ಜೈಪುರ: ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell), ಫಾಫ್ ಡು ಪ್ಲೆಸಿಸ್ (Faf du Plessis) ಭರ್ಜರಿ ಅರ್ಧಶತಕ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಪ್ಲೆ ಆಫ್ ಕನಸು ಜೀವಂತವಾಗಿಸಿಕೊಂಡಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಗೆಲುವಿಗೆ 172 ರನ್ ಗುರಿ ಪಡೆದ ರಾಜಸ್ಥಾನ್ (Rajasthan Royals) 10.3 ಓವರ್‌ನಲ್ಲೇ 59 ರನ್ ಗಳಿಗೆ ಸರ್ವಪತನ ಕಂಡು ತವರಿನಲ್ಲೇ ಹೀನಾಯ ಸೋಲನುಭವಿಸಿತು.
Advertisement
Advertisement
ರಾಜಸ್ಥಾನ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 2 ಸ್ಥಾನ ಮೇಲಕ್ಕೆ ಜಿಗಿದಿರುವ ಆರ್‌ಸಿಬಿ ಪ್ಲೆ ಆಫ್ ಕನಸು ಜೀವಂತವಾಗಿಸಿಕೊಂಡಿದೆ. 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿತ್ತು. ಇದೀಗ 12ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದು, +0.166 ರನ್‌ರೇಟ್‌ನೊಂದಿಗೆ 12 ಅಂಕ ಗಳಿಸಿ 5ನೇ ಸ್ಥಾನಕ್ಕೆ ಜಿಗಿದಿದೆ. 5ನೇ ಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ +0.140 ರನ್‌ರೇಟ್‌ನೊಂದಿಗೆ 12 ಅಂಕ ಪಡೆದು 6ನೇ ಸ್ಥಾನಕ್ಕೆ ಕುಸಿದಿದೆ. ಒಂದು ವೇಳೆ ಲಕ್ನೋ ಸೋತು ಇನ್ನೆರಡು ಪಂದ್ಯಗಳಲ್ಲಿ ಆರ್‌ಸಿಬಿ ಸತತ ಗೆಲುವು ಸಾಧಿಸಿದರೆ ಪ್ಲೆ ಆಫ್ ಪ್ರವೇಶಿಸುವ ಸಾಧ್ಯತೆಗಳಿವೆ.
Advertisement
Advertisement
ಚೇಸಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಮೊದಲ ಓವರ್‌ನಿಂದಲೇ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿತು. ಪವರ್ ಪ್ಲೇನಲ್ಲೇ 5 ವಿಕೆಟ್ ಕಳೆದುಕೊಂಡು ಕೇವಲ 28 ರನ್ ಕಲೆಹಾಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮೇಯರ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾದರೂ ಆರ್‌ಸಿಬಿ ಬೌಲರ್‌ಗಳ ಎದುರು ತಲೆಬಾಗಬೇಕಾಯಿತು. ರಾಜಸ್ಥಾನ್ ಪರ ಹೆಟ್ಮೇಯರ್ 35 ರನ್ (19 ಎಸೆತ, 4 ಸಿಕ್ಸರ್, 1 ಬೌಂಡರಿ), ಜೋ ರೂಟ್ 10 ರನ್, ಸಂಜು ಸ್ಯಾಮ್ಸನ್ 4 ರನ್, ಧ್ರುವ್ ಜುರೆಲ್ 1 ರನ್, ಆಡಂ ಜಂಪಾ 2 ರನ್ ಗಳಿಸಿದರೆ, ಉಳಿದವರೆಲ್ಲರೂ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು.
ಆರ್‌ಸಿಬಿ ಪರ ವೇಯ್ನ್ ಪಾರ್ನೆಲ್ 3 ವಿಕೆಟ್ ಪಡೆದು ಮಿಂಚಿದರೆ, ಮೈಕೆಲ್ ಬ್ರೇಸ್‌ವೆಲ್, ಕರನ್ ಶರ್ಮಾ ತಲಾ 2 ವಿಕೆಟ್ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಕಿತ್ತರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಫಾಫ್ ಡು ಪ್ಲೆಸಿಸ್ 55 ರನ್ (44 ಎಸೆತ, 3 ಬೌಂಡರಿ, 2 ಸಿಕ್ಸರ್), ಗ್ಲೇನ್ ಮ್ಯಾಕ್ಸ್‌ವೆಲ್ 33 ಎಸೆತಗಳಲ್ಲಿ 54 ರನ್ (3 ಸಿಕ್ಸರ್, 5 ಬೌಂಡರಿ) ಚಚ್ಚಿದರು. ವಿರಾಟ್ ಕೊಹ್ಲಿ, 18 ರನ್ ಗಳಿದರೆ, ಮೈಕೆಲ್ ಬ್ರೇಸ್‌ವೆಲ್ 9 ರನ್ ಹಾಗೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಅನುಜ್ ರಾವತ್ 11 ಎಸೆತಗಳಲ್ಲಿ 29 ರನ್ (3 ಬೌಂಡರಿ, 2 ಸಿಕ್ಸರ್) ಚಚ್ಚಿ ಅಜೇಯರಾಗಿ ಉಳಿದರು.
ರಾಜಸ್ಥಾನ್ ಪರ ಆಡಂ ಜಂಪಾ ಹಾಗೂ ಕೆ.ಎಂ ಆಸಿಫ್ ತಲಾ 2 ವಿಕೆಟ್ ಕಿತ್ತರೆ, ಸಂದೀಪ್ ಶರ್ಮಾ 1 ವಿಕೆಟ್ ಪಡೆದು ಮಿಂಚಿದರು.