– ಯುದ್ಧ ಮುಂದುವರಿದ್ರೇ ಕಚ್ಚಾತೈಲದ ಬೆಲೆ ಹೆಚ್ಚಳ ಸಾಧ್ಯತೆ
– ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುವ ನಿರೀಕ್ಷೆ
ನವದೆಹಲಿ/ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧ (Iran-Israel War) ಆರಂಭವಾಗಿ 15 ದಿನ ಕಳೆದರೂ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ಎಫೆಕ್ಟ್ ಭಾರತದ ಷೇರು ಮಾರುಕಟ್ಟೆಯನ್ನು (Share Market) ಮಕಾಡೆ ಮಲಗಿಸಿದೆ. ಒಂದೆಡೆ ಷೇರುಗಳ ಬೆಲೆ ಪಾತಾಳಕ್ಕೆ ಕುಸಿಯುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆಯ ಗುಮ್ಮ ಮತ್ತೆ ಕಾಡುವ ಆತಂಕ ಎದುರಾಗಿದೆ.
ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ, ಭಾರತೀಯ ಷೇರು ಮಾರುಕಟ್ಟೆ ಮೇಲೆ ಭಾರೀ ಪ್ರಭಾವ ಬೀರುತ್ತಿದೆ. ಯುದ್ದ ಆರಂಭವಾದಾಗಿನಿಂದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗುತ್ತಿದ್ದು, ಹೂಡಿಕೆದಾರರ ನಿದ್ದೆಗೆಡಿಸುತ್ತಿದೆ. ನಿಫ್ಟಿ (Nifty) ಹಾಗೂ ಸೆನ್ಸೆಕ್ಸ್‌ನಲ್ಲಿ (Sensex) ಸುಮಾರು 12% ಇಳಿಕೆಯಾಗಿದೆ. ಯುದ್ಧದಿಂದಾಗಿ ಕಚ್ಚಾತೈಲ ಹಾಗೂ ಎಲ್‌ಪಿಜಿಯಲ್ಲಿ ಏರಿಕೆಯುಂಟಾಗಿದ್ದು, ಭಾರತದ ಷೇರು ಮಾರುಕಟ್ಟೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಐಟಿ ಕಂಪನಿಯ ಷೇರುಗಳು, ರಿಯಲ್ ಎಸ್ಟೇಟ್, ಆಯಿಲ್ ಮಾರ್ಕೆಟ್, ಬ್ಯಾಂಕಿಂಗ್‌ನ ಷೇರುಗಳು ಕುಸಿತವಾಗಿದ್ದು, ಹೂಡಿಕೆದಾರರಿಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಸ್ಮಾಲ್ ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡದೇ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡಿ ಎಂದು ಷೇರು ಮಾರುಕಟ್ಟೆ ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಇಲ್ಲಿವರೆಗೆ ಹೊಡೆದಿದ್ದು ಮೋಜಿಗಾಗಿ ಅಷ್ಟೇ.. ಇನ್ಮುಂದೆ ದಾಳಿ ಮತ್ತಷ್ಟು ತೀವ್ರ: ಇರಾನ್‌ಗೆ ಟ್ರಂಪ್ ವಾರ್ನಿಂಗ್
ಇನ್ನೂ ಕಚ್ಚಾ ತೈಲದ ಬೆಲೆ 100 ಡಾಲರ್‌ಗೂ ಹೆಚ್ಚು ಏರಿಕೆಯಾಗಿದೆ. ಇನ್ನೂ ಯುದ್ಧ ಮುಂದುವರಿದರೇ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ 10-20 ರೂಪಾಯಿವರೆಗೂ ಏರಿಕೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್, ಡಿಸೇಲ್, ಎಲ್‌ಪಿಜಿ ಬೆಲೆಯಲ್ಲಿ ಏರಿಕೆಯಾದರೆ, ಸಾಗಾಣಿಕೆ ವೆಚ್ಚದಲ್ಲಿ ಸಹ ಹೆಚ್ಚಾಗಲಿದೆ. ಇದರಿಂದ ಹಣ್ಣು, ತರಕಾರಿ, ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆಯಂತೆ. ಇದರಿಂದ ಹಣದುಬ್ಬರ ಉಂಟಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ: ದೃಷ್ಟಿಹೀನ, ಬುದ್ಧಿಮಾಂದ್ಯ ಮಕ್ಕಳಿರುವ ಆಶ್ರಮದಲ್ಲೂ ಸಿಲಿಂಡರ್ ಸಮಸ್ಯೆ – ಊಟಕ್ಕೂ ಪರದಾಟ, ಗ್ಯಾಸ್‌ಗಾಗಿ ಪತ್ರ

