ಬರ್ಲಿನ್: ಹೊಸ ವರ್ಷದಂದೇ ಜರ್ಮನಿಯಲ್ಲಿ (Germany) ಭಾರತೀಯ ವಿದ್ಯಾರ್ಥಿ (Indian Student) ಸಾವನ್ನಪ್ಪಿದ್ದಾನೆ. ಸಂಕ್ರಾಂತಿ ಹಬ್ಬಕ್ಕೆ ಮಗ ಮನೆಗೆ ಬರ್ತಾನೆ ಅಂತ ಕಾಯುತ್ತಿದ್ದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.
ತೆಲಂಗಾಣದ ಹೃತಿಕ್ ರೆಡ್ಡಿ ಮೃತ ವಿದ್ಯಾರ್ಥಿ. ಜರ್ಮನಿಯಲ್ಲಿರುವ ನಿವಾಸದಲ್ಲಿ ತೀವ್ರ ಬೆಂಕಿ ಕಾಣಿಸಿಕೊಂಡಿತ್ತು. ತಡರಾತ್ರಿ ಸಂಭವಿಸಿದ ಬೆಂಕಿ ಅಪಘಡದಲ್ಲಿ 25 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣ ವಚನ – ಇತಿಹಾಸ ಬರೆದ ಮಮ್ದಾನಿ
ವೇಗವಾಗಿ ಹರಡುತ್ತಿದ್ದ ಬೆಂಕಿ ಮತ್ತು ದಟ್ಟ ಹೊಗೆಯಿಂದ ತಪ್ಪಿಸಿಕೊಳ್ಳಲು ಹೃತಿಕ್ ಬರ್ಲಿನ್‌ನ ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಿಂದ ಹಾರಿದ್ದ. ತಲೆಗೆ ತೀವ್ರ ಪೆಟ್ಟಾಗಿತ್ತು. ರೆಡ್ಡಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಹೊಸ ವರ್ಷದ ದಿನದಂದೇ ಈ ಅವಘಡ ಸಂಭವಿಸಿದ್ದು, ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಶೋಕ ಆವರಿಸಿದೆ. ತೆಲಂಗಾಣದ ಜನಗಾಂವ್ ಜಿಲ್ಲೆಯ ಮಲ್ಕಾಪುರ್ ಗ್ರಾಮದಲ್ಲಿರುವ ಕುಟುಂಬಸ್ಥರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಪುತ್ರನ ಅಕಾಲಿಕ ಮರಣದ ಆಘಾತದಿಂದ ತಂದೆ-ತಾಯಿ ದುಃಖಿತರಾಗಿದ್ದಾರೆ.
ಹೃತಿಕ್ ರೆಡ್ಡಿ ಯುರೋಪ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿ ಪಡೆಯಲು 2023 ರ ಜೂನ್‌ನಲ್ಲಿ ಜರ್ಮನಿಯ ಮ್ಯಾಗ್ಡೆಬರ್ಗ್‌ಗೆ ತೆರಳಿದ್ದರು. 2022 ರಲ್ಲಿ ವಾಗ್ದೇವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಪದವಿ ಪಡೆದಿದ್ದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಮತ್ತೆ ಹಿಂದೂಗಳ ಮೇಲೆ ದಾಳಿ – ಕೆರೆಗೆ ಹಾರಿ ಪಾರಾದ ಉದ್ಯಮಿ
ದಸರಾ ಸಂದರ್ಭದಲ್ಲಿ ಮನೆಗೆ ಬರುವುದಾಗಿ ತಿಳಿಸಿದ್ದರು. ಬಳಿಕ ದಿನಾಂಕ ಮುಂದೂಡಿದ್ದರು. ಬದಲಿಗೆ ಜನವರಿ ಎರಡನೇ ವಾರದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬರಲು ಯೋಜಿಸಿದ್ದರು. ತೆಲಂಗಾಣದಲ್ಲಿರುವ ಹೃತಿಕ್ ಅವರ ಕುಟುಂಬ ಮತ್ತು ಸ್ನೇಹಿತರು ವಿದೇಶಾಂಗ ಸಚಿವಾಲಯ (ಎಂಇಎ) ಮತ್ತು ಜರ್ಮನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಮೃತದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ತವರಿಗೆ ತರುವ ಪ್ರಕ್ರಿಯೆಯಲ್ಲಿದ್ದಾರೆ.

