ಬೆಳವಣಿಗೆ ಕುಂಠಿತವಾದರೂ, ಭಾರತದ ಹಣಕಾಸು ವ್ಯವಸ್ಥೆ ಸ್ಥಿರ – ಆರ್‌ಬಿಐ

Public TV
2 Min Read
RBI

ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾದರೂ ಭಾರತದ ಹಣಕಾಸು ವ್ಯವಸ್ಥೆ ಸ್ಥಿರವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

ಆರ್‌ಬಿಐ ಬಿಡುಗಡೆ ಮಾಡಿರುವ 20ನೇ ಹಣಕಾಸು ಸ್ಥಿರತೆ ವರದಿ(ಎಫ್‍ಎಸ್‍ಆರ್)ಯಲ್ಲಿ ಈ ಕುರಿತು ತಿಳಿಸಲಾಗಿದೆ. ದೇಶೀಯ ಬೆಳವಣಿಗೆ ಕುಂಠಿತಗೊಂಡರೂ ಭಾರತದ ಹಣಕಾಸು ವ್ಯವಸ್ಥೆ ಸ್ಥಿರವಾಗಿದೆ. ಅಲ್ಲದೆ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಮರು ಬಂಡವಾಳಗೊಳಿಸಿದ ನಂತರ ಬ್ಯಾಂಕಿಂಗ್ ಕ್ಷೇತ್ರದ ಸ್ಥಿತಿಸ್ಥಾಪಕತ್ವ ಸುಧಾರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಣಕಾಸು ಸ್ಥಿರತೆ ಅಪಾಯದ ಕುರಿತು ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ(ಎಫ್‍ಎಸ್‍ಡಿಸಿ) ಉಪಸಮಿತಿ ಈ ಹಿಂದೆ ನೀಡಿರುವ ವರದಿ ಹಾಗೂ ಹಣಕಾಸು ವ್ಯವಸ್ಥೆಯ ಸ್ಥಿತಿ ಸ್ಥಾಪಕತ್ವವನ್ನು ಇದು ಪ್ರತಿಬಿಂಬಿಸಿದೆ. ಹಣಕಾಸು ಕ್ಷೇತ್ರದ ಅಭಿವೃದ್ಧಿ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಹ ವರದಿಯಲ್ಲಿ ಚರ್ಚಿಸಲಾಗಿದೆ.

indian economy

ಜಾಗತಿಕ, ದೇಶೀಯ ಆರ್ಥಿಕ ಅನಿಶ್ಚಿತತೆಗಳು ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದಾಗುವ ಅಪಾಯಗಳು ಮುಂದುವರಿಯುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಬ್ರೆಕ್ಸಿಟ್ ಒಪ್ಪಂದದ ವಿಳಂಬ, ವ್ಯಾಪಾರ ಸಮರ, ಆರ್ಥಿಕ ಹಿಂಜರಿತ, ತೈಲ ಮಾರುಕಟ್ಟೆಯ ಅಡೆ ತಡೆಗಳು ಹಾಗೂ ಭೌಗೋಳಿಕ ರಾಜಕೀಯ ಅಪಾಯಗಳಿಂದಾಗಿ ಜಾಗತಿಕ ಆರ್ಥಿಕತೆಯು ಹಲವು ಅನಿಶ್ಚಿತತೆಗಳನ್ನು ಎದುರಿಸಿದೆ. ಈ ಅನಿಶ್ಚಿತತೆಗಳು ಗ್ರಾಹಕರ ವಿಶ್ವಾಸ, ವ್ಯವಹಾರದ ಬಗೆಗಿನ ಒಲವು ಹಾಗೂ ಹೂಡಿಕೆಯನ್ನು ಕಡಿಮೆ ಮಾಡಿದೆ. ಈ ಕುರಿತು ಗಮನಹರಿಸದಿದ್ದಲ್ಲಿ ಜಾಗತಿಕ ಬೆಳವಣಿಗೆ ಮೇಲೆ ಸಣ್ಣ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೇಂದ್ರ ಬ್ಯಾಂಕ್ ಎಚ್ಚರಿಸಿದೆ.

ನಿರಂತರ ಜಾಗತಿಕ ಕುಸಿತದ ಸಂದರ್ಭದಲ್ಲಿ ಭಾರತದ ರಫ್ತು ತಲೆಕೆಳಗಾಗಬಹುದು ಎಂದು ಆರ್‍ಬಿಐ ಆತಂಕ ವ್ಯಕ್ತಪಡಿಸಿದೆ. ಚಾಲ್ತಿ ಖಾತೆ ಕೊರತೆ ನಿಯಂತ್ರಣದಲ್ಲಿರಲಿದೆ. ಆದರೆ ಬಳಕೆ ಹಾಗೂ ಹೂಡಿಕೆಗಳನ್ನು ಪುನರುಜ್ಜೀವನಗೊಳಿಸುವುದು ನಿರ್ಣಾಯಕ ಸವಾಲಾಗಿ ಉಳಿಯಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

economic growth india

ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಸ್ಥಿತಿ ಕುರಿತು ವಿವರಿಸಿರುವ ಆರ್‌ಬಿಐ, ಸೆಪ್ಟೆಂಬರ್ ತಿಂಗಳಲ್ಲಿ ಖಾಸಗಿ ವಲಯದ ಬ್ಯಾಂಕುಗಳ ಬೆಳವಣಿಗೆ ಪ್ರಮಾಣ ಶೇ.16.5ಕ್ಕೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸಾಲದ ಬೆಳವಣಿಗೆ ಶೇ.8.7ರಷ್ಟು ಕಡಿಮೆಯಾಗಿದೆ. ಸರ್ಕಾರ ಸಾರ್ವಜನಿಕ ಬ್ಯಾಂಕುಗಳನ್ನು ಮರು ಬಂಡವಾಳಕ್ಕೆ ಒಳಪಡಿಸಿದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಬಂಡವಾಳ ಗಮನಾರ್ಹವಾಗಿ ಸುಧಾರಿಸಿದೆ. 2019ರ ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಒಟ್ಟು ಅನುತ್ಪಾದಕ ಆಸ್ತಿ(ಎನ್‍ಪಿಎ) ಅನುಪಾತವು ಶೇ.9.3ಕ್ಕೆ ಬದಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *