-ಸಂವಿಧಾನದ ಚರ್ಚೆ ವೇಳೆ ಬಿಜೆಪಿ ಕುಟುಕಿದ ರಾಜ್ಯಸಭೆ ವಿಪಕ್ಷ ನಾಯಕ
ನವದೆಹಲಿ: ತ್ರಿವರ್ಣ ಧ್ವಜ, ಅಶೋಕ ಚಕ್ರ ಮತ್ತು ಸಂವಿಧಾನವನ್ನು ದ್ವೇಷಿಸುವವರು ಇಂದು ನಮಗೆ ಸಂವಿಧಾನದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಸಂವಿಧಾನ ಜಾರಿಗೆ ಬಂದಾಗ ಆರ್‌ಎಸ್‌ಎಸ್ ನಾಯಕರು ರಾಮಲೀಲಾ ಮೈದಾನದಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿದ್ದರು. ನೆಹರೂ, ಅಂಬೇಡ್ಕರ್, ಮಹಾತ್ಮಾ ಗಾಂಧಿ ಪ್ರತಿಕೃತಿ ದಹಿಸಿದ್ದರು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದ್ದಾರೆ.
ಸಂವಿಧಾನ ಜಾರಿಗೆ 75 ವರ್ಷ ಪೂರ್ಣವಾದ ಹಿನ್ನೆಲೆ ನಡೆದ ವಿಶೇಷ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಿಮಗೆ ಸಮಾನತೆ ಮೇಲೆ ನಂಬಿಕೆ ಇಲ್ಲ. ನೀವು ಸಾಮಾಜಿಕ ವಾದದ ಬಗ್ಗೆ ಮಾತನಾಡುತ್ತೀರಿ. ಐದು ಸಾವಿರ ವರ್ಷದಿಂದ ಮನುಸ್ಮೃತಿ ಮೂಲಕ ನೀವು ಹೇಗೆ ನಮಗೆ ತೊಂದರೆ ಕೊಟ್ಟಿದ್ದೀರಿ ಎಂದು ನಾವು ಹೇಳಬೇಕಾಗುತ್ತದೆ. ಬಿಜೆಪಿ ನಾಯಕರು ಸಂವಿಧಾನದ ಬಗ್ಗೆ ಮಾತನಾಡುವಷ್ಟು ಬದಲಾಗಿದ್ದಾರೆ. ಈ ಬದಲಾವಣೆ ಯಾವಾಗ ಆಗಿದೆ ಗೊತ್ತಿಲ್ಲ. 2024ರ ಚುನಾವಣೆ ಬಳಿಕ ಆಯಿತಾ ಎನ್ನುವುದು ಗೊತ್ತಿಲ್ಲ. ದೇಶದ ಜನರು ಕನಿಷ್ಠ ಇವರು ಸಂವಿಧಾನದ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ. 1949ರಲ್ಲಿ ಆರ್‌ಎಸ್‌ಎಸ್ ನಾಯಕರು ಮನುಸ್ಮೃತಿ ಆಧರಿಸಿದ ಸಂವಿಧಾನ ಅಲ್ಲ ಎಂದು ವಿರೋಧ ಮಾಡಿದರು. ಇಂದಿಗೂ ಮನುಸ್ಮೃತಿ ಅವರ ಮನಸ್ಸಿನಲ್ಲಿದೆ ಎಂದು ಕುಟುಕಿದರು.ಇದನ್ನೂ ಓದಿ: ಒಂದು ಕುಟುಂಬ ತನ್ನ ಲಾಭಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿತ್ತು: ನಿರ್ಮಲಾ ಸೀತಾರಾಮನ್ ವಾಗ್ದಾಳಿ
2002ರಲ್ಲಿ ಕೋರ್ಟ್ ಆದೇಶದ ಮೇರೆಗೆ ಅನಿವಾರ್ಯವಾಗಿ ಆರ್‌ಎಸ್‌ಎಸ್ (RSS) ಕೇಂದ್ರ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು. ಆದರೆ ಆರ್‌ಎಸ್‌ಎಸ್ ಕಚೇರಿಯಲ್ಲಿ ತ್ರಿವರ್ಣ ಧ್ವಜಕ್ಕೆ ಬೆಲೆ ಇರಲಿಲ್ಲ. ನಮ್ಮ ಸಂವಿಧಾನ ದೇಶದ ಜನರನ್ನು ರಕ್ಷಿಸುತ್ತದೆ. ಬಹಳಷ್ಟು ದೇಶಗಳಲ್ಲಿ ಪ್ರಜಾಪಭುತ್ವ ವ್ಯವಸ್ಥೆಗೆ ಬಂದರೂ ಕೂಡ ಮಹಿಳೆಯರಿಗೆ ಮತದಾನದ ಹಕ್ಕು ನೀಡಿರಲಿಲ್ಲ. ಭಾರತ ಮಾತ್ರ ಸಂವಿಧಾನ ಜಾರಿಯಾದ ದಿನದಿಂದಲೇ ಮತದಾನದ ಹಕ್ಕು ನೀಡಿತ್ತು. ಮಹಿಳೆಯರ ಜೊತೆಗೆ ಎಲ್ಲ ವರ್ಗದ ಜನರಿಗೆ ಹಕ್ಕು ನೀಡಲಾಯಿತು. ಶೂದ್ರರಿಗೆ ಮತದಾನದ ಹಕ್ಕು ನೀಡಿದಾಗ ಆರ್‌ಎಸ್‌ಎಸ್ ವಿರೋಧ ಮಾಡಿತ್ತು.
ನಮ್ಮ ನಾಯಕರ ಒಳ್ಳೆಯ ಹೇಳಿಕೆಗಳು ಬಿಟ್ಟು ಕಟ್ ಆಂಡ್ ಪೇಸ್ಟ್ ಮಾಡುತ್ತಿದ್ದಾರೆ. ನಮ್ಮನ್ನು ಟೀಕಿಸಲು ಏನು ಬೇಕು ಅದನ್ನು ತಂದು ಹೇಳುತ್ತಿದ್ದೀರಿ. ಪ್ರಧಾನಿ ಮೋದಿ ನಮ್ಮನ್ನು ಮೋಸಗಾರರು ಎನ್ನುತ್ತಾರೆ. ಆದರೆ ಮೋಸಗಾರರು ನೀವು. ಎರಡು ಕೋಟಿ ಉದ್ಯೋಗ ನೀಡುವ ಮಾತು ಸತ್ಯಾನಾ? ರೈತರ ಆದಾಯ ದ್ವಿಗುಣವಾಯ್ತಾ? ಇದು ಬರೀ ಅಸತ್ಯವಲ್ಲ, ಘೋರ ಅಸತ್ಯ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮೀಸಲಾತಿ ವಿರೋಧಿ ಅದಕ್ಕಾಗಿ ಜಾತಿಜನಗಣತಿ ವಿರೋಧ ಮಾಡುತ್ತಿದ್ದಾರೆ. ನೆಹರೂ ಜನ್ಮದಿನದ ಹಿನ್ನೆಲೆ ಸರ್ದಾರ್ ಪಟೇಲ್ ಪತ್ರ ಬರೆದಿದ್ದರು. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿವೆ. ನಮ್ಮ ಸಂಬಂಧ ಸರಿ ಇಲ್ಲ ಎಂದು ಪಸರಿಸುತ್ತಿದ್ದಾರೆ. ಭಿನ್ನಾಭಿಪ್ರಾಯಗಳ ನಡುವೆ ನಾವು ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ನಿಮ್ಮ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದ್ದರು. ಆದರೆ, ಇಂದು ಬಿಜೆಪಿ ನಾಯಕರು ಅವರ ನಡುವೆ ಜಗಳ ಮಾಡಿಸುತ್ತಿದ್ದಾರೆ. ಬಿಜೆಪಿಯವರು ಇಂತಹ ಪತ್ರ ಓದಬೇಕು, ಆರ್‌ಎಸ್‌ಎಸ್ ನೀಡಿದ ತರಬೇತಿಯನ್ನು ತಂದು ಇಲ್ಲಿ ಓದಬೇಡಿ ಎಂದು ವ್ಯಂಗ್ಯವಾಡಿದರು.
ನೆಹರೂ, ಅಂಬೇಡ್ಕರ್ ವಿರುದ್ಧವಾಗಿದ್ದರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಸಂವಿಧಾನ ರಚನೆಗೆ ನೆಹರೂ ಪೂರ್ಣ ಸ್ವಾತಂತ್ರ‍್ಯ ನೀಡಿದ್ದರು. ಸಂವಿಧಾನ ರಚನೆಯ ಪೂರ್ಣ ಕ್ರೆಡಿಟ್ ಅನ್ನು ಅಂಬೇಡ್ಕರ್ ಕಾಂಗ್ರೆಸ್‌ಗೆ ನೀಡಿದ್ದರು. ಅಂಬೇಡ್ಕರ್ ಬಿಜೆಪಿ ಸಹಾಯದಿಂದ ಚುನಾವಣೆ ಗೆದ್ದಿಲ್ಲ, ನೀವು ಅಂಬೇಡ್ಕರ್ ವಿರುದ್ಧವಾಗಿದ್ದಿರಿ. ಕಾಂಗ್ರೆಸ್ ಬಹುಮತ ಪಡೆದು ಬಂದಾಗ ಸಂವಿಧಾನ ರಚನಾ ಸಮಿತಿಗೆ ಅಧ್ಯಕ್ಷರನ್ನಾಗಿ ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಿತ್ತು. ಇದು ನನಗೆ ಆಶ್ಚರ್ಯ ತಂದಿತು ಎಂದು ಖುದ್ದು ಅಂಬೇಡ್ಕರ್ ಹೇಳಿದ್ದರು. ಸ್ವಾತಂತ್ರ‍್ಯ ಸಿಕ್ಕಾಗ ದೇಶದಲ್ಲಿ ಸೂಜಿಯೂ ಉತ್ಪಾದನೆಯಾಗುತ್ತಿರಲಿಲ್ಲ. ಕಳೆದ 70 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ? ಎಂದು ಕೇಳುತ್ತಾರೆ ಕಾಂಗ್ರೆಸ್ ಇಲ್ಲದಿದ್ದರೆ ಮೋದಿ ಪ್ರಧಾನಿಯಾಗುತ್ತಿರಲಿಲ್ಲ. ನಾನು ವಿರೋಧ ಪಕ್ಷದ ನಾಯಕನಾಗುತ್ತಿರಲಿಲ್ಲ. ಇಲ್ಲಿರುವ ನೀವು ಡಾಕ್ಟರ್, ಇಂಜಿನಿಯರ್ ಆಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ನೆಹರೂ ಆಧುನಿಕ ಭಾರತ ಕಟ್ಟಿದರು, ಇಂದಿರಾ ಪರಮಾಣು ಶಕ್ತಿ ನೀಡಿದರು, ಶಾಸ್ತ್ರಿ ಅವರು ಹಸಿರುಕ್ರಾಂತಿ ಮಾಡಿದರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಮಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗುತ್ತಿರಲು ಕಾಂಗ್ರೆಸ್ ಕಾರಣ. ನಮಗೆ ಅಧಿಕಾರ ಬಂದಾಗ ಮಹಿಳಾ ಮೀಸಲಾತಿ ಬಿಲ್ ಅನ್ನು ವೇಗವಾಗಿ ಜಾರಿ ಮಾಡುತ್ತೇವೆ. ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ ಆದರೆ ತುರ್ತು ಪರಿಸ್ಥಿತಿ ಬಳಿಕವೂ ಜನರು ಕಾಂಗ್ರೆಸ್‌ಗೆ ಬಹುಮತ ನೀಡಿದರು. ಜನರ ನಿರ್ಣಯವೇ ಅಂತಿಮ ಅಲ್ಲವೇ? ಪ್ರಧಾನಿ ನರೇಂದ್ರ ಮೋದಿ ಇಡೀ ದೇಶ ಪ್ರವಾಸ ಮಾಡುತ್ತಾರೆ. ಆದರೆ ಮಣಿಪುರಕ್ಕೆ ಮಾತ್ರ ಭೇಟಿ ನೀಡುವುದಿಲ್ಲ ಎಂದು ಅಬ್ಬರಿಸಿದರು.ಇದನ್ನೂ ಓದಿ: 66 ನೇ ವರ್ಷಕ್ಕೆ ಕಾಲಿಟ್ಟ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ; ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ