ಇತ್ತೀಚಿನ ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ (Indian Railways) ಅಭೂತಪೂರ್ವ ಬದಲಾವಣೆಗಳಾಗಿವೆ ಹಾಗೂ ಹಲವಾರು ರೀತಿಯಲ್ಲಿ ಸುಧಾರಣೆಗಳಾಗಿವೆ. ಅಷ್ಟೇ ಅಲ್ಲದೆ, ವಂದೇಭಾರತ್ ರೈಲುಗಳು ಬಂದಾದ ನಂತರ ರೈಲ್ವೆ ಪ್ರಯಾಣ ಮತ್ತಷ್ಟು ತ್ವರಿತ ಹಾಗೂ ಆರಾಮದಾಯಕವಾಗಿವೆ. ಅತ್ಯಾಧುನಿಕ ಹಾಗೂ ಸದಾ ಸಫಲತೆಯ ಹಾದಿಯಲ್ಲಿ ಸಾಗುತ್ತಿರುವ ಭಾರತೀಯ ರೈಲ್ವೆ ಇದೀಗ ಮತ್ತೊಂದು ಮಹತ್ತರ ಹೆಜ್ಜೆ ಇರಿಸಿದೆ. ವಿದ್ಯುತ್, ಡೀಸೆಲ್ ಬಳಸದೆ ಹೈಡ್ರೋಜನ್ ಇಂಧನ ಮೂಲಕ ಸಂಚರಿಸುವ ಹೊಸ ರೈಲು ಸೇವೆಗೆ ಭಾರತೀಯ ರೈಲ್ವೆ ಮುಂದಾಗಿದೆ. ಹೇಗಿದೆ ಈ ಹೈಡ್ರೋಜನ್ ರೈಲು? ವಿಶೇಷತೆಗಳೇನು? ವೇಗ ಎಷ್ಟು ಎಂಬಿತ್ಯಾದಿ ಮಾಹಿತಿಗಳನ್ನು ಇಲ್ಲಿ ವಿವರಿಸಲಾಗಿದೆ.
ಹೈಡ್ರೋಜನ್ ರೈಲಿನ ವಿಶೇಷತೆ ಏನು?
ತಮಿಳುನಾಡಿನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಚಾಲಿತ ರೈಲು (Hydrogen Train) ಸುಧಾರಿತ ಇಂಧನ ಕೋಶಗಳನ್ನು ಬಳಸಿ ಕಾರ್ಯನಿರ್ವಹಿಸುತ್ತದೆ.ನೀರು ಹಾಗೂ ಬಿಸಿ ಹವೆ ಮೂಲಕ ಈ ರೈಲು ಸಾಗಲಿದೆ. ವಿಶೇಷ ಅಂದರೆ ಶೂನ್ಯ ಕಾರ್ಬನ್. ಅಂದರೆ ಸಂಪೂರ್ಣ ಪರಿಸರ ಸ್ನೇಹಿ. ಇಷ್ಟೇ ಅಲ್ಲ ಡೀಸೆಲ್ ಎಂಜಿನ್‍ಗೆ ಹೋಲಿಸಿದರೆ ಶೇಕಡಾ 60 ರಷ್ಟು ಶಬ್ದವೂ ಕಡಿಮೆ. ಹೀಗಾಗಿ ಶಬ್ದ ಮಾಲಿನ್ಯದ ಆತಂಕವೂ ಇಲ್ಲ. ಮೊದಲ ಹಂತದಲ್ಲಿ ದೇಶಾದ್ಯಂತ 35 ಹೈಡ್ರೋಜನ್ ರೈಲು ಸೇವೆ ಆರಂಭಿಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.
Advertisement
Advertisement
ಈ ರೈಲು ಗಂಟೆಗೆ 140 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಬಾರಿ ನೀರು ತುಂಬಿಸಿ ಪ್ರಯಾಣ ಆರಂಭಿಸಿದರೆ 1,000 ಕಿ.ಮಿ ದೂರ ಕ್ರಮಿಸಲಿದೆ. ಈ ರೈಲು ಚಲಿಸಲು ಪ್ರತಿ ಗಂಟೆಗೆ 40,00 ಲೀಟರ್ ನೀರು ಬೇಕು. ನೀರಿನ ಸಂಗ್ರಹಣೆಗಾಗಿ ವಿಶೇಷ ಸೌಲಭ್ಯವನ್ನು ನಿರ್ಮಿಸಲಾಗಿದೆ. ಅತೀ ಕಡಿಮೆ ದರದಲ್ಲಿ ರೈಲು ಸಾಗಲಿದೆ. ಹೈಡ್ರೋಜನ್ ರೈಲು ತನ್ನ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿತಗೊಳಿಸಲು ಮತ್ತು ಡೀಸೆಲ್ ಎಂಜಿನ್‌ಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತೊಡೆದುಹಾಕಲು ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿದೆ. ದೇಶಾದ್ಯಂತ 35 ಹೈಡ್ರೋಜನ್ ರೈಲುಗಳನ್ನು ಹೊರತರುವ ಯೋಜನೆಯೊಂದಿಗೆ, ಭಾರತೀಯ ರೈಲ್ವೇಯು ಸ್ವಚ್ಛ, ನಿಶ್ಯಬ್ದ ಭವಿಷ್ಯಕ್ಕಾಗಿ ಸಜ್ಜಾಗಿದೆ.
Advertisement
ಟ್ರಯಲ್ ರನ್ ಯಾವಾಗ ಮತ್ತು ಎಲ್ಲಿ ನಡೆಯುತ್ತದೆ?
ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಪರೀಕ್ಷಿಸಲು ಭಾರತೀಯ ರೈಲ್ವೇ ಸಜ್ಜಾಗಿದೆ. ಈ ವರ್ಷದ ಅಂತ್ಯ ಅಂದರೆ ಡಿಸೆಂಬರ್‌ನಲ್ಲಿ ಅಥವಾ 2025ರ ವೇಳೆಗೆ ಪ್ರಾಯೋಗಿಕ ಚಾಲನೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಯೋಜನೆಯು ಪರಿಸರ ಸ್ನೇಹಿ ಸಾರಿಗೆ ಮತ್ತು ಶೂನ್ಯ ಇಂಗಾಲದ ಹೊರಸೂಸುವಿಕೆಗೆ ಭಾರತದ ಬದ್ಧತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
Advertisement
ಯೋಜನೆಯ ವೆಚ್ಚ ಎಷ್ಟು?
ಹೈಡ್ರೋಜನ್ ಹೆರಿಟೇಜ್ ಇನಿಷಿಯೇಟಿವ್ ಯೋಜನೆಯಡಿಯಲ್ಲಿ ಒಟ್ಟು 35 ರೈಲುಗಳನ್ನು ಜರ್ಮನಿಯ ತಂತ್ರಜ್ಞಾನದಡಿ ತಯಾರಿಸಲು ಭಾರತ ನಿರ್ಧರಿಸಿದೆ. ಚೆನ್ನೈನಲ್ಲಿರುವ ರೈಲ್ವೆ ಕೋಚ್ ತಯಾರಿಕಾ ಘಟಕದಲ್ಲಿ ಈ ಎಲ್ಲಾ ರೈಲು ಬೋಗಿಗಳು, ಇಂಜಿನ್ ತಯಾರಾಗುತ್ತದೆ. ಇಂಥ ಒಂದು ಬೋಗಿಯನ್ನು ತಯಾರಿಸಲು 10 ಕೋಟಿ ರೂ. ಖರ್ಚಾಗುತ್ತದೆ. ಈ ರೈಲು ಸಾಮಾನ್ಯ ಹಳಿಗಳ ಮೇಲೆ ಓಡಿಸಬಹುದಾದರೂ ರೈಲು ಹಳಿಗೆ ಕೆಲವಾರು ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ. ಒಂದು ಮಾರ್ಗದ ರೈಲು ಹಳಿಗೆ ಕೆಲವು ಮಾರ್ಪಾಡುಗಳನ್ನು ಮಾಡಬೇಕಾದರೆ ಅದಕ್ಕೆ ಸುಮಾರು 75 ಕೋಟಿ ರೂ. ಖರ್ಚಾಗುತ್ತದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್‌ನಲ್ಲಿ ಹೈಡ್ರೋಜನ್ ರೈಲು ಘೋಷಣೆ:
ಹೈಡ್ರೋಜನ್ ಫಾರ್ ಹೆರಿಟೇಜ್(ಪರಂಪರೆಗಾಗಿ ಹೈಡ್ರೋಜನ್) ಯೋಜನೆಯಡಿ ಹೈಡ್ರೋಜನ್ ಚಾಲಿತ ರೈಲು ಗಳನ್ನು ಪ್ರಾರಂಭಿಸುವ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಕೆಲವು ಆಯ್ದ ಪಾರಂಪರಿಕ ಸ್ಥಳಗಳು, ನೈಸರ್ಗಿಕ ಸೂಕ್ಷ್ಮ ಸ್ಥಳಗಳು ಹಾಗೂ ಗುಡ್ಡ-ಗಾಡು ಪ್ರದೇಶ ಗಳಲ್ಲಿ ಮಾಲಿನ್ಯರಹಿತ ರೈಲು ಚಾಲನೆಗಾಗಿ ಈ ಯೋಜನೆ ಯನ್ನು ಜಾರಿ ಮಾಡಲಾಯಿತು. ಜರ್ಮನಿ ಜೊತೆಗೂಡಿ ಈ ಹೈಡ್ರೋಜನ್ ರೈಲುಗಳ ತಯಾರಿಕೆಯನ್ನು ಆರಂಭಿಸಿದ ಭಾರತವು ಇದೀಗ ಅದರ ಅಂತಿಮ ಹಂತದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಹಳಿಗಳ ಮೇಲೆ ನಾವು ಹೈಡ್ರೋಜನ್ ಚಾಲಿತ ರೈಲುಗಳನ್ನು ಕಾಣಬಹುದಾಗಿದೆ.
ಭಾರತ ಹೈಡ್ರೋಜನ್ ರೈಲು ಸೇವೆ ಅಳವಡಿಸಿಕೊಂಡ ವಿಶ್ವದ ಐದನೇ ರಾಷ್ಟ್ರವಾಗಲಿದೆ. ಸದ್ಯಕ್ಕೆ ಜರ್ಮನಿ, ಫ್ರಾನ್ಸ್, ಸ್ವೀಡನ್, ಚೀನಾದಲ್ಲಿ ಮಾತ್ರ ಇಂಥ ರೈಲುಗಳು ಸಂಚರಿಸುತ್ತಿದ್ದು, ಡಿಸೆಂಬರ್ ನಂತರ ಆ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಲಿದೆ.
ಹೈಡ್ರೋಜನ್ ರೈಲುಗಳ ಪ್ರಯೋಜನಗಳೇನು?
ಹೈಡ್ರೋಜನ್ ರೈಲುಗಳ ಆರಂಭಿಕ ಚಾಲನೆಯ ವೆಚ್ಚಗಳು ಡೀಸೆಲ್-ಚಾಲಿತವಾದವುಗಳಿಗಿಂತ ಹೆಚ್ಚಿದ್ದರೂ, ಉತ್ಪಾದನೆಯ ಪ್ರಮಾಣ ಹೆಚ್ಚಾದಂತೆ ಈ ವೆಚ್ಚಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಹೈಡ್ರೋಜನ್ ಚಾಲಿತ ರೈಲುಗಳು ಹಲವಾರು ಪ್ರಯೋಜನಗಳನ್ನು ನೀಡುತ್ತವೆ,ಹೈಡ್ರೋಜನ್ ರೈಲುಗಳು ನಿಶ್ಯಬ್ದ ಪ್ರಯಾಣವನ್ನು ಒದಗಿಸುತ್ತವೆ, ಡೀಸೆಲ್ ರೈಲುಗಳಿಗೆ ಹೋಲಿಸಿದರೆ 60% ರಷ್ಟು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
ರೈಲು ಗರಿಷ್ಠ 140 ಕಿಮೀ/ಗಂ ವೇಗವನ್ನು ಸಾಧಿಸುವ ನಿರೀಕ್ಷೆಯಿದೆ. ಇದು ಪ್ರಯಾಣಿಕರಿಗೆ ತ್ವರಿತ, ಸಮರ್ಥನೀಯ ಮತ್ತು ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಗ್ರೀನ್ ರೈಲ್ವೇಸ್ ಅಡಿಯಲ್ಲಿ ಹೈಡ್ರೋಜನ್ ರೈಲು ಕಾರ್ಯನಿರ್ವಹಸಲಿದೆ. ಡಿಸೆಂಬರ್ ತಿಂಗಳಲ್ಲಿ ಪ್ರಾಯೋಗಿಕ ರೈಲು ಆರಂಭಿಸಲಾಗುತ್ತದೆ. ಹಲವು ಪ್ರಯೋಗದ ಬಳಿಕ ಹೈಡ್ರೋಜನ್ ರೈಲು ಸಂಚಾರ ಆರಂಭಗೊಳ್ಳಲಿದೆ. ಮಳೆ, ಬಿಸಿಲು ಸೇರಿದಂತೆ ವಿವಿಧ ಹವಾಮಾನಗಳಲ್ಲಿ ರೈಲು ಪ್ರಯೋಗ ನಡೆಯಲಿದೆ.
ಭಾರತೀಯ ರೈಲ್ವೆಗೆ ಮುಂದೇನು?
ಪ್ರಯೋಗಗಳು ಯಶಸ್ವಿಯಾದರೆ, ಭಾರತೀಯ ರೈಲ್ವೇಯು ಈ ತಂತ್ರಜ್ಞಾನವನ್ನು 2025 ರ ವೇಳೆಗೆ ಹೆಚ್ಚಿನ ಮಾರ್ಗಗಳಲ್ಲಿ ವಿಸ್ತರಿಸಲು ಯೋಜಿಸಿದೆ. ಈ ಬೆಳವಣಿಗೆಯು ಭಾರತದ ಸಾರಿಗೆ ವ್ಯವಸ್ಥೆಯನ್ನು ಸ್ವಚ್ಛ, ಹಸಿರು ಜಾಲವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.