IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

Public TV
3 Min Read
IPL 2023 RR 3

ಹೈದರಾಬಾದ್‌: ಜೋಸ್ ಬಟ್ಲರ್ (Jos Buttler), ಯಶಸ್ವೀ ಜೈಸ್ವಾಲ್ (Yashasvi Jaiswal) ಹಾಗೂ ಸಂಜು ಸ್ಯಾಮ್ಸನ್‌ (Sanju Samson) ಅವರ ಸಿಡಿಲಬ್ಬರದ ಅರ್ಧಶತಕ ಹಾಗೂ ಯಜುವೇಂದ್ರ ಚಾಹಲ್‌ ಸ್ಪಿನ್‌ ಬೌಲಿಂಗ್‌ ದಾಳಿ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

IPL 2023 RR

ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ (Rajasthan Royals) 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಪೇರಿಸಿತ್ತು. 204 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿ ಹೀನಾಯ ಸೋಲನುಭವಿಸಿತು.

IPL 2023 SRHvsRR 5

ಬೌಲಿಂಗ್‌ ವಿಭಾಗದಲ್ಲಿ ಕಳಪೆ ಪ್ರದರ್ಶನ ತೋರಿ, ರನ್‌ ಚಚ್ಚಿಸಿಕೊಂಡ ಹೈದರಾಬಾದ್‌ ಆಟಗಾರರು ಬ್ಯಾಟಿಂಗ್‌ ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿದರು. ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಆರಂಭದಲ್ಲೇ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಮಯಾಂಕ್‌ ಅಗರ್ವಾಲ್‌ (Mayank Agarwal) 23 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 27 ರನ್‌ ಗಳಿಸಿದರೆ, ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಹ್ರಾರಿ ಬ್ರೂಕ್‌ (Harry Brook) 21 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 13 ರನ್‌ ಗಳಿಸಿ ಔಟಾದರು. ಇದರಿಂದ ಪವರ್‌ ಪ್ಲೇ ಮುಗಿಯುವಷ್ಟರಲ್ಲೇ ಹೈದರಾಬಾದ್‌ ಕೇವಲ 30 ರನ್‌ ಗಳಿಸಿ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

IPL 2023 SRHvsRR 4

ನಂತರ ಕಣಕ್ಕಿಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ದಂಗಾದರು. ಆದಿಲ್‌ ರಶೀದ್‌ 18 ರನ್‌, ಗ್ಲೇನ್‌ ಫಿಲಿಪ್ಸ್‌ 8 ರನ್‌, ನಾಯಕ ಭುವನೇಶ್ವರ್‌ ಕುಮಾರ್‌ 6 ರನ್‌, ವಾಷಿಂಗ್ಟನ್‌ ಸುಂದರ್‌ 1 ರನ್‌ ಗಳಿಸಿದರೆ, ಆರಂಭಿಕ ಅಭಿಷೇಕ್‌ ಶರ್ಮಾ, ರಾಹುಲ್‌ ತ್ರಿಪಾಠಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಇದರಿಂದ ತಂಡವು 100 ರನ್‌ಗಳ ಗಡಿ ತಲುಪುವುದೇ ಕಷ್ಟವಾಗಿತ್ತು. ಆದರೆ ಕೊನೆಯಲ್ಲಿ ಉಮ್ರಾನ್‌ ಮಲಿಕ್‌, ಅಬ್ದುಲ್‌ ಸಮದ್‌ ಸಿಕ್ಸರ್‌, ಬೌಂಡರಿ ಚಚ್ಚಿ ತಂಡದ ಮೊತ್ತ 130ರ ಗಡಿ ದಾಟಿಸಿದರು. ಸಮದ್ 32 ರನ್‌ ಗಳಿಸಿದರೆ, ಮಲಿಕ್‌‌ ಕೇವಲ 8 ಎಸೆತಗಳಲ್ಲಿ 19 ರನ್‌ ಗಳಿಸಿ ತಂಡಕ್ಕೆ ನೆರವಾದರು.

IPL 2023 SANJU 2

ಚಾಹಲ್‌ ಸ್ಪಿನ್‌ ಕಮಾಲ್:‌ ರಾಜಸ್ಥಾನ್‌ ರಾಯಲ್ಸ್‌ ಪರ ಬೌಲಿಂಗ್‌ ಕಮಾಲ್‌ ಮಾಡಿದ ಯಜುವೇಂದ್ರ ಚಾಹಲ್‌ (Yuzvendra Chahal) 4 ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ 4 ಓವರ್‌ಗಳಲ್ಲಿ 21 ರನ್‌ ನೀಡಿ 2 ವಿಕೆಟ್‌ ಪಡೆದರು. ಜೇಸನ್‌ ಹೋಲ್ಡರ್‌, ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

IPL 2023 SRHvsRR 6

ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌: ಇನ್ನೂ ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜೋಸ್ ಬಟ್ಲರ್ ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಬೆಂಕಿ ಬ್ಯಾಟಿಂಗ್‌ ಮಾಡಿ, ಫಾರ್ಮ್ ಮುಂದುವರಿಸಿದರು. ಆರಂಭದಲ್ಲೇ ಅಬ್ಬರಿಸಿದ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳನ್ನು ಚೆಂಡಾಡಿದರು. ಇದರಿಂದಾಗಿ ರಾಜಸ್ಥಾನ್‌ ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಭರ್ಜರಿ 85 ರನ್‌ ಗಳಿಸಿತ್ತು.

ಜೋಸ್ ಬಟ್ಲರ್ ಕೇವಲ 22 ಎಸೆತಗಳಲ್ಲಿ 54 ರನ್ (7 ಬೌಂಡರಿ, 3 ಸಿಕ್ಸರ್) ಗಳಿಸಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ 3 ಅರ್ಧಶತಕ ಗಳಿಸುವ ಮೂಲಕ ಕ್ರಿಸ್‌ಗೇಲ್ ಸಾಧನೆಯನ್ನು ಜೋಸ್ ಬಟ್ಲರ್ ಸರಿಗಟ್ಟಿದರು. ಪವರ್ ಪ್ಲೇನಲ್ಲಿ 6 ಅರ್ಧಶತಕ ಗಳಿಸಿರುವ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

IPL 2023 JOS

ಇನ್ನೂ ಜೋಸ್ ಬಟ್ಲರ್ ಔಟಾಗುತ್ತಿದ್ದಂತೆ ಜೊತೆಗೂಡಿದ ಸಂಜು ಸ್ಯಾಮ್ಸನ್‌ ಹಾಗೂ ಯಶಸ್ವೀ ಜೈಸ್ವಾಲ್ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದರು. ಯಶಸ್ವೀ ಜೈಸ್ವಾಲ್ 37 ಎಸೆತಗಳಲ್ಲಿ 9 ಬೌಂಡರಿ ಸಹಿತ 37 ರನ್ ಗಳಿಸಿದರೆ, ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ನಾಯಕ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲೇ 55 ರನ್ (3 ಬೌಂಡರಿ, 4 ಸಿಕ್ಸರ್) ಚಚ್ಚಿದರು. ನಂತರ ಬಂದ ದೇವದತ್ ಪಡಿಕ್ಕಲ್ ಕೇವಲ 2 ರನ್ ಗಳಿಸಿ ಔಟಾದರೆ, ರಿಯಾನ್ ಪರಾಗ್ ಕೂಡ 7 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು.

ಕೊನೆಯಲ್ಲಿ ಶಿಮ್ರಾನ್ ಹೆಟ್ಮೇರ್ 16 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರೆ, ಅಶ್ವಿನ್ ಅಜೇಯ 1 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್‌ 203 ರನ್ ಗಳಿಸಿತ್ತು.

IPL 2023 SRHvsRR 2

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಫಜಲಕ್ ಫಾರ್‍ಹೂಕಿ ಮತ್ತು ಟಿ. ನಟರಾಜನ್ ತಲಾ 2 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ ಒಂದು ವಿಕೆಟ್ ಪಡೆದು ಮಿಂಚಿದರು.

Share This Article