡತನ ನಿರ್ಮೂಲನೆಯಾಗುವ ಮೂಲಕ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ಯಾವುದೇ ದೇಶ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದರೆ ಅದು ಅಭಿವೃದ್ಧಿಯನ್ನು ಸೂಚಿಸುತ್ತದೆ. ಆದ್ದರಿಂದ ಸಾರಿಗೆ ವ್ಯವಸ್ಥೆ ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಭಾರತವು ಯಾವಾಗ ಬುಲೆಟ್ ರೈಲನ್ನು ಪ್ರಾರಂಭಿಸುತ್ತದೆ ಎಂದು ಚಿಂತೆಯಾಗಿತ್ತು. ಆದರೆ ಇಂದು ಈ ಯೋಜನೆಗೆ ಚಾಲನೆ ನೀಡಿದ ಬಳಿಕ ನನಗೆ ಭರವಸೆ ಬಂದಿದೆ. ಆದ್ದರಿಂದ ಈ ಯೋಜನೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದರು.

ಯಾವುದೇ ವ್ಯಕ್ತಿಯಾಗಲಿ ಅಥವಾ ದೇಶವಾಗಲಿ ಸಾಲ ಕೊಟ್ಟು 50 ವರ್ಷಗಳಲ್ಲಿ ಸಾಲ ಹಿಂದಿರುಗಿಸು ಎಂದು ಯಾರಾದರೂ ಹೇಳುತ್ತಾರಾ? ಆದರೆ ಭಾರತದ ಮಿತ್ರ ಜಪಾನ್ ನಮ್ಮ ಮೇಲೆ ನಂಬಿಕೆಯನ್ನು ಇಟ್ಟು ತಾಂತ್ರಿಕ ನೆರವು ಅಲ್ಲದೇ ಶೇ.01 ಬಡ್ಡಿ ದರದಲ್ಲಿ 88 ಸಾವಿರ ಕೋಟಿ ರೂ. ಹಣವನ್ನು ಸಾಲವಾಗಿ ನೀಡಿದೆ. ಈ ಕಾರಣಕ್ಕೆ ಬುಲೆಟ್ ರೈಲು ಜಪಾನ್ ನೀಡುತ್ತಿರುವ ಉಡುಗೊರೆ ಎಂದು ಹೇಳಿದೆ ಎಂದು ಮೋದಿ ಬಣ್ಣಿಸಿದರು.

ಬುಲೆಟ್ ರೈಲು ನವ ಭಾರತದ ಸಂಕೇತವಾಗಿದ್ದು ಇದಕ್ಕೆ ಕಾರಣರಾದ ನನ್ನ ಮಿತ್ರ ಅಬೆ ಅವರಿಗೆ ಧನ್ಯವಾದಗಳು. ಜೊತೆಗೆ ಈ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮತ್ತು ಭಾರತದ ಸಮಸ್ತ ಜನರಿಗೆ ಧನ್ಯವಾದಗಳನ್ನು ತಿಳಿಸಿ ಮೋದಿ ಭಾಷಣ ಮುಕ್ತಾಯಗೊಳಿಸಿದರು.

Click to comment

Leave a Reply

Your email address will not be published. Required fields are marked *

www.publictv.in