ಚಾಮರಾಜನಗರ: ಸಾಲ ಪಡೆದ ರೈತರು ಮತ್ತು ಗ್ರಾಹಕರಿಗೆ ಇಂಡಿಯನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಶ್ರೀಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿ, ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸೊಸೈಟಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಿಬಿಐ ತನಿಖೆ ನಡೆಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
Advertisement
ಕೂಲಿ ಕಾರ್ಮಿಕರು, ವರ್ತಕರು, ಮಹಿಳೆಯರು, ರೈತರು ಹಾಗೂ ಉದ್ಯಮಿಗಳು ಸೇರಿದಂತೆ ಅಂದಾಜು 900 ಗ್ರಾಹಕರಿಗೆ 1 ರಿಂದ 50 ಲಕ್ಷ ರೂ.ವರೆಗೆ ದೈನಂದಿನ ಸಾಲವನ್ನು ಸೊಸೈಟಿ ವಿತರಿಸಿದೆ. 1 ಲಕ್ಷ ರೂ.ಗೆ 18 ಸಾವಿರ ರೂ., 5 ಲಕ್ಷ ರೂ.ಗೆ 90 ಸಾವಿರ ರೂ.ಹಣವನ್ನು ಠೇವಣಿ ಇರಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಸೂಕ್ತ ರಶೀದಿಯನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಗ್ರಾಹಕರಿಗೆ ಸಾಲ ಕೊಡುವಾಗ 4 ಖಾಲಿ ಚೆಕ್, ಸೇರಿದಂತೆ ದಾಖಲಾತಿಗಳನ್ನು ಪಡೆಯುತ್ತಾರೆ. ಸಾಲ ಮರುಪಾವತಿ ಮಾಡಿರುವ ಗ್ರಾಹಕರಿಗೆ ಮಾತ್ರ ಯಾವುದೇ ರಶೀದಿ ನೀಡುತ್ತಿಲ್ಲ. ಸಾಲಗಾರರಿಗೆ ರೌಡಿಗಳನ್ನು ಬಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
ಸಹಕಾರಿ ಬ್ಯಾಂಕ್ ವಿರುದ್ಧ ಧರಣಿ ನಡಿಸಿದ ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಸೊಸೈಟಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪ್ರಶಾಂತ್, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಕೂಸ್ಲೂರು ಗ್ರಾಪಂ ಸದಸ್ಯ ಮಹದೇವಸ್ವಾಮಿ, ಕಾಂಗ್ರೆಸ್ ಮುಖಂಡ ಸಿ.ಆರ್.ಮಹೇಶ್, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಜಿ.ಎಂ.ಶಂಕರ್ ಹಾಗೂ ಇತರರು ಭಾಗವಹಿಸಿದ್ದರು.