ಬೆಂಗಳೂರು: ಪ್ರಗತಿಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ರಾಜ್ಯಗಳ ವಿಭಜನೆ ಹಾಗೂ ಹಲವು ನಗರಗಳ ಅಭಿವೃದ್ಧಿ ಅತ್ಯಗತ್ಯ ಎಂದು ಹೆಸರಾಂತ ಅರ್ಥಶಾಸ್ತಜ್ಞ ಹಾಗೂ ಕೇಂದ್ರ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಬುಧವಾರ ಪ್ರತಿಪಾದಿಸಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್-25)ದಲ್ಲಿ ‘ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಜಾಗತಿಕ ಸವಾಲುಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೇ ನಗರಗಳ ಅಭಿವೃದ್ಧಿಯಿಂದಾಗಿ ಹಲವು ಸಮಸ್ಯೆಗಳು ತಲೆದೋರಿವೆ ಎಂದರು.
Advertisement
ಅಭಿವೃದ್ಧಿಯ ಹಂಚಿಕೆ ಮತ್ತು ದಕ್ಷ ಆಡಳಿತ ದೃಷ್ಟಿಯಿಂದ ರಾಜ್ಯಗಳ ವಿಭಜನೆ ಅತ್ಯಗತ್ಯ. ಉತ್ತರ ಪ್ರದೇಶವನ್ನು ಹರಿತ್ ಪ್ರದೇಶ, ಪೂರ್ವಾಂಚಲ್ ರಾಜ್ಯಗಳಾಗಿ ವಿಭಜಿಸುವ ಬಗ್ಗೆ ಈ ಹಿಂದೆ ಪ್ರಸ್ತಾಪವಾಗಿತ್ತು. ಹಾಗೆಯೇ ಮಹಾರಾಷ್ಟ್ರದಲ್ಲೂ ವಿದರ್ಭ ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಕೂಗು ಇದೆ. ರಾಜ್ಯಗಳಲ್ಲಿ ಕೇವಲ ಒಂದೇ ನಗರಕ್ಕೆ ಅಭಿವೃದ್ಧಿ ಕೇಂದ್ರೀಕರಿಸುವುದರಿಂದ ಹಲವು ಸಮಸ್ಯೆಗಳು ತಲೆದೋರಿವೆ ಎಂದು ವಿವರಿಸಿದರು.
Advertisement
ಅತಿಹೆಚ್ಚು ತಲಾದಾಯ ಹೊಂದಿರುವ ರಾಜ್ಯಗಳ ಪೈಕಿ ದೇಶದಲ್ಲೇ 4ನೇ ಸ್ಥಾನದಲ್ಲಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಗರವಾಗಿದೆ. ಬಹುಹಿಂದೆ ಖ್ಯಾತ ಉದ್ಯಮಿ ಜೆಆರ್‌ಡಿ ಟಾಟಾ ಅವರು ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಿದಾಗಿನಿಂದಲೂ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಇಲ್ಲಿನ ಹವಾಗುಣವೂ ಅನುಕೂಲಕರವಾಗಿದ್ದು, ಬೆಳವಣಿಗೆಗೆ ಪೂರಕವಾಗಿದೆ ಎಂದರು.
Advertisement
ನಮ್ಮಲ್ಲಿ ನಗರಾಡಳಿತಕ್ಕೆ ಹೆಚ್ಚಿನ ಅಧಿಕಾರ ಇಲ್ಲ. ಬದಲಿಗೆ ರಾಜ್ಯ ಸರ್ಕಾರಗಳೇ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಇದು ಬದಲಾಗಬೇಕು. ಗಾಂಧೀಜಿಯವರು ಹಿಂದೆ ನೀಡಿದ್ದ ಹೇಳಿಕೆಯಂತೆ, ‘ನಿಜವಾದ ಭಾರತ ಗ್ರಾಮೀಣ ಪ್ರದೇಶದಲ್ಲಿದೆ’ ಎಂಬ ಸ್ಥಿತಿ ಈಗ ಇಲ್ಲ. ನಗರಗಳು ಮಿತಿಮೀರಿ ಬೆಳೆಯುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಅಭಿವೃದ್ಧಿಯ ಹಂಚಿಕೆ ದೃಷ್ಟಿಯಿಂದ 2 ಮತ್ತು 3ನೇ ಸ್ತರದ ನಗರಗಳತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂದು ಹೇಳಿದರು. ಅರ್ಥಶಾಸ್ತ್ರಜ್ಞ ಸಲ್ಮಾನ ಸೋಝ್ ಗೋಷ್ಠಿ ನಿರ್ವಹಿಸಿದರು.