– ರೈಲ್ವೆಗೆ ಮೈಸೂರು ಮಹಾರಾಜರ ಕೊಡುಗೆ ಸ್ಮರಣೆ
ನವದೆಹಲಿ: ಭಾರತೀಯ ರೈಲ್ವೆ (Indian Railways) ಕ್ಷೇತ್ರದ ಅಭಿವೃದ್ಧಿಗಾಗಿ ರೈಲ್ವೆ ತಿದ್ದುಪಡಿ ಮಸೂದೆ 2024ನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (H.D Deve Gowda) ಬೆಂಬಲಿಸಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಅವರು ಮಾತನಾಡಿದರು. ಈ ವೇಳೆ, ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರ (Narendra Modi) ಸರ್ಕಾರದಲ್ಲಿ ರೈಲ್ವೇ ವಲಯದಲ್ಲಿ ಕ್ರಾಂತಿಕಾರಕ ಅಭಿವೃದ್ಧಿ ಮಾಡಲಾಗಿದೆ ಎಂದು ಶ್ಲಾಘಿಸಿದರು.
ಕರ್ನಾಟಕದಲ್ಲಿ ಮೈಸೂರು ಮಹಾರಾಜರ ಆಳ್ವಿಕೆ ವೇಳೆ ಮೈಸೂರು – ಹರಿಹರದವರೆಗೂ ಮೀಟರ್ ಗೇಜ್ ರೇಲು ಮಾರ್ಗ ನಿರ್ಮಿಸಿದ್ದನ್ನು ಸ್ಮರಿಸಿದರು. ಆಗಿನ ತಮ್ಮ ರೈಲು ಪ್ರಯಾಣದ ಅನುಭವವನ್ನು ನೆನಪಿಸಿಕೊಂಡರು.
ಈಗ ಬಾಂಬೆ – ಚೆನ್ನೈ ರೈಲು ಮಾರ್ಗವೂ ಹರಿಹರ – ದಾವಣಗೆರೆ – ಶೃಂಗೇರಿ – ಬೇಲೂರು ಮೂಲಕ ಚನ್ನೈಗೆ ಹಾದು ಹೋಗುತ್ತಿದ್ದು ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ನಿರೀಕ್ಷೆಗೂ ಮೀರಿ ರೈಲ್ವೆ ಜಾಲ ಮತ್ತು ಮಾರ್ಗಗಳು ಸಾಕಷ್ಟು ಪ್ರಗತಿ ಸಾಧಿಸಿದೆ. ಈ ವಿಚಾರವಾಗಿ ಮೋದಿ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಅಭಿನಂದಿಸುವುದಾಗಿ ಅವರು ಹೇಳಿದ್ದಾರೆ.
ಅಶ್ವಿನಿ ವೈಷ್ಣವ್ (Ashwini Vaishnaw) ಅತ್ಯಂತ ಪ್ರಾಮಾಣಿಕ ರೈಲ್ವೇ ಸಚಿವರು, ಅವರನ್ನು ಅಭಿನಂದಿಸಿದರೆ ಕೆಲವರು ತಪ್ಪು ತಿಳಿದುಕೊಳ್ಳಬಾರದು. ನಾನು ಪ್ರಧಾನಿ ಆಗಿದ್ದಾಗ ಈ ಕ್ಷೇತ್ರದಲ್ಲಿ ಏನು ಮಾಡಿದ್ದೇನೆ, ನರೇಂದ್ರ ಮೋದಿ ಅವರು ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ರೇಲ್ವೆ ತಿದ್ದುಪಡಿ ಮಸೂದೆಯು ಅತ್ಯಂತ ಮಹತ್ವದ ಮಸೂದೆ. ಇದಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ.