ನವದೆಹಲಿ: ವೈಯಕ್ತಿಕ ಹಾಗೂ ವೃತ್ತಿಪರ ಸಮಸ್ಯೆಗಳಿಂದಾಗಿ ತೀವ್ರ ಒತ್ತಡಕ್ಕೊಳಗಾಗಿ ಮೂರು ಬಾರಿ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದೆ ಎಂದು ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಬಹಿರಂಗಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಓಪನ್ ರೋಹಿತ್ ಶರ್ಮಾ ಅವರೊಂದಿಗೆ ಇಸ್‍ಸ್ಟಾಗ್ರಾಮ್‍ನಲ್ಲಿ ಲೈವ್ ಚಾಟ್ ನಡೆಸಿದಾಗ ಶಮಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಶಮಿ ಅವರ ವಿರುದ್ಧ ಪತ್ನಿ ಹಸಿನ್ ಜಹಾನ್ 2018ರಲ್ಲಿ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಸಂಬಂಧ ಪಶ್ಚಿಮ ಬಂಗಾಳದ ಸ್ಥಳೀಯ ನ್ಯಾಯಾಲಯವು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಶಮಿ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
Advertisement
Advertisement
ವೈಯಕ್ತಿಕ ಸಮಸ್ಯೆಗಳಿಂದಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಶಮಿ 2018ರ ಮಾರ್ಚ್ ನಲ್ಲಿ ರಸ್ತೆ ಅಪಘಾತಕ್ಕೊಳಗಾಗಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಬಳಿಕ ಚೇತರಿಸಿಕೊಂಡು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಿದ್ದರು. ಈ ಮಧ್ಯೆ ನಡೆದ ಕಷ್ಟದ ದಿನಗಳನ್ನು ಶಮಿ ಈಗ ನೆನೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪುನರಾಗಮನ ಮಾಡಿದ ಅವರು ಅಂದಿನಿಂದ ಹಿಂತಿರುಗಿ ನೋಡಲಿಲ್ಲ.
Advertisement
“2015ರಲ್ಲಿ ನಾನು ವಿಶ್ವಕಪ್‍ನಲ್ಲಿ ಗಾಯಗೊಂಡಿದ್ದೆ. ಅದರ ನಂತರ ತಂಡಕ್ಕೆ ಕಮ್‍ಬ್ಯಾಕ್ ಮಾಡಲು ಸುಮಾರು 18 ತಿಂಗಳು ತೆಗೆದುಕೊಂಡೆ. ಇದು ನನ್ನ ವೃತ್ತಿಜೀವನದ ಅತ್ಯಂತ ನೋವಿನ ಹಂತವಾಗಿತ್ತು. ಚಿಕಿತ್ಸೆ, ತಂಡಕ್ಕೆ ಮರಳಲು ನಡೆಸುವ ಅಭ್ಯಾಸ ಎಷ್ಟು ಕಷ್ಟಕರವಾಗಿರುತ್ತದೆ ಎಂದು ನಿಮಗೆ ತಿಳಿದಿದೆ. ಈ ನಡುವೆ ಕೌಟುಂಬಿಕ ಸಮಸ್ಯೆಗಳು ಎದುರಾದವು. ಐಪಿಎಲ್‍ಗೂ 10ರಿಂದ 12 ದಿನಗಳ ಮುನ್ನ ನನಗೆ ಅಪಘಾತ ಸಂಭವಿಸಿತ್ತು. ನನ್ನ ವೈಯಕ್ತಿಕ ಸಮಸ್ಯೆಗಳೊಂದಿಗೆ ಮಾಧ್ಯಮಗಳಲ್ಲಿಯೂ ಸಾಕಷ್ಟು ಪ್ರಚೋದನೆಗಳು ಬರುತ್ತಿದ್ದವು” ಎಂದು ಶಮಿ ರೋಹಿತ್‍ಗೆ ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ತಿಳಿಸಿದ್ದಾರೆ.
Advertisement
“ಕುಟುಂಬದಿಂದ ಬೆಂಬಲವಿಲ್ಲದಿದ್ದರೆ ನಾನು ಕ್ರಿಕೆಟ್ ತೊರೆದು ಬಿಡುತ್ತಿದ್ದೆ. ಆ ಸಮಯದಲ್ಲಿ ನಾನು ಮೂರು ಬಾರಿ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದೆ. ನನ್ನ ಮೇಲೆ ಕಣ್ಣಿಡಲು, ಕಾಯಲು ನನ್ನೊಂದಿಗೆ ನನ್ನ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದರು. ಅಪಾರ್ಟ್ ಮೆಂಟ್‍ನ 24ನೇ ಮಹಡಿಗೆ ಅಥವಾ ಹೊರಗೆ ಹೋಗಬಹುದೆಂದು ಕುಟುಂಬಸ್ಥರು ಹೆದರುತ್ತಿದ್ದರು” ಎಂದು ಶಮಿ ಹೇಳಿದರು.
“ನನ್ನ ಕುಟುಂಬವು ನನ್ನೊಂದಿಗಿತ್ತು. ಅದಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೆ ಇರುತ್ತದೆ. ನಿನ್ನ ಆಟದತ್ತ ಗಮನ ಹರಿಸು. ನಡೆದ ಎಲ್ಲ ಕೆಟ್ಟ ಗಳಿಗೆಯನ್ನು ಮರೆತುಬಿಡು ಎಂದು ಕುಟುಂಬಸ್ಥರು ಧೈರ್ಯ ತುಂಬುತ್ತಿದ್ದರು. ಅವರ ಮಾತಿನಂತೆ ನಾನು ನೆಟ್ ಅಭ್ಯಾಸ ಆರಂಭಿಸಿದೆ. ಆದರೆ ನಾನು ಏನು ಮಾಡುತ್ತಿದ್ದೇನೆಂದು ನನಗೆ ತಿಳಿಯುತ್ತಿರಲಿಲ್ಲ, ಸಂಪೂರ್ಣವಾಗಿ ಒತ್ತಡಕ್ಕೊಳಗಾಗಿದ್ದೆ” ಎಂದು ಶಮಿ ರೋಹಿತ್‍ಗೆ ತಿಳಿಸಿದರು.
“ಅಭ್ಯಾಸದ ನಂತರ ನಾನು ದುಃಖಿತನಾಗುತ್ತಿದ್ದೆ. ನನ್ನ ಕುಟುಂಬಸ್ಥರು ಗಮನವನ್ನು ಕೇಂದ್ರೀಕರಿಸಲು ಹೇಳುತ್ತಿತ್ತು. ನನ್ನ ಸಹೋದರ ನನ್ನೊಂದಿಗಿದ್ದ. ಕೆಲವು ಸ್ನೇಹಿತರೂ ನನ್ನೊಂದಿಗಿದ್ದರು. ಅವರನ್ನು ಎಂದಿಗೂ ಮರೆಯುವುದಿಲ್ಲ. ಒಂದು ವೇಳೆ ಅಂದು ಅವರು ಇಲ್ಲದಿದ್ದರೆ ನಾನು ಏನಾದರೂ ಕಠಿಣವಾದ ಕೆಲಸಕ್ಕೆ ಕೈಹಾಕುತ್ತಿದ್ದೆ” ಎಂದು ಶಮಿ ಆತ್ಮಹತ್ಯೆಗೆ ಯತ್ನಿಸಿದ ಕ್ಷಣವನ್ನು ನೆನೆದರು.
ಕಳೆದ ವರ್ಷ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟದಲ್ಲಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೇರಿದಂತೆ ಕೇವಲ ನಾಲ್ಕು ಪಂದ್ಯಗಳಲ್ಲಿ 14 ವಿಕೆಟ್‍ಗಳನ್ನು ಪಡೆದು ಮಿಂಚಿದ್ದರು.