IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

Public TV
3 Min Read
Rajasthan Royals

– ಡೇವಿಡ್‌ ವಾರ್ನರ್‌ ಏಕಾಂಗಿ ಹೋರಾಟ ವ್ಯರ್ಥ

ಗುವಾಹಟಿ: ಜೋಸ್‌ ಬಟ್ಲರ್‌ (Jos Buttler), ಯಶಸ್ವಿ ಜೈಸ್ವಾಲ್‌ (Yashasvi Jaiswal) ಬೊಂಬಾಟ್‌ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

Devid Varner

ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಬರೋಬ್ಬರಿ 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಡೇವಿಡ್‌ ವಾರ್ನರ್‌ (DavidWarner) ಏಕಾಂಗಿ ಹೋರಾಟದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

David Warner

ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ನಾಯ ಡೇವಿಡ್‌ ವಾರ್ನರ್‌ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ರಾಜಸ್ಥಾನ್‌ ಬೌಲರ್‌ಗಳ ಸಂಘಟಿತ ದಾಳಿಗೆ ಬೆಚ್ಚಿದ ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ಪ್ಲೇನಲ್ಲೇ 38 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್‌ 19ನೇ ಓವರ್‌ವರೆಗೂ ಹೋರಾಡಿ 65 ರನ್‌ (55 ಎಸೆತ, 7 ಬೌಂಡರಿ) ಗಳಿಸಿದರು. ಇದರೊಂದಿಗೆ ಲಲಿತ್‌ ಯಾದವ್‌ 38 ರನ್‌ (24 ಎಸೆತ, 5 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು. ಉಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಅಂತಿಮವಾಗಿ 20 ಓವರ್‌ಗಳಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

SRHvsRR 3

ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌, ಯಜುವೇಂದ್ರ ಚಾಹಲ್‌ ತಲಾ 3 ವಿಕೆಟ್‌ ಪಡೆದರೆ, ರವಿಚಂದ್ರನ್‌ ಅಶ್ವಿನ್‌ 2 ವಿಕೆಟ್‌ ಹಾಗೂ ಸಂದೀಪ್‌ ಶರ್ಮಾ 1 ವಿಕೆಟ್‌ ಕಿತ್ತರು.

ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ಪರ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ನೀಡಿದರು. ಮೊದಲ ಓವರ್‌ನಲ್ಲಿಯೇ ಬರೋಬ್ಬರಿ 5 ಬೌಂಡರಿಗಳೊಂದಿಗೆ 20 ರನ್‌ ಚಚ್ಚಿದರು. ಈ ಮೂಲಕ 2023ರ ಐಪಿಎಲ್‌ನಲ್ಲಿ ಮೊದಲ ಓವರ್ ನಲ್ಲೇ ಅತಿ ಹೆಚ್ಚು ರನ್ ದಾಖಲಾಯಿತು. ಯಶಸ್ವಿಯೊಂದಿಗೆ ಜೊತೆಯಾದ ಬಟ್ಲರ್‌ ಸಹ ಭರ್ಜರಿ ಸಿಕ್ಸರ್‌, ಬೌಂಡರಿ ಚಚ್ಚಿದರು. ಪರಿಣಾಮ ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 8.3 ಓವರ್‌ಗಳಲ್ಲಿ ಈ ಜೋಡಿ ಬರೋಬ್ಬರಿ 98 ರನ್‌ ಕಲೆಹಾಕಿ, ದೊಡ್ಡ ಮೊತ್ತ ಗಳಿಸಲು ನೆರವಾಯಿತು.

Jos Buttler 2

ಈ ವೇಳೆ ಜೈಸ್ವಾಲ್‌ 60 ರನ್‌ (31 ಎಸೆತ, 11 ಬೌಂಡರಿ, 1 ಸಿಕ್ಸರ್‌) ಬಾರಿಸಿ ಔಟಾದರು. ಈ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ ಸಹ ಶೂನ್ಯ ಸುತ್ತಿ ನಿರ್ಗಮಿಸಿದರೆ, ರಿಯಾನ್‌ ಪರಾಗ್‌ ಕೇವಲ 7 ರನ್‌ ಗಳಿಸಿ ಹೊರನಡೆದರು. ಆದರೂ ಬಟ್ಲರ್‌ ಬ್ಯಾಟಿಂಗ್‌ ಅಬ್ಬರ ನಿಲ್ಲಲಿಲ್ಲ. ಬಳಿಕ 5ನೇ ವಿಕೆಟ್‌ಗೆ ಜೊತೆಯಾದ ಬಟ್ಲರ್‌ ಹಾಗೂ  ಹೆಟ್ಮೇಯರ್‌ 29 ಎಸೆತಗಳಲ್ಲಿ 49 ರನ್‌ ಕಲೆಹಾಕಿ ತಂಡಕ್ಕೆ ಚೇತರಿಕೆ ನೀಡಿತು. 51 ಎಸೆತಗಳಲ್ಲಿ 79 ರನ್‌ (11 ಬೌಂಡರಿ, 1 ಸಿಕ್ಸರ್)‌ ಚಚ್ಚಿ ಬಟ್ಲರ್‌ ಔಟಾದರು. ಕೊನೆಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ ಹೆಟ್ಮೇಯರ್‌ 21 ಎಸೆತಗಳಲ್ಲಿ ಸ್ಫೋಟಕ 39 ರನ್‌ (1 ಬೌಂಡರಿ, 4 ಸಿಕ್ಸರ್‌) ಚಚ್ಚಿದರೆ, ಧ್ರುವ್ ಜುರೆಲ್ 3 ಎಸೆತಗಳಲ್ಲಿ 1 ಸಿಕ್ಸರ್‌ನೊಂದಿಗೆ 8 ರನ್‌ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ರಾಜಸ್ಥಾನ್‌ 20 ಓವರ್‌ಗಳಲ್ಲಿ 199 ರನ್‌ ಕಲೆಹಾಕಿತು.

Shimron Hetmyer

ಡೆಲ್ಲಿ ಕ್ಯಾಪಿಟಲ್ಸ್‌ ಪರ ಮುಕೇಶ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಕುಲ್‌ದೀಪ್‌ ಯಾದವ್‌, ರೋವ್ಮನ್‌ ಪೋವೆಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ರನ್‌ ಏರಿದ್ದು ಹೇಗೆ?
50 ರನ್‌, 24 ಎಸೆತ
100 ರನ್‌, 55 ಎಸೆತ
150 ರನ್‌, 99 ಎಸೆತ
199 ರನ್‌, 120 ಎಸೆತ

Share This Article