Connect with us

International

ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯನನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ!

Published

on

ಕೆನ್ಸಾಸ್: ಭಾರತೀಯ ಮೂಲದ ವೈದ್ಯರೊಬ್ಬರನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.

ಮೃತ ದುರ್ದೈವಿ ವೈದ್ಯರನ್ನು 57 ವರ್ಷದ ಅಚ್ಚುತ್ ರೆಡ್ಡಿ ಎಂಬುವುದಾಗಿ ಗುರುತಿಸಲಾಗಿದ್ದು, ಇವರು ತೆಲಂಗಾಣದವರು ಎನ್ನಲಾಗಿದೆ. ಅಮೆರಿಕದ ಕೆನ್ಸಾಸ್ ನಗರದಲ್ಲಿರೋ ತನ್ನ ಕ್ಲಿನಿಕ್ ನಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.

ಹತ್ಯೆ ಮಾಡಿದ ವ್ಯಕ್ತಿಯನ್ನು ಉಮರ್ ರಷೀದ್ ದತ್ ಎಂದು ಗುರುತಿಸಲಾಗಿದೆ ಅಂತ ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಆರೋಪಿ ಸಿಕ್ಕಿದ್ದು ಹೇಗೆ?: ಕಾರ್ ಪಾರ್ಕಿಂಗ್ ಮಾಡೋ ಜಾಗದಲ್ಲಿ ರಕ್ತದ ಕಲೆಗಳಿರುವ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಕಾರಿನೊಳಗೆ ಕುಳಿತಿರುವುದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಅಚ್ಯುತ್ ವಿಚಿಟಾದಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ಇದೇ ಕ್ಲಿನಿಕ್ ನಲ್ಲಿ ಆರೋಪಿ ರಷೀದ್ ಮತ್ತು ವೈದ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿ ರಷೀದ್ ವೈದ್ಯರನ್ನು ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹತ್ಯೆ ಮಾಡಿದ್ದ ವ್ಯಕ್ತಿ ಅಚ್ಯುತ್ ಅವರ ರೋಗಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಚ್ಯುತ್ ಅವರು ನಲಗೊಂಡ ಜಿಲ್ಲೆಯವರಾಗಿದ್ದು, 1986ರಲ್ಲಿ ಉಸ್ಮಾನಿಯಾ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಅಮೆರಿಕಾಗೆ ತೆರಳಿ ಅಲ್ಲಿಯೇ ನೆಲೆಯೂರಿದ್ದರು. ವಿಚಿಟಾದಲ್ಲಿನ ಕಾನ್ಸಾಸ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯದಲ್ಲಿ ಮನೋವೈದ್ಯ ಶಾಸ್ತ್ರವನ್ನು ಅಚ್ಯುತ್ ಪೂರ್ಣಗೊಳಿಸಿದ್ದರು. ಇವರ ತಂದೆ ಬೆಂಗಳೂರಿನವರಾಗಿದ್ದು, ತಾಯಿ ಹೈದರಾಬಾದ್ ಮೂಲದವರಾಗಿದ್ದಾರೆ. ಅಚ್ಚುತ್ ಪತ್ನಿ ಬೀನಾ ರೆಡ್ಡಿ ಕೂಡ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

ಇದೇ ರೀತಿ ಕೆಲ ತಿಂಗಳ ಹಿಂದೆ ಕೂಡ ಹೈದರಾಬಾದ್ ಮೂಲಕ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಕಾನ್ಸಾಸ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

Click to comment

Leave a Reply

Your email address will not be published. Required fields are marked *

www.publictv.in