ಕಾರವಾರ: ಭಾರತೀಯ ನೌಕಾ ಪಡೆಗೆ (Indian Navy) ಸೇರ್ಪಡೆಯಾಗಿರುವ ಜಲಾಂತರ್ಗಾಮಿ ನಿರೋಧಕ ಶೆಲ್ಲೋ ವಾಟರ್ ಕ್ರಾಫ್ಟ್ (SWC) ನೌಕೆಗೆ ಕಾರವಾರದ ಅಂಜುದೀವ್ (Anjediva) ಎಂಬ ಐತಿಹಾಸಿಕ ದ್ವೀಪದ ಹೆಸರಿಡಲಾಗಿದೆ.
ಕೊಲ್ಕತ್ತಾ ಗಾರ್ಡನ್ ರಿಚ್ ಶಿಪ್‌ಬಿಲ್ಡ್ ಆ್ಯಂಡ್ ಎಂಜಿನಿಯರ್ಸ್ ಎಂಬ ಕಂಪನಿಯಲ್ಲಿ ಹೆಚ್ಚಿನ ದೇಸಿ ತಂತ್ರಜ್ಞಾನ ಹಾಗೂ ಉಪಕರಣ ಬಳಸಿ ನೌಕೆಯನ್ನು ನಿರ್ಮಾಣ ಮಾಡಲಾದ ಹಡಗಿಗೆ, ಬುಧವಾರ ಚೆನ್ನೈನ ಕಟ್ಟುಪಲ್ಲಿಯಲ್ಲಿ ನೌಕೆಯನ್ನು ನೀರಿಗಿಳಿಸಿ ಲೋಕಾರ್ಪಣೆ ಮಾಡಲಾಗಿದೆ. 2019 ರಲ್ಲಿ ಈ ಸಂಬಂಧ ರಕ್ಷಣಾ ಇಲಾಖೆ ಹಾಗೂ ಕಂಪನಿಯ ಜತೆ ಒಪ್ಪಂದವಾಗಿತ್ತು. ಇದುವರೆಗೆ ಇದೇ ಮಾದರಿಯ 2 ಹಡಗುಗಳನ್ನು ನೌಕಾಪಡೆಗೆ ಸೇರಿಸಲಾಗಿದ್ದು, ಇದು 3ನೇ ಹಡಗಾಗಿದೆ. 77ಮೀಟರ್ ಉದ್ದವಿರುವ ಈ ಹಡಗು ಅತ್ಯಾಧುನಿಕ ಯುದ್ಧ ತಂತ್ರಜ್ಞಾನ, ಶಸ್ತ್ರಗಳನ್ನು ಹೊಂದಿದೆ. ಇದು ಗಂಟೆಗೆ 25 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲದು.
ಕರ್ನಾಟಕದ ಊರುಗಳ ಹೆಸರುಗಳಲ್ಲಿವೆ ನೌಕೆಗಳು: ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗುವ ನೌಕೆಗಳಿಗೆ ದೇಶದ ಪ್ರಮುಖ ಊರುಗಳ, ದ್ವೀಪಗಳ ಹೆಸರಿಡುವ ವಾಡಿಕೆ ಇದೆ. ಐಎನ್‌ಎಸ್ ಕಾರವಾರ, ಐಎನ್‌ಎಸ್ ಮೈಸೂರು ಹೀಗೆ ಕರ್ನಾಟಕದ ಊರುಗಳ ಹೆಸರಿನ ಹಲವು ನೌಕೆಗಳು ನೌಕಾಸೇನೆಯಲ್ಲಿ ಕಾರ್ಯನಿರ್ವಹಿಸಿವೆ.
ಎಲ್ಲಿದೆ ಅಂಜುದೀವ್?: ಕಾರವಾರ ನಗರದ ಬಿಣಗಾದಿಂದ ಸಮುದ್ರದಲ್ಲಿ ಸುಮಾರು 3 ಕಿ.ಮೀ ದೂರದಲ್ಲಿರುವುದು ಅಂಜುದೀವ್ ಎಂಬ ಪುಟ್ಟ ದ್ವೀಪ ಕೇವಲ 150 ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿದೆ. ಕಾರವಾರದ (Karwar) ಕಣ್ಣಳತೆಯಲ್ಲೇ ಇದ್ದರೂ ಈ ದ್ವೀಪ ತೀರ ಇತ್ತೀಚಿನವರೆಗೆ ಗೋವಾ ರಾಜ್ಯಕ್ಕೆ ಸೇರಿತ್ತು. 2005 ರಿಂದ ಈ ದ್ವೀಪ ಕದಂಬ ನೌಕಾನೆಲೆಯ ವ್ಯಾಪ್ತಿಗೆ ಸೇರಿತು. ದ್ವೀಪಕ್ಕೆ ನೌಕಾಸೇನೆಯು ದಡದಿಂದ ಅಲೆ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ವಾಹನ ಓಡಾಟದ ವ್ಯವಸ್ಥೆ ಮಾಡಲಾಗಿದೆ. ವಾಸ್ಕೋಡಿಗಾಮ ಸಹ ಈ ದ್ವೀಪದಲ್ಲಿ ತಂಗಿದ್ದ ಇತಿಹಾಸ ಇದೆ. ಇದನ್ನೂ ಓದಿ: Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ
ಅಂಜುದೀವ್ ರೋಚಕ ಇತಿಹಾಸ: ಇದು ತನ್ನ ಒಡಲಲ್ಲಿ ರೋಚಕವಾದ ಇತಿಹಾಸವನ್ನು ಇಟ್ಟುಕೊಂಡಿದೆ. ಕಾರವಾರವಾದ ಜೊತೆ ಅಂಜುದೀವ್ ದ್ವೀಪ ಅವಿನಾಭಾವ ಸಂಬಂಧ ಹೊಂದಿತ್ತು. ಕಾರವಾರಕ್ಕೆ 1,400 ವರ್ಷಗಳ ಇತಿಹಾಸವಿರುವ ದಾಖಲೆಗಳು ಸಿಗುತ್ತವೆ ಎನ್ನುತ್ತಾರೆ ಇತಿಹಾಸಕಾರರು.
1498 ಕ್ಕೂ ಪೂರ್ವ ಇಲ್ಲಿ ಪೋರ್ಚುಗೀಸರು ನೆಲೆ ಸ್ಥಾಪಿಸಿದರು ಎನ್ನಲಾಗುತ್ತದೆ. ಹಿಂದೂ ಹಾಗೂ ಕ್ಯಾಥೋಲಿಕ್ ಧರ್ಮೀಯರ ಆಸ್ತೆಯ ಐತಿಹಾಸಿಕ ಕೇಂದ್ರಕ್ಕೆ ಈಗ ಭಾರತೀಯ ನೌಕಾಸೇನೆ ಗೌರವ ನೀಡಿದೆ. ಇಲ್ಲಿ ಅಂಜನಾದೇವಿಯ ಮಂದಿರವಿತ್ತು ಎನ್ನಲಾಗುತ್ತದೆ. ಈ ದ್ವೀಪದಲ್ಲಿ ಲೇಡೀಸ್ ಆಫ್ ಸ್ಪಂಗ್ ಚರ್ಚ್ ಹಾಗೂ ಹಲವು ಸ್ಮಾರಕಗಳು ಈಗಲೂ ಇವೆ. ಈ ಹಿಂದೆ ವರ್ಷಕ್ಕೊಮ್ಮೆ ಪೇಸ್ತು (ಕ್ರಿಶ್ವಿಯನ್ ಧಾರ್ಮಿಕ ಹಬ್ಬ) ಆಗುತ್ತಿತ್ತು. ಅದಕ್ಕೆ ಪ್ರವೇಶ ನೀಡುವಂತೆ ಗೋವಾದ ಕೆಲವು ಕ್ಯಾಥೋಲಿಕ್ ಮುಖಂಡರು ನಿರಂತರವಾಗಿ ಒತ್ತಾಯಿಸುತ್ತ ಬಂದಿದ್ದಾರೆ. ಮಾತ್ರವಲ್ಲ ಆ ಸಂಬಂಧ ಗೋವಾದ ನಾಗರಿಕರೊಬ್ಬರು ಪೋರ್ಚುಗಲ್ ಪ್ರಧಾನಿಗೆ ಪತ್ರ ಬರೆದಿದ್ದರು. ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಭದ್ರತೆಯ ದೃಷ್ಟಿಯಿಂದ ಇಲ್ಲಿ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಬರೋಬ್ಬರಿ ಏಳೂವರೆ ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಕಂಡು ದಂಗಾದ ಮನೆ ಮಾಲೀಕ!