ಬೆಳಗಾವಿ: ಕಾಡಿನಿಂದ ನಾಡಿಗೆ ಬಂದ ವಿಶೇಷ ಅತಿಥಿಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ, ಊಟ, ಉಪಚಾರ ನೀಡಿ ಭಾರಿ ಸೇವೆ ಮಾಡುತ್ತಿದ್ದಾರೆ.
ಹೌದು. ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದ ಹೊರವಲಯದಲ್ಲಿ ಹದಿನೈದು ದಿನಗಳ ಹಿಂದೆ ಕಾಡುಕೋಣವೊಂದು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ನಡೆಯಲು ಆಗದ ಸ್ಥಿತಿಯಲ್ಲಿದ್ದ ಕಾಡುಕೋಣಕ್ಕೆ ಪಶುತಜ್ಞರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಕಾಡುಕೋಣ ಚೇತರಿಸಿಕೊಂಡಿರಲಿಲ್ಲ. ಆದ್ದರಿಂದ ಮೈಸೂರು, ಗದಗ ಪ್ರಾಣಿ ಸಂಗ್ರಾಲಯ ವೈದ್ಯರು ಹಾಗೂ ಬೆಳಗಾವಿಯ ಸ್ಥಳಿಯ ಪಶು ವೈದ್ಯರನ್ನು ಕರೆಸಿ ಕಾಡುಕೊಣಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಿಕಿತ್ಸೆ ಜೊತೆಗೆ ವೈದ್ಯರ ಸಲಹೆಯಂತೆ ಕಾಡುಕೋಣಕ್ಕೆ ದಿನಕ್ಕೆ 80 ಕೇಜಿ ಮೆಕ್ಕೇಜೊಳದ ಮೇವು ಹಾಗೂ ಪ್ರೋಟಿನ್ ಪುಡಿಯನ್ನು ನೀರಿನಲ್ಲಿ ಬೆರಸಿ ನೀಡಲಾಗುತ್ತಿದೆ. ಸದ್ಯ ಕಾಡುಕೋಣ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಮೈಸೂರು ಮೃಗಾಲಯಕ್ಕೆ ಇದನ್ನು ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.