– ದೇಶದ 2,249 ರೈಲು ನಿಲ್ದಾಣ & ಸೇವಾ ಕಟ್ಟಡಗಳಲ್ಲಿ ಸೌರ ಘಟಕ
ನವದೆಹಲಿ: ಭಾರತೀಯ ರೈಲ್ವೆ (Indian Railway) ಕಳೆದೊಂದು ದಶಕದಿಂದ ಸೌರ ಶಕ್ತಿ ಉತ್ಪಾದನೆ ಮತ್ತು ಬಳಕೆಗೆ ಪ್ರಾಧಾನ್ಯತೆ ನೀಡುತ್ತಿದ್ದು, ದೇಶಾದ್ಯಂತ ಈವರೆಗೆ 2,249 ರೈಲು ನಿಲ್ದಾಣಗಳು ಮತ್ತು ಸೇವಾ ಕಟ್ಟಡಗಳಲ್ಲಿ 209 ಮೆಗಾವ್ಯಾಟ್ ಸೌರ ಸ್ಥಾವರಗಳನ್ನು (Solar Power Plants) ಸ್ಥಾಪಿಸಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಕೇವಲ 628 ಸೌರ ಘಟಕಗಳನ್ನು ಹೊಂದಿದ್ದ ಭಾರತೀಯ ರೈಲ್ವೆ ಇತ್ತೀಚಿನ ಐದು ವರ್ಷಗಳಲ್ಲಿ ಅದರ ಮೂರುಪಟ್ಟು ಸೌರ ಘಟಕಗಳನ್ನು ಸ್ಥಾಪಿಸಿ ಸೌರಶಕ್ತಿ ಬಳಕೆಯಲ್ಲಿ ಮುನ್ನಡೆಯಲ್ಲಿದೆ. ಕರ್ನಾಟಕ ಸೇರಿದಂತೆ ರಾಜಸ್ಥಾನ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಒಡಿಶಾ, ಗುಜರಾತ್ ರಾಜ್ಯಗಳಲ್ಲಿನ ಅತಿ ಹೆಚ್ಚು ರೈಲ್ವೆ ನಿಲ್ದಾಣಗಳು ಸೌರ ಸ್ಥಾವರ ಅವಳಡಿಕೆಯಲ್ಲಿ ಮುಂದಿವೆ.
ನವೀಕರಿಸಬಹುದಾದ ಇಂಧನ ಉತ್ಪಾದನೆ, ಪರಿಸರ ಸುಸ್ಥಿರತೆ ಮತ್ತು ದೀರ್ಘಾವಧಿ ಆರ್ಥಿಕ ಉಳಿತಾಯವನ್ನು ಸಾಧಿಸಲು ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಸೌರ ಶಕ್ತಿಯನ್ನು ಉತ್ತೇಜಿಸಲು ಭಾರತೀಯ ರೈಲ್ವೆ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ನವೀಕರಿಸಬಹುದಾದ ಇಂಧನಕ್ಕೆ ಪರಿವರ್ತನೆ ನಿರಂತರ ಪ್ರಕ್ರಿಯೆಯಾಗಿದೆ.
ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ 1,489 ರೈಲ್ವೆ ನಿಲ್ದಾಣಗಳಲ್ಲಿ ಸೌರ ಘಟಕಗಳನ್ನು ವಿಸ್ತರಿಸಲಾಗಿದೆ. ರಾಜಸ್ಥಾನವು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಅತಿ ಹೆಚ್ಚು ಅಂದರೆ 275 ಸೌರ ಘಟಕಗಳ ಸ್ಥಾಪನೆಯೊಂದಿಗೆ ಮುಂಚೂಣಿಯಲ್ಲಿದೆ.
ನವೀಕರಿಸಬಹುದಾದ ಇಂಧನದತ್ತ ಯೋಜನೆ: ಭಾರತೀಯ ರೈಲ್ವೆ ಹಂತಹಂತವಾಗಿ ನವೀಕರಿಸಬಹುದಾದ ಇಂಧನ ಬಳಕೆಗೆ ಯೋಜಿಸಿದೆ. ಅದರಂತೆ ಸೌರ ಮತ್ತು ಪವನ ವಿದ್ಯುತ್ ಇತ್ಯಾದಿ ಒಳಗೊಂಡಿರುವ ನವೀಕರಿಸಬಹುದಾದ ವಿದ್ಯುತ್‌ಗೆ ಪರಿಹಾರವಾದ ರೌಂಡ್ ದಿ ಕ್ಲಾಕ್ (RTC) ವಿದ್ಯುತ್‌ಗಾಗಿ ಖರೀದಿ ವಿಧಾನ ಅನುಸರಿಸುತ್ತಿದೆ. ಹಂತಹಂತವಾಗಿ ನವೀಕರಿಸಬಹುದಾದ ಇಂಧನ ಸಂಗ್ರಹಿಸಲು ಯೋಜಿಸಿದೆ. ಅಲ್ಲದೇ, ರೈಲ್ವೆ ನಿಲ್ದಾಣಗಳಲ್ಲಿ ಸೌರ ಸ್ಥಾವರಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ರೈಲ್ವೆಯು ಡೆವಲಪರ್ ಮೋಡ್ ಅಡಿಯಲ್ಲಿ ವಿದ್ಯುತ್ ಖರೀದಿ ಒಪ್ಪಂದ ಸಹ ಮಾಡಿಕೊಳ್ಳುತ್ತಿದೆ.
ದೇಶಾದ್ಯಂತ ಈವರೆಗೆ ಒಟ್ಟು 2249 ರೈಲು ನಿಲ್ದಾಣಗಳು ಮತ್ತು ಸೇವಾ ಕಟ್ಟಡಗಳಲ್ಲಿ ಸುಮಾರು 209 ಮೆಗಾವ್ಯಾಟ್ ಸೌರ ಸ್ಥಾವರಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಸಂಸತ್ ಅಧಿವೇಶನದಲ್ಲಿ ನಡೆದ ಚರ್ಚೆ ವೇಳೆ ಈ ಬಗ್ಗೆ ಲಿಖಿತ ಮಾಹಿತಿ ನೀಡಿದ್ದಾರೆ.
ರಾಜ್ಯವಾರು ವಿವರ: ರಾಜಸ್ಥಾನ 275, ಮಹಾರಾಷ್ಟ್ರ 270, ಪಶ್ಚಿಮ ಬಂಗಾಳ 237, ಉತ್ತರ ಪ್ರದೇಶ 204, ಆಂಧ್ರಪ್ರದೇಶ 198, ಕರ್ನಾಟಕ 146, ಮಧ್ಯಪ್ರದೇಶ 134, ಒಡಿಶಾ 133, ಗುಜರಾತ್ 112, ತೆಲಂಗಾಣ 95, ಬಿಹಾರ 81, ಅಸ್ಸಾಂ 78, ತಮಿಳುನಾಡು 73, ಜಾರ್ಖಂಡ್ 47, ಹರಿಯಾಣ 36, ಪಂಜಾಬ್ 30, ಉತ್ತರಾಖಂಡ 18, ಹಿಮಾಚಲ ಪ್ರದೇಶ 17, ತ್ರಿಪುರ 16, ಛತ್ತೀಸ್‌ಗಢ 16, ಕೇರಳ 13, ದೆಹಲಿ 8, ಜಮ್ಮುಕಾಶ್ಮೀರ 6, ನಾಗಾಲ್ಯಾಂಡ್ 2, ಮೇಘಾಲಯ 1, ಮಣಿಪುರ 1, ಚಂಡೀಗಢ 1 ಮತ್ತು ಪುದುಚೇರಿಯ 1 ಸೇರಿದಂತೆ ದೇಶದಲ್ಲಿ ಒಟ್ಟು 2249 ರೈಲು ನಿಲ್ದಾಣಗಳಲ್ಲಿ ಸೌರ ಸ್ಥಾವರ ಕಲ್ಪಿಸಲಾಗಿದೆ ಎಂದು ವಿವರಿಸಿದ್ದಾರೆ.