ಇಂಗ್ಲೆಂಡಿಗೆ ಶಾಕ್‌ – ಅಫ್ಘಾನ್‌ ಗೆಲುವಿನ ಹಿಂದಿದೆ ಭಾರತದ ನೆರವು

Public TV
2 Min Read
india afghanistan

ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಇಂಗ್ಲೆಂಡ್‌ (England) ವಿರುದ್ಧ 69 ರನ್‌ಗಳ ಗೆಲುವು ಸಾಧಿಸಿದ ಅಫ್ಘಾನಿಸ್ತಾನ (Afghanistan) ತಂಡದ ಸಾಧನೆಯ ಹಿಂದೆ ಬಿಸಿಸಿಐ (BCCI) ಪಾಲಿದೆ.

ಹೌದು. ಆಂತರಿಕ ಕಿತ್ತಾಟದಿಂದ ನಲುಗಿ ಹೋಗಿದ್ದ ಅಫ್ಘಾನಿಸ್ತಾನಕ್ಕೆ ಆರ್ಥಿಕ ಸಹಕಾರ ನೀಡಿ ಆಟಗಾರರನ್ನು ಬಿಸಿಸಿಐ ಪ್ರೋತ್ಸಾಹಿಸಿದ ಪರಿಣಾಮ ಕ್ರಿಕೆಟ್‌ ಟೂರ್ನಿಗಳಲ್ಲಿ ಅಫ್ಘಾನ್‌ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಈ ಹಿಂದೆ ಪಾಕಿಸ್ತಾನದಲ್ಲಿ (Pakistan) ಅಫ್ಘಾನಿಸ್ತಾನ ತಂಡಕ್ಕೆ ತರಬೇತಿ ಸಿಕ್ಕಿತ್ತು. ಆದರೆ ತರಬೇತಿ ಅಷ್ಟೇನು ಚೆನ್ನಾಗಿ ಸಿಗದ ಕಾರಣ ಬಿಸಿಸಿಐ 2015ರಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ನೆರವು ನೀಡಲು ಆರಂಭಿಸಿತು. ಗ್ರೇಟರ್‌ ನೋಯ್ಡಾದಲ್ಲಿರುವ ವಿಜಯ್‌ ಸಿಂಗ್‌ ಸ್ಫೋರ್ಟ್ಸ್‌ ಕಾಂಪ್ಲೆಕ್ಸ್‌ ಅಫ್ಘಾನಿಸ್ತಾನದ ಹೋಮ್‌ ಗ್ರೌಂಡ್‌ ಆಗಿತ್ತು. ಶಾರ್ಜಾದಿಂದ ನೋಯ್ಡಾಕ್ಕೆ ಶಿಫ್ಟ್‌ ಆಗಿದ್ದ ಅಫ್ಘಾನಿಸ್ತಾನ 2017ರಲ್ಲಿ ಗ್ರೇಟರ್‌ ನೋಯ್ಡಾದಲ್ಲೇ ಐರ್ಲೆಂಡ್‌ ವಿರುದ್ಧ ಸರಣಿ ಆಡಿತ್ತು.

 

ಅಫ್ಘಾನಿಸ್ತಾನ ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಸಹ ಆಯೋಜಿಸಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರರಾದ ಲಾಲ್‌ಚಂದ್‌ ರಜಪುತ್‌ ಮತ್ತು ಮನೋಜ್‌ ಪ್ರಭಾಕರ್‌ ಅವರು ಕೋಚ್‌ ಆಗಿ ಮಾರ್ಗದರ್ಶನ ಸಹ ನೀಡಿದ್ದರು. ಸಂಬಂಧ ಮತ್ತಷ್ಟು ಉತ್ತಮವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ ಪಂದ್ಯಕ್ಕೆ ಬಿಸಿಸಿಐ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್‌ ಘನಿ ಅವರನ್ನು ಆಹ್ವಾನಿಸಿತ್ತು. ಅಂದು ಅಶ್ರಫ್‌ ಘನಿ ಟ್ವೀಟ್‌ ಮಾಡಿ ಅಫ್ಘಾನ್‌ ಆಟಗಾರರಿಗೆ ತಮ್ಮ ಕೌಶಲ್ಯವನ್ನು ತೋರಿಸಲು ವೇದಿಕೆಯನ್ನು ನೀಡಿದ್ದಕ್ಕಾಗಿ ನಾನು ನಮ್ಮ ಭಾರತೀಯ ಸ್ನೇಹಿತರಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದು ಪ್ರಧಾನಿ ನರೇದ್ರ ಮೋದಿ ಅವರಿಗೆ ಟ್ಯಾಗ್‌ ಮಾಡಿದ್ದರು. ಇದನ್ನೂ ಓದಿ: ಸಿಕ್ಸರ್ ಗುಟ್ಟು ಬಿಚ್ಚಿಟ್ಟ ರೋಹಿತ್ ಶರ್ಮಾ

ಭಾರತ ಸರ್ಕಾರ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಲು 1 ಮಿಲಿಯನ್‌ ಡಾಲರ್‌ ನೀಡಿತ್ತು. ಈ ಹಣದಲ್ಲಿ ಕಂದಹಾರ್‌ನಲ್ಲಿ ನಿರ್ಮಾಣವಾದ ಕ್ರಿಕೆಟ್‌ ಕ್ರೀಡಾಂಗಣವನ್ನು ಭಾರತದ ರಾಯಭಾರ 2018ರ ಏಪ್ರಿಲ್‌ನಲ್ಲಿ ಉದ್ಘಾಟಿಸಿದ್ದರು. ಸ್ನೇಹದ ಭಾಗವಾಗಿ 2019ರಲ್ಲಿ ಅಮುಲ್‌ ಕಂಪನಿ ಅಫ್ಘಾನಿಸ್ತಾನದ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡಿದೆ. ಕಳೆದ 2 ದಶಕಗಳಿಂದ ಅಮುಲ್ ತನ್ನ ಹಾಲಿನ ಪುಡಿ ಮತ್ತು ಮಗುವಿನ ಆಹಾರವನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುತ್ತಿದೆ.

ಐಪಿಎಲ್‌ನಲ್ಲಿ ಪಾಕ್‌ ಆಟಗಾರರಿಗೆ ನಿರ್ಬಂಧವಿದ್ದರೆ ಅಫ್ಘಾನ್‌ ಆಟಗಾರರು ಬಿಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅದರಲ್ಲೂ ಸ್ಪಿನ್ನರ್‌ ರಶೀದ್‌ ಖಾನ್‌ ಅವರಿಗೆ ಭಾರತದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಹಿಂದೆ ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ರಶೀದ್‌ ಖಾನ್‌ ಅವರು ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದರು. ದೆಹಲಿಯಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದ ವೇಳೆ ಅಫ್ಘಾನಿಸ್ತಾನ ತಂಡವನ್ನು ಅಭಿಮಾನಿಗಳು ಹುರಿದುಂಬಿಸಿದ್ದರು. ಪ್ರೇಕ್ಷಕರ ಅಭಿಮಾನಕ್ಕೆ ರಶೀದ್‌ ಖಾನ್‌ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

 

Web Stories

Share This Article