ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

Public TV
2 Min Read
VIKRANT

ನವಹದೆಲಿ: ದೇಶವು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ‘ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ವಿಮಾನವಾಹಕ ಯುದ್ಧನೌಕೆ ‘ವಿಕ್ರಾಂತ್‌’ ಅನ್ನು ಸೆಪ್ಟೆಂಬರ್‌ 2ರಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಿದ್ದಾರೆ.

ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾದ ಯುದ್ಧ ನೌಕೆ ವಿಕ್ರಾಂತ್‌ ಅನ್ನು ಈಗಾಗಲೇ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದ್ದು, ಅಂದು ಪ್ರಧಾನಿ ಅಧೀಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸ್ಥಾನವನ್ನು ಗಮನಾರ್ಹವಾಗಿ ಬಲಪಡಿಸುವ ನಿಟ್ಟಿನಲ್ಲಿ ಈ ನೌಕೆ ಕಾರ್ಯ ನಿರ್ವಹಿಸಲಿದೆ. ವಿಕ್ರಾಂತ್‌ ಕಳೆದ ಜುಲೈನಲ್ಲಿ ತನ್ನ ಅಂತಿಮ ಹಂತದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

02 5 1

ವಿಕ್ರಾಂತ್ ನಿರ್ಮಾಣವನ್ನು 2009ರ ಫೆಬ್ರವರಿ 28ರಿಂದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಪ್ರಾರಂಭಿಸಲಾಯಿತು. 2020ರ ಡಿಸೆಂಬರ್ ನಲ್ಲಿ ಸಿಎಸ್ಎಲ್ ನಡೆಸಿದ ಜಲಾನಯನ ಪ್ರಯೋಗಗಳಲ್ಲಿ ವಿಮಾನವಾಹಕ ನೌಕೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. 40 ಸಾವಿರ ಟನ್ ತೂಕದ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ವಿಕ್ರಾಂತ್ ಎಲ್ಲಾ 4 ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲ ಪರೀಕ್ಷೆಯು ಕಳೆದ ವರ್ಷ ಆಗಸ್ಟ್ 21ರಂದು ಪೂರ್ಣಗೊಂಡಿತು. 2ನೇಯದು ಅಕ್ಟೋಬರ್ 21ರಂದು ಮತ್ತು 3ನೇ ಪರೀಕ್ಷೆಯು ಈ ವರ್ಷ ಜನವರಿ 22 ರಂದು ಪೂರ್ಣಗೊಂಡಿತು. ವಿಕ್ರಾಂತ್ ಕೊನೆಯ ಮತ್ತು 4ನೇ ಸಮುದ್ರ ಪ್ರಯೋಗಗಳು ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದು ಇದು ಈ ತಿಂಗಳ ಆರಂಭದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

02 6 1

ಇದು MiG-29K ಫೈಟರ್ ಜೆಟ್‌ಗಳು, Kamov-31, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳ ಜೊತೆಗೆ ಸ್ಥಳೀಯವಾಗಿ ನಿರ್ಮಿಸಲಾದ ಲಘು ಹೆಲಿಕಾಪ್ಟರ್‌ಗಳು (ALH) ಮತ್ತು ಲಘು ಯುದ್ಧ ವಿಮಾನ (LCA) ಸೇರಿದಂತೆ ಸುಮಾರು 30 ವಿಮಾನಗಳನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು Kamov Ka-31 ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಅನ್ನು ಅಳವಡಿಸಲಾಗಿದೆ. ವಿಕ್ರಾಂತ್‌ ಅನ್ನು ಸೇನೆಗೆ ಸೇರಿಸುವ ಮೂಲಕ ಭಾರತವು ಸ್ಥಳೀಯವಾಗಿ ವಿಮಾನನೌಕೆ ವಿನ್ಯಾಸಗೊಳಿಸುವ ಮತ್ತು ಸ್ಥಾಪಿಸುವ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದೆ.

VIKRANT

ವಿಕ್ರಾಂತ್‌ ವಿಶೇಷತೆ ಏನು?

  • ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಓಆರ್) ಭಾರತದ ಸ್ಥಾನವನ್ನು ಮತ್ತು ನೀಲಿಜಲ ನೌಕಾಪಡೆಯ ಅನ್ವೇಷಣೆಯನ್ನು ಹೆಚ್ಚಿಸಲು‌ ಕಾರ್ಯನಿರ್ವಹಿಸುತ್ತದೆ.
  • 2,300 ವಿಭಾಗಗಳನ್ನು ಹೊಂದಿದ್ದು, ಮಹಿಳಾ ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳನ್ನು ಒಳಗೊಂಡಂತೆ 1,700 ಸಿಬ್ಬಂದಿಗಾಗಿ ವಿನ್ಯಾಸ ಮಾಡಲಾಗಿದೆ.
  • ನೌಕೆಯು 262 ಮೀಟರ್‌ ಉದ್ದ, 62 ಮೀಟರ್‌ ಅಗಲ ಮತ್ತು 59 ಮೀಟರ್ ಎತ್ತರವಿದೆ. ಇದರ ನಿರ್ಮಾಣಕಾರ್ಯ 2009ರಲ್ಲಿ ಆರಂಭಗೊಂಡಿತ್ತು.
  • 8 ಪವರ್‌ ಜನರೇಟರ್‌ಗಳನ್ನು ಒಳಗೊಂಡಿದ್ದು, ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಆಸ್ಪತ್ರೆಯನ್ನೂ ಇದೇ ಸಂಕಿರ್ಣದಲ್ಲಿ ನಿರ್ಮಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article