ನವದೆಹಲಿ: ಈ ಫೋಟೋದಲ್ಲಿ ಕಾಣ್ತಿರೋದು ಯಾವುದೋ ನಗರದ ವಿದ್ಯುತ್ ದೀಪಗಳು ಅಂದ್ಕೋಬೇಡಿ. ಇದು ಭಾರತೀಯ ವಿಜ್ಞಾನಿಗಳ ತಂಡ ಅನ್ವೇಷಣೆ ಮಾಡಿರೋ ಗ್ಯಾಲಕ್ಸಿ(ನಕ್ಷತ್ರಪುಂಜ)ಗಳ ಮಹಾಸಮೂಹ. ಇದು ಭೂಮಿಯಿಂದ 400 ಕೋಟಿ ಜ್ಯೋತಿವರ್ಷ ದೂರದಲ್ಲಿದ್ದು ಇದಕ್ಕೆ ಸರಸ್ವತಿ ಅಂತ ಹೆಸರಿಡಲಾಗಿದೆ.
ಸರಸ್ವತಿ ನಕ್ಷತ್ರಪುಂಜಗಳ ಮಹಾಸಮೂಹದ ತೂಕ ಸೂರ್ಯನಿಗಿಂತಲೂ 20 ಶತಕೋಟಿ ಪಟ್ಟು ಹೆಚ್ಚು ಎಂದು ವರದಿಯಾಗಿದೆ. ಈ ಗ್ಯಾಲಕ್ಸಿಗಳ ಮಹಾಸಮೂದಲ್ಲಿ 42 ಗ್ಯಾಲಕ್ಸಿಗಳ ಗುಂಪು ಹಾಗೂ 10 ಸಾವಿರಕ್ಕೂ ಹೆಚ್ಚು ಗ್ಯಾಲಕ್ಸಿಗಳಿದ್ದು, 10 ಶತಕೋಟಿ ವರ್ಷಗಳ ಹಿಂದೆ ಉಗಮವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದು ಮೀನಾ ನಕ್ಷತ್ರಪುಂಜದ ದಿಕ್ಕಿನಲ್ಲಿದೆ.
Advertisement
Advertisement
ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರೋನಮಿ ಅಂಡ್ ಆಸ್ಟ್ರೋಫಿಸಿಕ್ಸ್ ಮತ್ತು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ಹಾಗೂ ಇತರೆ ಎರಡು ವಿಶ್ವವಿದ್ಯಾಲಯಗಳ ಖಗೋಳಶಾಸ್ತ್ರಜ್ಞರ ತಂಡ ಸರಸ್ವತಿಯನ್ನ ಪತ್ತೆ ಮಾಡಿದೆ. ಇದು ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ನಕ್ಷತ್ರಪುಂಜಗಳ ಮಹಾಸಮೂಹವೆಂದು ಹೇಳಿದ್ದಾರೆ.
Advertisement
ಗ್ಯಾಲಕ್ಸಿಯ ಉಗಮ ಹೇಗಾಯಿತು ಎಂದು ಅರ್ಥ ಮಾಡಿಕೊಳ್ಳಬೇಕಾದ್ರೆ ಗ್ಯಾಲಕ್ಸಿಗಳ ಮಹಾಸಮೂಹವನ್ನು ಗುರುತಿಸಿ ಗ್ಯಾಲಕ್ಸಿಗಳ ಮೇಲೆ ಅವುಗಳ ವಾತಾವರಣದ ಪರಿಣಾಮವನ್ನ ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕು. ಇದೊಂದು ಹೊಸ ಅಧ್ಯಯನವಾಗಿದ್ದು, ಈ ಅನ್ವೇಷಣೆಯಿಂದ ಈ ಕ್ಷೇತ್ರದಲ್ಲಿನ ಮುಂದಿನ ಅಧ್ಯಯನಗಳಿಗೆ ನೆರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಬೆಳಕು ಭೂಮಿಯನ್ನು ತಲುಪಲು ತುಂಬಾ ಸಮಯ ಬೇಕಾದ್ದರಿಂದ ಖಗೋಳಶಾಸ್ತ್ರಜ್ಞರು ಅತೀ ದೂರಕ್ಕೆ ನೋಡಿದಾಗ ಅವರು ತುಂಬಾ ಹಿಂದಿನ ಜಗತ್ತನ್ನು ನೋಡ್ತಿರ್ತಾರೆ. ಅದೇ ರೀತಿ ಜಗತ್ತು 10 ಶತಕೋಟಿ ವರ್ಷಗಳಷ್ಟು ಹಳೆಯದಿದ್ದಾಗ ಸರಸ್ವತಿ ಮಹಾಸಮೂಹವು ಹೇಗಿತ್ತೋ ಹಾಗೆ ಈಗ ನಮಗೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
Advertisement
ಭಾರತೀಯ ವಿಜ್ಞಾನಿಗಳ ಈ ಅನ್ವೇಷಣೆಯಿಂದ ವಿಶ್ವದ ಸೃಷ್ಟಿ ಹೇಗಾಯಿತು ಎಂಬ ಬಗೆಗಿನ ಚಿಂತನೆಗೆ ಅವಕಾಶ ಮಾಡಿಕೊಡಲಿದೆ. ಭಾರತೀಯ ವಿಜ್ಞಾನಿಗಳ ಈ ಅನ್ವೇಷಣೆಯ ಬಗ್ಗೆ ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿಯ ದಿ ಆಸ್ಟ್ರೋಫಿಸಿಕಲ್ ಜರ್ನಲ್‍ನಲ್ಲಿ ಪ್ರಕಟವಾಗಲಿದೆ.
ಇಡೀ ಜಗತ್ತಿನಲ್ಲಿ 1 ಕೋಟಿಯಷ್ಟು ಗ್ಯಾಲಕ್ಸಿಗಳ ಮಹಾಸಮೂಹಗಳಿವೆಯೆಂದು ನಂಬಲಾಗಿದೆ. ನಮ್ಮ ಆಕಾಶ ಗಂಗಾ(ಮಿಲ್ಕಿ ವೇ) ಗ್ಯಾಲಕ್ಸಿಯು 54ಕ್ಕೂ ಹೆಚ್ಚು ಗ್ಯಾಲಕ್ಸಿಗಳ ಸಮೂಹದ ಭಾಗವಾಗಿದೆ.
1 ಜ್ಯೋತಿವರ್ಷ ಅಂದರೆ ಎಷ್ಟು?: ಬೆಳಕು ಒಂದು ವರ್ಷದಲ್ಲಿ ಸಾಗುವ ದೂರವನ್ನು ಒಂದು ಜ್ಯೋತಿರ್ವರ್ಷವೆ0ದು ಕರೆಯಲಾಗುತ್ತದೆ. ಬೆಳಕಿನ ವೇಗ ಕ್ಷಣಕ್ಕೆ ಸುಮಾರು 2.99 ಲಕ್ಷ ಕಿಮೀ. ಹೀಗಾಗಿ ಒಂದು ಜ್ಯೋತಿವರ್ಷ ಸುಮಾರು 9.4 ಲಕ್ಷ ಕೋಟಿ ಕಿಮೀ ದೂರಕ್ಕೆ ಸಮ.