ಮುಂಬೈ: ಅಜಿಂಕ್ಯ ರಹಾನೆ (Ajinkya Rahane) ಸ್ಫೋಟಕ ಬ್ಯಾಟಿಂಗ್, ರವೀಂದ್ರ ಜಡೇಜಾ (Ravindra Jadeja) ಸ್ಪಿನ್ ಜಾದು ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ (CSK), ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 16ನೇ ಐಪಿಎಲ್ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು, ತವರಿನಲ್ಲಿ ಸೋತು ಮುಂಬೈ ಮುಖಭಂಗ ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ (Mumbai Indians) ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: IPL 2023: ಯಶಸ್ವಿ, ಬಟ್ಲರ್ ಬೊಂಬಾಟ್ ಬ್ಯಾಟಿಂಗ್ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ
ಚೇಸಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮೊದಲ ಓವರ್‌ನಲ್ಲೇ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ಡಿವೋನ್ ಕಾನ್ವೆ 4 ಎಸೆತಗಳಲ್ಲಿ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. 2ನೇ ವಿಕೆಟ್‌ಗೆ ಕಣಕ್ಕಿಳಿದ ರಹಾನೆ ಸಿಕ್ಸರ್, ಬೌಂಡರಿ ಮಳೆ ಸುರಿಸುತ್ತಾ ಮುಂಬೈ ಬೌಲರ್‌ಗಳನ್ನು ಬೆಂಡೆತ್ತಿದರು. 2ನೇ ವಿಕೆಟ್ ಜೊತೆಯಾಟಕ್ಕೆ ರಹಾನೆ, ಋತುರಾಜ್ ಗಾಯಕ್ವಾಡ್ (Ruturaj Gaikwad) ಜೋಡಿ 44 ಎಸೆತಗಳಲ್ಲಿ ಭರ್ಜರಿ 82 ರನ್ ಗಳಿಸಿತ್ತು. ಕೇವಲ 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದ ರಹಾನೆ 27 ಎಸೆತಗಳಲ್ಲಿ 61 ರನ್ (7 ಬೌಂಡರಿ, 3 ಸಿಕ್ಸರ್) ಚಚ್ಚಿ ಔಟಾದರು. ನಂತರ ಬಂದ ಶಿವಂ ದುಬೆ 26 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 28 ರನ್ ಗಳಿಸಿದರು.
ಇನ್ನೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಮತ್ತೋರ್ವ ಆರಂಭಿಕ ಋತುರಾಜ್ ಗಾಯಕ್ವಾಡ್ ಕೊನೆಯವರೆಗೂ ಹೋರಾಡಿ 36 ಎಸೆತಗಳಲ್ಲಿ 40 ರನ್ (1 ಸಿಕ್ಸರ್, 2 ಬೌಂಡರಿ) ಗಳಿಸಿದರು. ಕೊನೆಯಲ್ಲಿ ಕಣಕ್ಕಿಳಿದ ಅಂಬಟಿ ರಾಯುಡು (Ambati Rayudu) 16 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 20 ರನ್ ಚಚ್ಚಿ ಗೆಲುವಿನ ನಗೆ ಬೀರಿದರು.
ಮುಂಬೈ ಪರ ಜೇಸನ್ ಬೆಹ್ರೆನ್ಡಾರ್ಫ್, ಪಿಯೂಷ್ ಚಾವ್ಲಾ ಹಾಗೂ ಕುಮಾರ್ ಕಾರ್ತಿಕೇಯ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ
ಮುಂಬೈ ಇಂಡಿಯನ್ಸ್ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಇಶಾನ್ ಕಿಶನ್ (Ishan Kishan) ಉತ್ತಮ ಆರಂಭ ನೀಡಿದರು. ಈ ಜೋಡಿ 4 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 38 ರನ್ ಜೊತೆಯಾಟ ನೀಡಿತ್ತು. ನಾಯಕ ರೋಹಿತ್ ಶರ್ಮಾ 13 ಎಸೆತಗಳಲ್ಲಿ 21 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು. ನಂತರ ಬಂದ ಕ್ಯಾಮೆರೂನ್ ಗ್ರೀನ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನೂ ಸೂರ್ಯಕುಮಾರ್ ಯಾದವ್ ಕೇವಲ 1 ರನ್ ಗಳಿಸಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲರಾದರು.
ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ತಿಲಕ್ ವರ್ಮಾ 18 ಎಸೆತಗಳಲ್ಲಿ 22 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅರ್ಷದ್ ಖಾನ್ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದ ಮುಂಬೈಗೆ ಆಘಾತ ಎದುರಾಗಿತ್ತು. ಈ ನಡುವೆ ಟಿಮ್ ಡೇವಿಡ್ 22 ಎಸೆತಗಳಲ್ಲಿ 31 ರನ್ ಬಾರಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 5 ರನ್, ಹೃತಿಕ್ ಶೋಕೆನ್ 13 ಎಸೆತಗಳಲ್ಲಿ 3 ಬೌಂಡರಿ ಸಮೇತ 18 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು.
ಜಡೇಜಾ ಸ್ಪಿನ್ ಜಾದು: ಬೌಲಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಕಿತ್ತರು. ತುಷಾರ್ ದೇಶಪಾಂಡೆ 3 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರೆ, ಸಿಸಾಂಡ ಮಗಲ 4 ಓವರ್‌ಗಳಲ್ಲಿ 37 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದರು.