ಹೈದರಾಬಾದ್: ಸೌದಿ ಅರೇಬಿಯಾದ ರಿಯಾದ್‍ನಲ್ಲಿ ಭಾರತದ ಮಹಿಳೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಶಾಹಿನ್(41) ನಿಗೂಢವಾಗಿ ಮೃತಪಟ್ಟ ಮಹಿಳೆ. ಈ ಘಟನೆ ಕುರಿತು ಮೃತಪಟ್ಟ ಮಹಿಳೆಯ ಕುಟುಂಬದವರು ಮಾಲೀಕನೇ ಶಾಹಿನ್ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯವನ್ನು ಕೋರಿದ್ದು ಮೃತ ದೇಹವನ್ನು ಸೌದಿ ಅರೇಬಿಯಾದಿಂದ ವಾಪಸ್ಸು ತರಲು ಮನವಿ ಮಾಡಿಕೊಂಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗವಿದ್ದು ತಿಂಗಳಿಗೆ 20 ಸಾವಿರ ಸಂಬಳ ಇದೆ ಎಂದು ಮಧ್ಯವರ್ತಿಯೊಬ್ಬರು ನನ್ನ ತಾಯಿಗೆ ತಿಳಿಸಿದ್ದರು. ಮಧ್ಯವರ್ತಿಯ ಮಾತನ್ನು ನಂಬಿ ದುಬೈನಲ್ಲಿ ಕೆಲಸ ಮಾಡುತ್ತಿದ್ದ ತಾಯಿ ರಿಯಾದ್ ಗೆ ತೆರಳಿದ್ದರು. ಆದರೆ 20 ಸಾವಿರ ಸಂಬಳ ನೀಡದೇ 16 ಸಾವಿರ ಸಂಬಳ ನೀಡುತ್ತಿದ್ದರು ಎಂದು ಮೃತ ಶಾಹಿನ ಮಗಳಾದ ಬಸೀನ ತಿಳಿಸಿದ್ದಾರೆ.
ತಾಯಿ ಶಾಹಿನ್ ಸೌದಿ ಅರೇಬಿಯಾ ತಲುಪಿದ ನಂತರ ಅವರ ಮಾಲೀಕ ತಾಯಿಯನ್ನು ಮನೆ ಕೆಲಸಕ್ಕೆ ನೇಮಕ ಮಾಡಿ ತನ್ನ ಮಕ್ಕಳನ್ನು ನೋಡಿಕೊಳ್ಳಲು ಹೇಳಿದ್ದಾನೆ. ಈ ನಡುವೆ ತನ್ನ ತಾಯಿಯ ಆರೋಗ್ಯ ಜುಲೈನಿಂದ ಕ್ಷೀಣಿಸಲು ಆರಂಭವಾಯಿತು. ಹೀಗಾಗಿ ತನ್ನ ತಾಯಿ ಭಾರತಕ್ಕೆ ಮರಳಿ ಕಳುಹಿಸಲು ಅವರ ಮಾಲೀಕನೊಂದಿಗೆ ಮನವಿ ಮಾಡಲು ನನ್ನನ್ನು ಕೇಳಿಕೊಂಡರು. ನಾನು ಮಾಲೀಕನನ್ನು ಕೇಳಿದಾಗ ತಾಯಿಯನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದ. ಆದರೆ ಮಾಲೀಕ ತಾಯಿಗೆ ನಿತ್ಯವು ಕಿರುಕುಳವನ್ನು ನೀಡಿ ಬೆದರಿಕೆ ಹಾಕುತ್ತಿದ್ದನು. ಶುಕ್ರವಾರ ಮಾಲೀಕ ಕರೆ ಮಾಡಿ ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ. ಈ ವೇಳೆ ಮೃತಪಟ್ಟಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಕರೆಯನ್ನು ಕಡಿತಗೊಳಿಸಿದ್ದಾನೆ. ಹೀಗಾಗಿ ಆತನೇ ಕೊಲೆ ಮಾಡಿರಬಹುದು ಎಂದು ಬಸೀನ ಶಂಕೆ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv