ಮಂಗಳೂರು: ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್(70) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಎಜೆ ಆಸ್ಪತ್ರೆಯಲ್ಲಿ ನಿಧನರಾದರು.
1949ರ ಡಿಸೆಂಬರ್ 11ರಂದು ಜನಿಸಿದ ಗೋಪಾಲನಾಥ್ ಅವರು ಸ್ಯಾಕ್ಸೋಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದಿದ್ದರು.
Advertisement
ಕದ್ರಿ ಗೋಪಾಲನಾಥ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಬೆಳಗ್ಗಿನ ಜಾವ 4 ಗಂಟೆಗೆ ಗೋಪಾಲನಾಥ್ ಎಜೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಮೂಲತಃ ಮಂಗಳೂರಿನವರಾಗಿರುವ ಗೋಪಾಲನಾಥ್ ಅವರು ಚೆನ್ನೈನಲ್ಲಿ ಮನೆ ಮಾಡಿಕೊಂಡಿದ್ದರು. ಕದ್ರಿ ಗೋಪಾಲನಾಥ್ ಅವರು ತಮ್ಮ ಮೂವರು ಮಕ್ಕಳನ್ನು ಅಗಲಿದ್ದಾರೆ.
Advertisement
ಬಾಲ್ಯದಿಂದಲೇ ತಂದೆಯವರಿಂದ ಪಾಠವನ್ನು ಕಲಿತ ಕದ್ರಿ ಗೋಪಾಲನಾಥರು ನಂತರ ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಸ್ಯಾಕ್ಸೋಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು.
Advertisement
Advertisement
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ, ಮಂತ್ರಾಲಯ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳನ್ನು ಪಡೆದಿದ್ದರು.
ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ವಾದಗಳಿಗೆ ಮನಸೋಲದವರಿಲ್ಲ. ಅದರಲ್ಲೂ ಪ್ರವೀಣ್ ಗೋಡ್ಖಿಂಡಿ ಅವರ ಜೊತೆಗಿನ ಜುಗಲ್‍ಬಂದಿ ಅಲ್ಬಂ ರಾಗ್ ರಂಗ್ 1998ರಲ್ಲಿ ಬಿಡುಗಡೆ ಆಯಿತು. ಈ ರಾಗ್ ರಂಗ್ ಈಗಲೂ ಭಾರೀ ಪ್ರಸಿದ್ಧಿ ಪಡೆದಿದ್ದು ಬಹುತೇಕ ಶುಭ ಸಮಾರಂಭ, ಕಾರ್ಯಕ್ರಮದ ಉದ್ಘಾಟನೆಯ ಸಮಯದಲ್ಲಿ ಈ ರಾಗ್ ರಂಗ್ ಪ್ಲೇ ಆಗುತ್ತದೆ.
ಈ ಹಿಂದೆ ಚೆನ್ನೈನ ನಾರದ ಗಾನಸಭಾದಲ್ಲಿ 400 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದ್ದರು.