ಒಟ್ಟಾವೋ: ಟೊರೊಂಟೊ ವಿಶ್ವವಿದ್ಯಾಲಯದ (Toronto University) ಸ್ಕಾರ್ಬರೋ ಕ್ಯಾಂಪಸ್ ಬಳಿ 20 ವರ್ಷದ ಭಾರತೀಯ ವಿದ್ಯಾರ್ಥಿ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸಾರ್ವಜನಿಕರ ನೆರವಿನಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಾಕ್ಟರೇಟ್ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಮೃತಪಟ್ಟ ಯುವಕ. ಈ ವರ್ಷ ಟೊರೊಂಟೊದಲ್ಲಿ ನಡೆದ 41ನೇ ಕೊಲೆ ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಂಕ್ ಅವಸ್ಥಿ ದುರಂತ ಸಾವಿನ ಬಗ್ಗೆ ಭಾರತ ತೀವ್ರ ದುಃಖ ವ್ಯಕ್ತಪಡಿಸಿದೆ. ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ಮೃತ ಯುವಕನ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದೆ.
ಕಳೆದ ವಾರ, ಟೊರೊಂಟೊದಲ್ಲಿ 30 ವರ್ಷದ ಭಾರತೀಯ ಮಹಿಳೆ ಹಿಮಾಂಶಿ ಖುರಾನಾ ಹತ್ಯೆಗೀಡಾಗಿದ್ದರು. ಸ್ಟ್ರಾಚನ್ ಅವೆನ್ಯೂ ಮತ್ತು ವೆಲ್ಲಿಂಗ್ಟನ್ ಸ್ಟ್ರೀಟ್ ಡಬ್ಲ್ಯೂ ಪ್ರದೇಶದಲ್ಲಿ ನಾಪತ್ತೆ ದೂರು ದಾಖಲಾದ ಒಂದು ದಿನದ ನಂತರ, ಶನಿವಾರ ಪೊಲೀಸರು ಆಕೆಯ ಶವವನ್ನು ನಿವಾಸವೊಂದರಲ್ಲಿ ಪತ್ತೆ ಮಾಡಿದ್ದರು.
ಪ್ರಕರಣದ ಶಂಕಿತ ಅಬ್ದುಲ್ ಗಫೂರಿ (32) ವಿರುದ್ಧ ಪ್ರಥಮ ದರ್ಜೆ ಕೊಲೆ ಆರೋಪದ ಮೇಲೆ ಪೊಲೀಸರು ವಾರಂಟ್ ಹೊರಡಿಸಿದ್ದಾರೆ. ಗಫೂರಿ ಟೊರೊಂಟೊ ನಿವಾಸಿಯೂ ಹೌದು ಎಂದು ಪೊಲೀಸರು ತಿಳಿಸಿದ್ದಾರೆ.
ಟೊರೊಂಟೊದಲ್ಲಿ ನಡೆದ ಯುವ ಭಾರತೀಯ ಪ್ರಜೆ ಹಿಮಾಂಶಿ ಖುರಾನಾ ಅವರ ಹತ್ಯೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಈ ತೀವ್ರ ದುಃಖದ ಕ್ಷಣದಲ್ಲಿ ಅವರ ಕುಟುಂಬಕ್ಕೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಕಳೆದ ಕೆಲವು ದಿನಗಳಿಂದ ಕಾನ್ಸುಲೇಟ್ ಈ ವಿಷಯದೊಂದಿಗೆ ನಿಕಟ ಸಂಪರ್ಕದಲ್ಲಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

