ವಾಷಿಂಗ್ಟನ್: ಎಫ್‍ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿ ಈಗ ಭಾರತೀಯ ಮೂಲದ ಆರೋಪಿಯೊಬ್ಬನ ಹೆಸರು ಸೇರಿದೆ.
ತನ್ನ ಹೆಂಡತಿಯನ್ನು ಅಮೆರಿಕದ ರೆಸ್ಟೊರೆಂಟ್‍ವೊಂದರಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾದ 26 ವರ್ಷದ ಭದ್ರೇಶ್‍ಕುಮಾರ್ ಚೇತನ್‍ಭಾಯ್ ಪಟೇಲ್ 2 ವರ್ಷದ ಹಿಂದೆ ಪರಾರಿಯಾಗಿದ್ದು, ಮಂಗಳವಾರದಂದು ಆತನ ಹೆಸರನ್ನು ಎಫ್‍ಬಿಐಗೆ ಬಹು ಮುಖ್ಯವಾಗಿ ಬೇಕಿರುವ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ಭದ್ರೇಶ್ ಕುಮಾರ್ ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ಡಾಲರ್(ಅಂದಾಜು 65 ಲಕ್ಷ ರೂ) ಬಹುಮಾನ ನೀಡುವುದಾಗಿ ಹೇಳಿದೆ.
Advertisement
Advertisement
ಭದ್ರೇಶ್ ಕುಮಾರ್ ಹಾಗೂ ಪತ್ನಿ ಪಲಕ್ ಪಟೇಲ್ ಒಂದೇ ರೆಸ್ಟೊರೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದರು. 2015ರ ಏಪ್ರಿಲ್ 12ರಂದು ಮೆರಿಲ್ಯಾಂಡ್‍ನ ಹ್ಯಾನೋವರ್‍ನಲ್ಲಿ ರೆಸ್ಟೊರೆಂಟ್‍ನ ಅಡುಗೆಮನೆಯಲ್ಲಿ ಭದ್ರೇಶ್ ಕುಮಾರ್ ಪತ್ನಿಯನ್ನ ದೊಡ್ಡ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಲಾಗಿತ್ತು.
Advertisement
ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಕಾರಣ ಭದ್ರೇಶ್ ಕುಮಾರ್ ಹೆಸರು ಈಗ ಎಫ್‍ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿದೆ ಎಂದು ಎಫ್‍ಬಿಐನ ವಿಶೇಷ ಏಜೆಂಟ್ ಜಾರ್ಡನ್ ಬಿ. ಜಾನ್ಸನ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಬಿಐ ರೆಸ್ಟೊರೆಂಟಿನ ಸಿಸಿಟಿವಿ ದೃಶ್ಯಾವಳಿಯನ್ನ ಬಿಡುಗಡೆ ಮಾಡಿತ್ತು. ಕೊಲೆ ನಡೆದ ದಿನ ಭದ್ರೇಶ್ ಕುಮಾರ್ ಹಾಗೂ ಆತನ ಪತ್ನಿ ಪಲಕ್ ರೆಸ್ಟೊರೆಂಟ್‍ನ ಅಡುಗೆಮನೆಯಲ್ಲಿ ಒಟ್ಟಿಗೆ ನಡೆದುಕೊಂಡು ಹೋಗಿದ್ದಾರೆ. ನಂತರ ಭದ್ರೇಶ್ ಮಾತ್ರ ಹೊರಬಂದಿದ್ದು ಓವನ್ ಆಫ್ ಮಾಡಿ ಅಲ್ಲಿಂದ ಹೊರಟುಹೋಗಿದ್ದಾನೆ.
ಭದ್ರೇಶ್ ಕುಮಾರ್ ವಿರುದ್ಧ ಹಲ್ಲೆ, ಕೊಲೆ ಹಾಗೂ ಅಸ್ತ್ರ ಹೊಂದಿದ್ದ ಆರೋಪದಡಿ ಪ್ರಕರಣ ದಾಖಲಾಗಿದೆ. 2015ರ ಏಪ್ರಿಲ್ 13ರಂದು ಬೆಳಿಗ್ಗೆ 10 ಗಂಟೆ ವೇಳೆಯಲ್ಲಿ ಭದ್ರೇಶ್, ನ್ಯೂ ಜೆರ್ಸಿಯ ನೇವಾರ್ಕ್ ಪೆನ್ ಸ್ಟೇಷನ್‍ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಎಂದು ವರದಿಯಾಗಿದೆ. ಭದ್ರೇಶ್ ಕುಮಾರ್ ಮೂಲತಃ ಗುಜರಾತ್‍ನವನಾಗಿದ್ದು, ಅಮೆರಿಕದಲ್ಲಿರಲು ವೀಸಾ ಹೊಂದಿದ್ದ. ಆದ್ರೆ ಆತನ ವೀಸಾ ಅವಧಿ ಮುಗಿದಿದ್ದು, ಕಾನೂನುಬದ್ಧವಾಗಿ ದೇಶ ಬಿಟ್ಟು ಹೋಗಿರೋ ಸಾಧ್ಯತೆಗಳಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಪಲಕ್ ಭಾರತಕ್ಕೆ ಹಿಂದಿರುಗಬೇಕೆಂದಿದ್ದರು. ಆದ್ರೆ ಇದಕ್ಕೆ ಭದ್ರೇಶ್‍ನ ವಿರೋಧವಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಭದ್ರೇಶ್ ಪತ್ತೆಗಾಗಿ ಈವರೆಗೆ ಸಾಕಷ್ಟು ಪ್ರಯತ್ನ ನಡೆಸಲಾಗಿದ್ದು, ಯಾವುದೂ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.