– ಜಿಡಿಪಿ ಪ್ರಗತಿ; ಯಾವ ವರ್ಷ ಎಷ್ಟಿತ್ತು?
ನವದೆಹಲಿ: ಭಾರತದ ಆರ್ಥಿಕತೆ (Indian Economy) ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 7.8% ರಷ್ಟು ಜಿಡಿಪಿ (GDP) ಬೆಳವಣಿಗೆ ಸಾಧಿಸಿದ್ದು, 2023-24ರ ಹಣಕಾಸು ವರ್ಷದಲ್ಲಿ 8.2% ಪ್ರಗತಿ ಸಾಧಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಇದಿನ್ನೂ ಟ್ರೇಲರ್ ಎಂದು ಹೇಳಿದ್ದಾರೆ.
The Q4 GDP growth data for 2023-24 shows robust momentum in our economy which is poised to further accelerate. Thanks to the hardworking people of our country, 8.2% growth for the year 2023-24 exemplifies that India continues to be the fastest growing major economy globally. As…
— Narendra Modi (@narendramodi) May 31, 2024
ಜಿಡಿಪಿ ಪ್ರಗತಿ ಮೋದಿ ಶ್ಲಾಘನೆ:
2023-24ರ Q4 GDP ಬೆಳವಣಿಗೆಯ ದತ್ತಾಂಶವು ನಮ್ಮ ಆರ್ಥಿಕತೆಯಲ್ಲಿ ದೃಢವಾದ ಆವೇಗವನ್ನು ತೋರಿಸುತ್ತದೆ. ಅದಕ್ಕಾಗಿ ಶ್ರಮವಹಿಸಿ ದುಡಿಯುವ ನಮ್ಮ ದೇಶದ ಜನತೆಗೆ ಧನ್ಯವಾದ ಹೇಳಲು ಬಯಸುತ್ತೇನೆ. 2023-24ರ ಹಣಕಾಸು ವರ್ಷದಲ್ಲಿ 8.2% ಜಿಡಿಪಿ ಬೆಳವಣಿಗೆಯು ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ದೇಶ ಮತ್ತು ಪ್ರಮುಖ ಆರ್ಥಿಕತೆಯ ದೇಶವಾಗಿ ಮುನ್ನುಗ್ಗುತ್ತಿದೆ ಎಂಬುದನ್ನು ನಿರೂಪಿಸುತ್ತದೆ. ನಾನು ಹೇಳಿದಂತೆ, ಇದಿನ್ನೂ ಟ್ರೇಲರ್ ಅಷ್ಟೇ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
2023-24ರ ಹಣಕಾಸು ವರ್ಷದಲ್ಲಿ ಆರ್ಬಿಐ (RBI) ಸೇರಿದಂತೆ ಬಹುತೇಕ ಎಲ್ಲಾ ಸಂಸ್ಥೆಗಳು ಅಂದಾಜು ಮಾಡಿದ್ದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಆರ್ಥಿಕತೆ ಬೆಳವಣಿಗೆ ಸಾಧಿಸಿದೆ. ವಿವಿಧ ಆರ್ಥಿಕ ತಜ್ಞರು, ವಿದೇಶದಲ್ಲಿರುವ ರೇಟಿಂಗ್ ಸಂಸ್ಥೆಗಳು ಜಿಡಿಪಿ ದರ 7.5% ದಾಖಲಿಸಬಹುದು ಎಂದು ಭವಿಷ್ಯ ನುಡಿದಿದ್ದವು. ಐಎಂಎಫ್ 6.8% ರಷ್ಟು ಮಾತ್ರ ಜಿಡಿಪಿ ದಾಖಲಿಸಬಹುದು ಎಂದು ಅಂದಾಸಿಜಿತ್ತು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾವಾಗಿದ್ದು ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿಯಾಗಿದೆ.
ಯಾವ ವರ್ಷ ಎಷ್ಟಿತ್ತು?
2012-13 : 5.5%
2013-14 : 6.4%
2016-17 : 8.3%
2020-21 : -5.8%
2021-22 : 9.7%
2022-23 : 7.0%
2023-24 : 8.2%
ಜಿಡಿಪಿ ಎಂದರೇನು?
ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಎಂದರ್ಥ. ಅಂದರೆ ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪದನೆಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ. ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಗಣಿಗಾರಿಕೆ, ರಿಯಲ್ ಎಸ್ಟೇಟ್, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿ ಎಷ್ಟು ಎಂದು ಲೆಕ್ಕ ಹಾಕಲಾಗುತ್ತದೆ.