Sunday, 22nd July 2018

Recent News

ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಮೂವರ ಶವಪತ್ತೆ

ವಾಷಿಂಗ್ಟನ್: ಅಮೆರಿಕದ ಈಲ್ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಕುಟುಂಬದ 4 ಸದಸ್ಯರಲ್ಲಿ ಮೂವರು ಪತ್ತೆಯಾಗಿದ್ದಾರೆ.

ಗುಜರಾತ್ ನ ಸೂರತ್ ಮೂಲದವರಾದ ಸಂದೀಪ್, ಪತ್ನಿ ಸೌಮ್ಯ ಹಾಗೂ ಇಬ್ಬರು ಮಕ್ಕಳು ಈಲ್ ನದಿ ಬಳಿ ಏಪ್ರಿಲ್ 8 ರಂದು ಕಾಣೆಯಾಗಿದ್ದರು. ಕಳೆದ ವಾರ ಸ್ಯಾನ್ ಜೋಸ್ ನಲ್ಲಿರುವ ಕುಟುಂಬ ಸದಸ್ಯರನ್ನು ಭೇಟಿಯಾಗಲು ಸಂದೀಪ್ ಕುಟುಂಬ 2016ರ ಮಾಡೆಲ್ ಕಡುಕೆಂಪು ಬಣ್ಣದ ಹೋಂಡಾ ಪೈಲಟ್ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು.

ಏಪ್ರಿಲ್ 8 ರಂದು ಸ್ಯಾನ್ ಜೋಸ್ ನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡಬೇಕಿದ್ದ ಸಂದೀಪ್ ಭೇಟಿ ಮಾಡಿರಲಿಲ್ಲ. ಒರೆಗಾನ್ ನಿಂದ ಕ್ಯಾಲಿಫೋರ್ನಿಯ ಗೆ ಪ್ರಯಾಣ ಮಾಡುತ್ತಿದ್ದ ವೇಳೆ ಕುಟುಂಬ ಕಾಣೆಯಾದ ಬಗ್ಗೆ ವರದಿಯಾಗಿತ್ತು. ಕ್ಲಾಮತ್ ರೆಡ್ವುಡ್ ರಾಷ್ಟ್ರೀಯ ಉದ್ಯಾನವನದಲ್ಲಿ ಕುಟುಂಬ ಕೊನೆಯದಾಗಿ ಫೋಟೋ ತೆಗೆದಿತ್ತು ಎಂದು ಸಂದೀಪ್ ಸ್ನೇಹಿತರು ಮತ್ತು ಕುಟುಂಬದವರು ತಿಳಿಸಿದ್ದಾರೆ.

70 ಜನರ ತನಿಖಾ ತಂಡ ಘಟನೆ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದೆ. ಅದರಲ್ಲಿ 20 ಜನರ ತಂಡ ನದಿಯಲ್ಲಿ ಹುಡುಕಾಟ ನಡೆಸಿದೆ. ಅಪಘಾತ ವರದಿಯಾದ ಒಂದು ಕಿಮೀ ಅಂತರದಲ್ಲಿ ಪಟ್ರೋಲ್ ವಾಸನೆ ಸಿಕ್ಕ ತಂಡ ಕಾರನ್ನು ಪತ್ತೆಹಚ್ಚಿದೆ. ಕಾರು ಕೆಸರಿನಲ್ಲಿ ಹೂತು ಹೋಗಿತ್ತು. ಟ್ರಕ್ ಸಹಾಯದಿಂದ ಇಬ್ಬರ ದೇಹವನ್ನು ಹೊರ ತೆಗೆಯಲಾಗಿದೆ.

41 ವರ್ಷದ ಸಂದೀಪ್ ತೊಟ್ಟಪಿಲ್ಲಿ ಮತ್ತು ಅವರ 9 ವರ್ಷದ ಮಗಳು ಸಾಚಿ ಈಲ್ ನದಿಯಲ್ಲಿ ಕಾರಿನ ಒಳಗೆ ಸಿಲುಕಿದ್ದರು. 38 ವರ್ಷದ ಸೌಮ್ಯ ಅವರ ದೇಹವನ್ನು ಶುಕ್ರವಾರ ತನಿಖಾ ತಂಡ ಪತ್ತೆ ಹಚ್ಚಿದೆ. 12 ವರ್ಷದ ಸಿದ್ಧಾಂತನ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.

ಕುಟುಂಬದ ನಾಲ್ಕು ಸದಸ್ಯರಲ್ಲಿ ಮೂರು ಮಂದಿಯನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾಣೆಯಾದ ದಿನವೇ 5 ರಿಂದ 13 ಸೆಂಟಿ ಮೀಟರ್ ಮಳೆಯಾಗಿರುವ ವರದಿಯಾಗಿದೆ.

ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಸಂದೀಪ್ ಲಾಸ್ ಏಂಜಲೀಸ್ ನಲ್ಲಿ ವಾಸವಿದ್ದರು. ಸುಮಾರು 15 ವರ್ಷಗಳಿಂದ ಅಮೆರಿಕದಲ್ಲಿ ವಾಸವಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *