ಪಹಲ್ಗಾಮ್ ದಾಳಿಯ ಬಳಿಕ ಭಾರತ ತನ್ನ ಭದ್ರತೆಗೆ ಭಾರೀ ಮಹತ್ವ ನೀಡುತ್ತಿದೆ. ಈ ದಾಳಿಯ ನಂತರ ನಡೆದ ಆಪರೇಷನ್ ಸಿಂದೂರದ ಬಳಿಕ ಭಾರತದ ಸೇನೆಯ ಶಕ್ತಿ ಜಗತ್ತಿಗೂ ಗೊತ್ತಾಗಿದೆ. ಇದರ ನಡುವೆಯೇ ಭಾರತೀಯ ಸೇನೆಯ (Indian Army) ಬತ್ತಳಿಕೆಗೆ ಹೊಸ ಹೊಸ ಅಸ್ತ್ರ ಗಳು, ಯುದ್ಧ ವಿಮಾನಗಳು ಸೇರಿದಂತೆ ನೌಕಾಪಡೆಗೆ ಯುದ್ಧನೌಕೆಗಳನ್ನು ಸೇರಿಸುತ್ತಿದೆ. ಅದರಂತೆ ಇತ್ತೀಚೆಗೆ ಸ್ವದೇಶಿ ನಿರ್ಮಿತ 2ನೇ ಜಲಾಂತರ್ಗಾಮಿ ನಿರೋಧಕ ಹಡಗು ನೌಕಾಪಡೆಗೆ ಸೇರ್ಪಡೆಯಾಗಿದೆ. ಅದರ ವಿಶೇಷತೆ ಹಾಗೂ ಮಹತ್ವದ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ನೌಕೆಗೆ ʻಅಂಡ್ರೋತ್ʼ ಹೆಸರು ಬಂದಿದ್ದೇಕೆ?
ಭಾರತೀಯ ನೌಕಾಪಡೆಗೆ (Indian Navy) ಎರಡನೆಯ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿರೋಧಕ ಹಡಗು (ಎಎಸ್‌ಡಬ್ಲ್ಯು ಎಸ್‌ಡಬ್ಲ್ಯುಸಿಗಳು) ಅಂಡ್ರೋತ್ (Androth) ಸೇರ್ಪಡೆಯಾಗಿದೆ. ಈ ಹಡಗಿನ ನಿರ್ಮಾಣವನ್ನು ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆಯೆಡೆಗೆ ಇಡಲಾದ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿದೆ.ಇದಕ್ಕೆ ಲಕ್ಷದ್ವೀಪ ಸಮೂಹದ ದ್ವೀಪಗಳಲ್ಲೊಂದಾದ ‘ಅಂಡ್ರೋತ್’ ದ್ವೀಪದ ಹೆಸರನ್ನು ಈ ಹಡಗಿಗೆ ಇಡಲಾಗಿದೆ. ನೌಕೆಗೆ ಇಡಲಾದ ʻಅಂಡ್ರೋತ್ʼ ಹೆಸರು ಭಾರತದ ವಿಶಾಲವಾದ ಕಡಲ ತೀರವನ್ನು ರಕ್ಷಿಸುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ನೌಕಾಪಡೆ ಹೇಳಿಕೊಂಡಿದೆ.
ಕೋಲ್ಕತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಈ ಹಡಗುಗಳನ್ನು ನಿರ್ಮಿಸುತ್ತಿದೆ. ಒಟ್ಟು 8 ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳಲ್ಲಿ ಈಗಾಗಲೇ ಎರಡು ನೌಕಾಪಡೆಗೆ ಹಸ್ತಾಂತರಿಸಲಾಗಿದೆ.
ಅಂಡ್ರೋತ್ ಸಾಮರ್ಥ್ಯವೇನು?
77 ಮೀಟರ್ ವಿಸ್ತೀರ್ಣದ ಈ ಹಡಗು ಡೀಸೆಲ್-ವಾಟರ್‌ಜೆಟ್ ಎಂಜಿನ್ ಮೂಲಕ ಚಲಿಸುವ ಬೃಹತ್ ಸಮರ ನೌಕೆಗಳಲ್ಲೊಂದಾಗಿದೆ. ಈ ಹಡಗುಗಳ ನಿಯೋಜನೆಯಿಂದಾಗಿ ಶತ್ರು ದೇಶಗಳ ಜಲಾಂತರ್ಗಾಮಿಗಳಿಂದ ರಕ್ಷಣೆ ದೊರೆಯಲಿದೆ. ಇನ್ನೂ ಸೆನ್ಸಾರ್ ಮೂಲಕ ಕರಾವಳಿಯ ಗಡಿಯ ಮೇಲೆ ಈ ನೌಕೆ ಕಣ್ಗಾವಲು ಇರಿಸಲಿದೆ. ಹೆಚ್ಚಿನ ಸ್ಫೋಟಕಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದ್ದು, ಹಠಾತ್ ದಾಳಿಗಳೇನಾದರೂ ಆದರೆ ತಕ್ಷಣ ಪ್ರತಿಕ್ರಿಯಿಗೆ ಸಿದ್ಧವಿರುತ್ತವೆ. ತೀರಪ್ರದೇಶಗಳಲ್ಲಿ ಶತ್ರು ದೇಶದ ಜಲಾಂತರ್ಗಾಮಿ ನೌಕೆಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚುವ ಈ ನೌಕೆ ಅದರ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ನೌಕಾಪಡೆಯ ಮೂಲಗಳು ತಿಳಿಸಿವೆ.
ಅತ್ಯಾಧುನಿಕ ಹಗುರವಾದ ಟಾರ್ಪಿಡೊಗಳು (ಸ್ಫೋಟಕ) ಮತ್ತು ASW ರಾಕೆಟ್‌ಗಳಿಂದ ಈ ಹಡಗು ಶತ್ರುಗಳ ಮೇಲೆ ದಾಳಿಗೆ ಸಜ್ಜುಗೊಂಡಿರುತ್ತದೆ. ಕಡಲಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಈ ಹಡಗು ಒಳಗೊಂಡಿದೆ.
ಸುಮಾರು 80% ಕ್ಕಿಂತ ಹೆಚ್ಚು ಸ್ಥಳೀಯ ಸಂಪನ್ಮೂಲಗಳಿಂದಲೇ ಈ ಹಡಗನ್ನು ನಿರ್ಮಿಸಲಾಗಿದೆ. ಇದರಿಂದ ರಕ್ಷಣಾ ಆಮದಿನ ಅವಲಂಬನೆ ಕಡಿಮೆ ಆಗಲಿದೆ. ಇದು ಸರ್ಕಾರದ ಆತ್ಮನಿರ್ಭರ ಭಾರತ ಧ್ಯೇಯವನ್ನು ಬಲಪಡಿಸುತ್ತದ. ಈ ಮೂಲಕ ಸ್ಥಳೀಯ ಹಡಗು ನಿರ್ಮಾಣಕ್ಕಾಗಿ ನೌಕಾಪಡೆಯ ಪ್ರಯತ್ನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಂತಾಗಿದೆ. ಅಲ್ಲದೇ ಭಾರತದ ದೇಶೀಯ ರಕ್ಷಣಾ ಉದ್ಯಮದ ಬೆಳೆಯುತ್ತಿರುವ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ.
ಅಂಡ್ರೋತ್ ಎಲ್ಲಿ ಕಾರ್ಯ ನಿರ್ವಹಿಸುತ್ತದೆ?
ವಿಶೇಷವಾಗಿ ಲಕ್ಷದ್ವೀಪ ದ್ವೀಪಸಮೂಹ ಮತ್ತು ಇತರ ನಿರ್ಣಾಯಕ ಸಮುದ್ರ ಮಾರ್ಗಗಳ ಸುತ್ತಲೂ ಕರಾವಳಿ ಭದ್ರತಗೆ ನಿಯೋಜಿಸಲಾಗುತ್ತದೆ. ಈ ಮೂಲಕ ಶತ್ರು ದೇಶಗಳ ಚಲನವಲನದ ಮೇಲೆ ಕಣ್ಣಿಟ್ಟು ಗಡಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ.
ಅಂಡ್ರೋತ್ ನೌಕೆಗೆ ಆದ ಖರ್ಚು?
ಆಂಡ್ರೋತ್ ನೌಕೆಯ ನಿರ್ಮಾಣಕ್ಕೆ 789 ಕೋಟಿ ರೂ. ಖರ್ಚಾಗಿದೆ. ಈ ಹಿಂದೆ 2020ರಲ್ಲಿ ನೌಕಾಪಡೆಯ 16 ಹಡಗುಗಳಿಗಾಗಿ ಸುಮಾರು 12,622 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು.
ಭಾರತಕ್ಕೆ ಅಂಡ್ರೋತ್ ಯಾಕೆ ಮುಖ್ಯ?
ಭಾರತ ಪರ್ಯಾಯ ದ್ವೀಪವಾಗಿದ್ದು, ಮೂರು ದಿಕ್ಕಿನಲ್ಲಿ ಸಮುದ್ರ ಗಡಿಯನ್ನು ಹೊಂದಿದೆ. ಶತ್ರುಗಳು ನೆಲದ ಮೇಲೆ ದಾಳಿ ನಡೆಸಿದರೆ ಸುಲಭವಾಗಿ ದಾಳಿ ನಡೆಸಬಹುದು. ಉದ್ವಿಗ್ನ ಪರಿಸ್ಥಿತಿಯಲ್ಲಿ ಸಮುದ್ರ ಮಾರ್ಗವಾಗಿ ದಾಳಿ ನಡೆಸಿದರೆ ಅದನ್ನು ಹತ್ತಿಕ್ಕಲು ಸಜ್ಜಾಗಿರಬೇಕಾಗುತ್ತದೆ.
ಈ ಗಡಿಗಳು ಪಾಕಿಸ್ತಾನ ಹಾಗೂ ಚೀನಾಕ್ಕೂ ಹೊಂದಿಕೊಂಡಿದ್ದು, ಒಂದೊಮ್ಮೆ ಉದ್ವಿಗ್ನ ಪರಿಸ್ಥಿತಿ ಉಂಟಾದರೆ ಅದನ್ನು ಹಿಮ್ಮೆಟ್ಟಿಸಲು ನೌಕಾಪಡೆಗೆ ಅಂಡ್ರೋತ್‌ನಂತಹ ಯುದ್ಧ ನೌಕೆಗಳ ಅಗತ್ಯವಿದೆ.
ಅಂದ್ರೋತ್ ಬಗ್ಗೆ ಮುಖ್ಯಾಂಶಗಳು
ನಿರ್ಮಾಣ: ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ (GRSE) ನಿರ್ಮಿಸಿದೆ. GRSE ನಿರ್ಮಿಸುತ್ತಿರುವ 8 ಜಲಾಂತರ್ಗಾಮಿ ನೌಕೆಗಳ ಪೈಕಿ 2ನೆಯದು.
ಉದ್ದೇಶ: ಇದು ಜಲಾಂತರ್ಗಾಮಿ-ನಿರೋಧಕ (Anti-Submarine Warfare) ಯುದ್ಧನೌಕೆಯಾಗಿದೆ. ಭಾರತದ ಕಡಲಲ್ಲಿ ಶತ್ರು ದೇಶಗಳ ಜಲಾಂತರ್ಗಾಮಿಗಳ ಸಂಚಾರ, ಹಾಗೂ ಗೂಢಚಾರ್ಯ ಮೇಲೆ ಕಣ್ಣಿಟ್ಟು ಕಾಪಾಡುವುದಾಗಿದೆ.
ಎಂಜಿನ್: ಡೀಸೆಲ್ ಎಂಜಿನ್-ವಾಟರ್‌ಜೆಟ್ ಸಂಯೋಜನೆಯಿಂದ ಚಲಿಸುತ್ತದೆ.
ಆಯುಧಗಳು: ಅತ್ಯಾಧುನಿಕ ಹಗುರವಾದ ಟಾರ್ಪಿಡೊಗಳು ಮತ್ತು ದೇಶೀಯ ಜಲಾಂತರ್ಗಾಮಿ-ನಿರೋಧಕ ಯುದ್ಧ ಕ್ಷಿಪಣಿಗಳನ್ನು ಹೊಂದಿದೆ.
ಹೆಸರಿನ ಮೂಲ: ಲಕ್ಷದ್ವೀಪ ದ್ವೀಪಸಮೂಹದಲ್ಲಿರುವ ಅಂಡ್ರೋತ್ ದ್ವೀಪದಿಂದ ಈ ನೌಕೆಗೆ ಹೆಸರಿಡಲಾಗಿದೆ.
ಸೇನೆಗೆ ಇನ್ನೂ ಸಿಗಲಿದೆ ಭೀಮ ಬಲ!
ಆಪರೇಷನ್ ಸಿಂದೂರ ಬಳಿಕ ಎಚ್ಚೆತ್ತುಕೊಂಡಿರುವ ಮೋದಿ ಸರ್ಕಾರ ಸ್ವಾತಂತ್ರ್ಯಾನಂತರದ ಅತಿದೊಡ್ಡ ರಕ್ಷಣಾ ಸಾಮರ್ಥ್ಯ ಮೇಲ್ದರ್ಜೆಗೇರಿಸುವ ಯೋಜನೆಗೆ ಕೈಹಾಕಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ನೌಕೆಗಳು, ಡ್ರೋನ್‌ಗಳನ್ನು ಸೇನಾ ಬತ್ತಳಿಕೆಗೆ ಸೇರ್ಪಡೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಮುಂದಿನ ತಲೆಮಾರಿನ ಯುದ್ಧದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು 15 ವರ್ಷಗಳ ನೀಲನಕ್ಷೆಯನ್ನೂ ಸಿದ್ಧಪಡಿಸಲಾಗಿದೆ.
ನೌಕಾಸೇನೆಗೆ ಏನೆಲ್ಲ ಸೇರಿಸಲು ತೀರ್ಮಾನಿಸಲಾಗಿದೆ?
ನೂತನ ವಿಮಾನವಾಹಕ ಯುದ್ಧ ನೌಕೆ, ಮುಂದಿನ ತಲೆಮಾರಿನ 10 ಯುದ್ಧನೌಕೆಗಳು, 8 ಅತ್ಯಾಧುನಿಕ ಗಸ್ತು ಸಮರ ನೌಕೆಗಳು, ನಾಲ್ಕು ಲ್ಯಾಂಡಿಂಗ್ ಡಾಕ್ ಪ್ಲಾಟ್‌ಫಾರ್ಮ್‌ಗಳು, ಯುದ್ಧನೌಕೆಗಳಿಗೆ ನ್ಯೂಕ್ಲಿಯರ್ ಪ್ರೊಪಲ್ಷನ್‌ಗಳು, ಎಲೆಕ್ಟ್ರೋ ಮ್ಯಾಗ್ನೆಟಿಕ್ ಏರ್‌ಕ್ರಾಫ್ಟ್ ಲಾಂಚ್ ಸಿಸ್ಟಂಗಳ ಸೇರ್ಪಡೆಗೆ ತೀರ್ಮಾನಿಸಲಾಗಿದೆ.