ನವದೆಹಲಿ: ಗಲ್ವಾನ್‌ನಲ್ಲಿ ಭಾರತೀಯ ಯೋಧರಿಂದ(Indian Army) ಪೆಟ್ಟು ತಿಂದಿದ್ದ ಚೀನಾ(China) ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದೆ. ಅರುಣಾಚಲ ಪ್ರದೇಶದ(Arunachal Pradesh) ಗಡಿ ವಾಸ್ತವ ರೇಖೆ(LAC) ಬಳಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಬಡಿದಾಟ ನಡೆದಿದೆ.
ತವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9ರ ಬೆಳಗ್ಗೆ ಗಡಿ ಕಾಯುತ್ತಿದ್ದ ಭಾರತ ಸೈನಿಕರನ್ನು ಚೀನಿ ಯೋಧರು ಕೆಣಕಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಸೈನಿಕರು ತಿರುಗೇಟು ನೀಡಿದ್ದು, ಎರಡು ಕಡೆ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಎರಡು ಕಡೆಯಲ್ಲೂ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಸಂಘರ್ಷಕ್ಕೆಂದು 300 ಸೈನಿಕರೊಂದಿಗೆ ಚೀನಾ ಪಡೆ ತಯಾರಾಗಿ ಬಂದಿತ್ತು. ದಿಢೀರ್ ದಾಳಿಯಿಂದ ಕ್ಷಣ ಕಾಲ ಭಾರತೀಯ ಸೇನೆ ತಬ್ಬಿಬ್ಬಾದರೂ ತಕ್ಷಣವೇ ಚೇತರಿಸಿಕೊಂಡು ದಿಟ್ಟ ಪ್ರತ್ಯುತ್ತರ ನೀಡಿತು. ಪರಸ್ಪರ ಕಲ್ಲು ತೂರಾಟಗಳು ನಡೆದಿವೆ.
ಭಾರತೀಯರ ಯೋಧರ ಶೌರ್ಯಕ್ಕೆ ಬೆಚ್ಚಿಬಿದ್ದ ಚೀನಾಸೇನೆ, ಸಂಘಷದಿಂದ ಹಿಂದಡಿಯಿಟ್ಟಿದೆ. ಕೊನೆಗೆ ಉಭಯ ಸೇನೆಗಳು ಸಂಘರ್ಷ ಸ್ಥಳವನ್ನು ತೊರೆದಿವೆ. ಗಾಯಗೊಂಡವರ ಪೈಕಿ ಭಾರತೀಯ ಯೋಧರಿಗಿಂತ ಚೀನಾ ಯೋಧರೇ ಜಾಸ್ತಿ ಎಂದು ತಿಳಿದುಬಂದಿದೆ. ಭಾರತ ಸೇನೆಯ ಗಾಯಾಳು ಯೋಧರನ್ನು ಗುವಾಹಟಿಯ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ಪ್ರದೇಶದಲ್ಲಿ ಭಾರತೀಯ ಯೋಧರು ಚೀನಾ ಸೈನಿಕರನ್ನು ತಡೆದಿದ್ದರು. ಸುಮಾರು 200 ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರನ್ನು ತಡೆದ ಭಾರತ ಹಿಂದಕ್ಕೆ ಕಳುಹಿಸಿತ್ತು. ಗಲ್ವಾನ್‌ನಲ್ಲಿ(Galwan Clash )ನಡೆದ ಘರ್ಷಣೆಯ ಎಲ್‌ಎಸಿ ಬಳಿ ದೊಡ್ಡ ಮಟ್ಟದ ಘರ್ಷಣೆ ನಡೆದಿರಲಿಲ್ಲ. ಈಗ ಮತ್ತೆ ಚೀನಾ ತನ್ನ ಕಿರಿಕ್ ಬುದ್ಧಿಯನ್ನು ಪ್ರದರ್ಶಿಸಿದೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು. ನಿಜವಾಗಿ ಅಂದು ಏನಾಗಿತ್ತು?
ಗಲ್ವಾನ್‌ನಲ್ಲಿ ಏನಾಗಿತ್ತು?
ಭಾರತೀಯ ಸೈನಿಕರು 2020 ಜೂನ್ 15ರ ರಾತ್ರಿ ಗಲ್ವಾನ್ ಕಣಿವೆಯ ಎಲ್‌ಎಸಿ ಜಾಗಕ್ಕೆ ತೆರಳಿ ಚೀನಾ ಅಕ್ರಮವಾಗಿ ನಿರ್ಮಿಸಿದ್ದ ಟೆಂಟ್ ಕಿತ್ತು ಎಸೆದಿದ್ದರು. ಈ ವೇಳೆ ಚೀನಾದ ಕರ್ನಲ್ ಕಿ ಫಾಬಾವೊ ಮತ್ತು 150 ಸೈನಿಕರು ಭಾರತೀಯ ಸೈನಿಕರೊಂದಿಗೆ ಸಮಸ್ಯೆಯನ್ನು ಚರ್ಚಿಸುವ ಬದಲು ಘರ್ಷಣೆಗೆ ಇಳಿದಿದ್ದರು.
ಭಾರತೀಯ ಸೇನೆಯೂ ಇದಕ್ಕೆ ಪ್ರತಿದಾಳಿ ನಡೆಸಿತ್ತು. ಭಾರತದ ಸೇನೆಯ ಅನಿರೀಕ್ಷಿತ ದಾಳಿಯಿಂದ ಪಾರಾಗಲು ಗಲ್ವಾನ್ ನದಿಯನ್ನು ರಾತ್ರಿ ದಾಟುವ ವೇಳೆ ಕನಿಷ್ಠ 38 ಚೀನಿ ಸೈನಿಕರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಚೀನಾ ಇಲ್ಲಿಯವರೆಗೂ ಎಷ್ಟು ತನ್ನ ಸೈನಿಕರು ಸಾವನ್ನಪ್ಪಿದ್ದಾರೆ ಎಂಬುದನ್ನು ಅಧಿಕೃತವಾಗಿ ತಿಳಿಸಿಲ್ಲ.
ಲಡಾಖ್ ಗಡಿಯಲ್ಲಿ ಜೂನ್ 15 ರಂದು ನಡೆದ ಗರ್ಷಣೆಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಹೇಳಿತ್ತು. ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಹೇಳಿತ್ತು.